ADVERTISEMENT

ಬಿಜೆಪಿಯವರ ಪ್ರಚೋದನೆಯೇ ಕಾರಣ: ಶಾಸಕ ಕೆ.ಎಂ. ಶಿವಲಿಂಗೇಗೌಡ ಬೇಸರ

ಅವರು ಮಾತನಾಡಿದ್ದು ಚಿತ್ರೀಕರಣವಾಗಿಲ್ಲ: ಶಾಸಕ ಕೆ.ಎಂ. ಶಿವಲಿಂಗೇಗೌಡ ಬೇಸರ

​ಪ್ರಜಾವಾಣಿ ವಾರ್ತೆ
Published 7 ಫೆಬ್ರುವರಿ 2026, 4:57 IST
Last Updated 7 ಫೆಬ್ರುವರಿ 2026, 4:57 IST
ಕೆ.ಎಂ.ಶಿವಲಿಂಗೇಗೌಡ
ಕೆ.ಎಂ.ಶಿವಲಿಂಗೇಗೌಡ   

ಅರಸೀಕೆರೆ: 'ಸದನದಲ್ಲಿ ನಾನು ಆವೇಶಭರಿತನಾಗಿ ಮಾತನಾಡುವುದಕ್ಕೆ ಕಾರಣ ಬೇರೆಯೇ ಇದೆ. ಬಿಜೆಪಿಯವರು ನನ್ನನ್ನು ಪ್ರಚೋದನೆ ಮಾಡಿದರು’ ಎಂದು ಸ್ಥಳೀಯ ಶಾಸಕ ಕೆ.ಎಂ. ಶಿವಲಿಂಗೇಗೌಡ ಸ್ಪಷ್ಟನೆ ನೀಡಿದರು.

ನಗರದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಸದನದ ಘಟನಾವಳಿಗಳ ವಿಡಿಯೋ ಬಿಡುಗಡೆ ಮಾಡಿ ಮಾತನಾಡಿದ ಅವರು, ‘ನನ್ನ ಭಾಷಣದ ವೇಳೆ ನನ್ನ ಬಗ್ಗೆ ಅವ್ಯಾಚ್ಯವಾಗಿ ಮಾತನಾಡಿದರು. ಅಲ್ಲಿ ನಡೆದಿರುವ ವಾಸ್ತವವೇ ಬೇರೆ. ಸದನದಲ್ಲಿ ನನ್ನನ್ನು ಬಿಜೆಪಿಯವರು ಪ್ರಚೋದನೆ ಮಾಡಿದರು. ನಾನು ಸಾಕಷ್ಟು ಸಮಾಧಾನದಿಂದಲೇ ಇದ್ದೆ. ಅವರು ಅಷ್ಟೊಂದು ಅವ್ಯಾಚ್ಯವಾಗಿ, ಅಶ್ಲೀಲವಾಗಿ ಮಾತನಾಡಿದರು. ಆದರೆ ಅವೆಲ್ಲಾ ರೆಕಾರ್ಡ್ ಆಗಿಲ್ಲ. ನಾನು ಮಾತನಾಡಿದ್ದು ಮಾತ್ರ ರೆಕಾರ್ಡ್ ಆಗಿದೆ’ ಎಂದು ಬೇಸರ ಹೊರ ಹಾಕಿದರು.

‘ಅವರು ನಡೆದುಕೊಂಡ ರೀತಿ ಸಹಿಸುವಂಥದಲ್ಲ. ನಾನು ಯಾವಾಗ ಮಾತನಾಡಲು ನಿಂತಾಗ ನಾನು ಮಾತನಾಡಿದ್ದಷ್ಟೇ ಪ್ರಚಾರ ಆಗಿದೆ. ಅವರು ಮಾತನಾಡಿದ್ದು ಬಂದಿಲ್ಲ. ಟಿವಿಯವರು ಸದನದ ಒಳಗೆ ಇದ್ದಿದ್ರೆ ಹೀಗೆ ಆಗುತ್ತಿರಲಿಲ್ಲ. ಓವಿ ಕ್ಯಾಮೆರಾ ಒಳಗೆ ಇದ್ದಿದ್ದರೆ, ವಿಪಕ್ಷದವರು ಮಾತನಾಡಿದ್ದೂ ಹೊರ ಬರುತ್ತಿತ್ತು ’ ಎಂದರು.

