ಹೆತ್ತೂರು: ಯಸಳೂರು ಹೋಬಳಿಯ ತಂಬಲಗೇರಿ ಗ್ರಾಮದ ರಮೇಶ್ ಅವರ ಮನೆಯ ಸಮೀಪ ಕಾಣಿಸಿಕೊಂಡಿದ್ದ 12 ಅಡಿ ಉದ್ದದ, 8 ಕೆ.ಜಿ. ತೂಕದ ಕಾಳಿಂಗ ಸರ್ಪವನ್ನು ಹಿಡಿದು, ರಕ್ಷಿತಾರಣ್ಯಕ್ಕೆ ಬಿಡಲಾಗಿದೆ.
ಹಾವನ್ನು ನೋಡಿದ ಮನೆಯವರು, ಭಯಗೊಂಡ ತಕ್ಷಣ ಯಸಳೂರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದರು. ಯಸಳೂರು ಅರಣ್ಯ ಇಲಾಖೆ ವಲಯ ಅರಣ್ಯಧಿಕಾರಿ ಕೃಷ್ಣ ನೇತೃತ್ವದಲ್ಲಿ ಸೋಮವಾರಪೇಟೆಯ ಉರಗ ಪ್ರೇಮಿ ರಘು ಅವರನ್ನು ಕರೆಸಿ, ಒಂದು ಗಂಟೆ ಕಾರ್ಯಾಚರಣೆ ನಡೆಸಿ ಸರ್ಪವನ್ನು ಸೆರೆ ಹಿಡಿದರು. ನಂತರ ಬಿಸಲೆ ಅರಣ್ಯ ವಲಯಕ್ಕೆ ಬಿಡಲಾಯಿತು.
ಕಾರ್ಯಾಚರಣೆಯಲ್ಲಿ ಉಪವಲಯ ಅರಣ್ಯಾಧಿಕಾರಿ ದಯಾನಂದ, ಅರಣ್ಯ ರಕ್ಷಕರಾದ ರಂಜಿತ್ ಬಿ.ಡಿ., ಸುನಿಲ್ ಬಿ.ವಿ., ಅಖಿಲ್ ಗೌಡ ಪಾಲ್ಗೊಂಡಿದ್ದರು. ಉರಗ ಪ್ರೇಮಿಗಳ ತ್ವರಿತ ಪ್ರತಿಕ್ರಿಯೆ ಹಾಗೂ ಅರಣ್ಯ ಇಲಾಖೆಯ ಜಾಗ್ರತೆಯಿಂದಾಗಿ ಗ್ರಾಮಸ್ಥರು ನಿಟ್ಟುಸಿರು ಬಿಟ್ಟಿದ್ದಾರೆ.
ಪದೇ ಪದೆ ಮಲೆನಾಡು ವ್ಯಾಪ್ತಿಯಲ್ಲಿ ಕಾಣಿಸಿಕೊಳ್ಳುತ್ತಿರುವ ಕಾಳಿಂಗ ಸರ್ಪಗಳು ಭಯ ಉಂಟು ಮಾಡುತ್ತಿವೆ. ಈ ಹಾವುಗಳು ಎಲ್ಲಿಂದ ಬರುತ್ತಿವೆ? ಯಾರು ತಂದು ಬಿಡುತ್ತಿದ್ದಾರೆ? ಎಂಬುದರ ಬಗ್ಗೆ ಗಮನ ಹರಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.