ADVERTISEMENT

‘ಬಿಜೆಪಿಯವರು ಅಶ್ಲೀಲ ಪದ ಬಳಕೆಗೆ ನಾನೂ ಸ್ವಲ್ಪ ಪ್ರಚೋದನೆಗೊಂಡಿದ್ದೇನೆ. ಬಿಜೆಪಿಯವರು ನನ್ನ ಮೇಲೆ ಏಕೆ ಇಷ್ಟೊಂದು ಜಿದ್ದು ಸಾಧಿಸುತ್ತಿದ್ದಾರೆ. ನಾನು ಪಕ್ಷ ಬದಲಾಯಿಸಿದರೆ ಇವರಿಗೇನು? ನಾನು ಮಾಡಿರುವ ಮಹಾಪರಾಧವೇನು? ನಾನೇನಾದರೂ ಜೆಡಿಎಸ್‌ ಚಿಹ್ನೆಯಡಿ ಗೆದ್ದು ಪಕ್ಷ ಬಿಟ್ಟು ಹೋಗಿದ್ದೇನಾ? ಹಾಗೆ ಮಾಡಿದ್ದರೆ ಮೋಸ ಮಾಡಿದ್ದೇನೆ ಅನ್ನಬಹುದು’ ಎಂದು ತಿಳಿಸಿದರು.

‘ವಿಪಕ್ಷ ನಾಯಕರು ಏಕೆ ಹೀಗೆ ಮಾಡಿಸುತ್ತಿದ್ದಾರೆ? ನಾನು ಹಾಗೆ ಮಾಡಿದ್ದರೆ ನನ್ನ ವಿರುದ್ಧ ನಿಯಮಾವಳಿ ತಂದು ತನಿಖೆ ಮಾಡಲಿ, ಅದನ್ನು ಬಿಟ್ಟು ನನ್ನೊಬ್ಬನ ಮೇಲೆ ಏಕೆ ಬರುತ್ತಾರೆ’ ಎಂದು ಕೇಳಿದರು.

‘ಮುಂದೆ ಚುನಾವಣೆಗೆ ನಿಲ್ಲುವುದು ನನಗೆ ಬಿಟ್ಟ ವಿಚಾರ, ಈ ವಿಚಾರ ರಾಜ್ಯದ ಜನತೆಗೆ ಗೊತ್ತಾಗಬೇಕು, ನನ್ನ ವಿರುದ್ಧ ಹೇಗೆ ಪ್ರಚೋದನೆ ಮಾಡಿದ್ರು ಅನ್ನೋದು ಹೊರಗೆ ಬಂದಿಲ್ಲ. ನನಗೆ ಸಿಕ್ಕಷ್ಟು ತುಣುಕು ನಾನು ಬಿಡುಗಡೆ ಮಾಡಿದ್ದೇನೆ. ನನ್ನ ಬೈದ್ರೂ ಒಂದೇ, ನನ್ನ ಕ್ಷೇತ್ರದ ಜನರ ಬೈಯ್ಯೋದು ಒಂದೇ’ ಎಂದರು.

ಸಲಗರ ಅವರ ಹೆಂಡತಿ ತಹಶೀಲ್ದಾರ್ ಎಂದು ಯಾರೋ ಹೇಳಿದರು. ಅದರಿಂದ ನಾನು ಅವರಿಗೆ ನಿನ್ನ ಹೆಂಡತಿ ತಹಶೀಲ್ದಾರ್ ಆಗಿದ್ದಕ್ಕೆ ನೀನು ಗೆದ್ದಿದ್ದೀಯ ಎಂದು ಹೇಳಿದ್ದೇನೆ. ಅದನ್ನು ಬಿಟ್ಟು ಬೇರೆ ದುರುದ್ದೇಶ ಇಲ್ಲ
ಕೆ.ಎಂ. ಶಿವಲಿಂಗೇಗೌಡ ಶಾಸಕ

‘ನಾನು ಹಳ್ಳಿ ಭಾಷೆಯಲ್ಲಿ ಮಾತನಾಡಿದ್ದೇನಷ್ಟೇ’

ಪ್ರಿಯಾಂಕ ಖರ್ಗೆ 1 ಗಂಟೆ ಭಾಷಣ ಮಾಡಿದರು. ಆ ವೇಳೆ ಕಾಂಗ್ರೆಸ್‌ ಅನ್ನು ಬೈದರೇ ಹೊರತು ಪ್ರಿಯಾಂಕ್ ಬಗ್ಗೆ ಮಾತನಾಡಿಲ್ಲ. ಆದರೆ ನನ್ನ ಏಕೆ ಇಷ್ಟೊಂದು ದ್ವೇಷ ಮಾಡುತ್ತಿದ್ದಾರೆ? ನಾನು ಹಳ್ಳಿ ಭಾಷೆಯಲ್ಲಿ ಮಾತನಾಡಿದ್ದೇನೆ ಅಷ್ಟೇ ಎಂದು ಎಂದು ಶಿವಲಿಂಗೇಗೌಡ ಸಮಜಾಯಿಷಿ ನೀಡಿದರು. ಧರಣಿ ಕುಳಿತು ಆ ಧರಣಿಯ ಅರ್ಥವನ್ನೂ ಹಾಳು ಮಾಡಿದ್ದಾರೆ. ಅಹೋರಾತ್ರಿ ಧರಣಿ ಮಾಡಿ ಸದನದಲ್ಲಿ ಡ್ಯಾನ್ಸ್ ಮಾಡೋದಾ ಎಂದ ಅವರು ಪದಗಳ ಬಳಕೆ ಬಗ್ಗೆ ನನಗೇ ಬೇಜಾರಿದೆ. ಜನಕ್ಕೂ ಬೇಜಾರಿದೆ. ಆದರೆ ಅಸಂಬದ್ದವಾಗಿ ಬೈದಾಗ ಏನು ಮಾಡಬೇಕು? ನಾನು ಕೂಡ ಮನುಷ್ಯ ಅಲ್ವಾ? ಇಲ್ಲಿವರೆಗೂ ನಾನು ಮಾತನಾಡಿದ್ದು ಪ್ರಸಾರ ಆಗುತ್ತಿದೆ. ಅವರು ಮಾತನಾಡಿದ್ದನ್ನು ನಾನೀಗ ತೋರಿಸಿದ್ದೇನೆ ಎಂದರು. ನಾನು ಹೆಣ್ಣುಮಗಳ ಬಗ್ಗೆ ಮಾತನಾಡಿದ್ದಕ್ಕೆ ನಮಸ್ಕಾರ ಮಾಡಿ ಕ್ಷಮೆ ಕೇಳುವೆ ಆದ್ರೆ ಅವರೆಲ್ಲ ನನ್ನ ಮೇಲೆ ಮಾತನಾಡಿರುವುದಕ್ಕೆ ಏನು ಮಾಡುತ್ತಾರೆ? ನನಗೂ ನ್ಯಾಯ ಬೇಕು ಎಂದು ಆಗ್ರಹಿಸಿದರು.

‘ಪ್ರತಿ ಬಾರಿಯೂ ನನಗೆ ಅಡ್ಡಿ’

ಪ್ರತಿಬಾರಿಯೂ ನಾನು ಮಾತನಾಡುವಾಗ ವೇದವ್ಯಾಸ ಕಾಮತ್. ಶರಣು ಸಲಗಾರ್, ಸುರೇಶ್ ಗೌಡರ ಗುಂಪು ಸಾಕಷ್ಟು ತೊಂದರೆ ಕೊಡುತ್ತಿತ್ತು. ನಾನೂ ಬುದ್ದಿ ಹೇಳಿಕೊಂಡು ಬರುತ್ತಿದೆ. ಅಧಿವೇಶನ ಮುಗಿದ ಮೇಲೆ ಯಾಕಪ್ಪ ಹೀಗೆ ಮಾಡ್ತೀರಾ ಅಂದ್ರೆ ನಾವು ಆರ್‌ಎಸ್‌ಎಸ್‌ನವರು ಎಂದರು.

ನಾನು ಅದಕ್ಕೆ ಅವರಿಗೆ ಆರ್‌ಎಸ್‌ಎಸ್ ಎಂದು ಕರೆದಿದ್ದು ಬೇರೆ ಯಾರಿಗೂ ಹೇಳಿಲ್ಲ ಎಂದು ಶಿವಲಿಂಗೇಗೌಡ ತಿಳಿಸಿದರು. ನಾನೇಕೆ ಆರ್‌ಎಸ್‌ಎಸ್ ಬಗ್ಗೆ ಬಯ್ಯಲಿ. ನಾನು ಅವರನ್ನು ಆರ್‌ಎಸ್‌ಎಸ್ ಅಂತ ಕರೆಯುತ್ತಿದ್ದೆ. ನನ್ನನ್ನು ಅಂಥ ಕಳ್ಳ ಇಂಥ ಕಳ್ಳ ಎಂದು ಕೂಗಿದರು. ಅವರು ಅಬಕಾರಿ ಸಚಿವರ ವಿರುದ್ಧ ಪ್ರತಿಭಟನೆ ಮಾಡುತ್ತಿದ್ದರು. ಅವರ ಮೇಲೆ ಕೂಗಾಡಲಿ ಆರೋಪ ಸಾಬೀತು ಮಾಡಲಿ. ಅದನ್ನು ಬಿಟ್ಟು ನನ್ನನ್ನು ಏಕೆ ಗುರಿ ಮಾಡಿದರು ಎಂದು ಪ್ರಶ್ನಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.