
ಕೊಣನೂರು(ಹಾಸನ): ಹಸುವನ್ನು ಮಾರಿ ಶುಲ್ಕ ಪಾವತಿಸಿ, ಮಾಹಿತಿ ಹಕ್ಕು ಕಾಯ್ದೆಯಡಿ ಸುಮಾರು 16,170 ಪುಟಗಳ ದಾಖಲಾತಿ ಪಡೆದ ರಾಮನಾಥಪುರ ಹೋಬಳಿಯ ಬಸವನಹಳ್ಳಿಯ ರೈತ ಬಿ.ಎಸ್. ರವಿ, ಅವುಗಳನ್ನು ಗ್ರಾಮದ ಅಂಚೆ ಕಚೇರಿಯಿಂದ ಗುರುವಾರ ಎತ್ತಿನಗಾಡಿಯಲ್ಲಿ ಮನೆಗೆ ಸಾಗಿಸಿದರು.
2020 ರಿಂದ 2025 ರವರೆಗೆ 15 ನೇ ಹಣಕಾಸು ಯೋಜನೆಯಡಿ ನಡೆದಿರುವ ಕಾಮಗಾರಿಗಳ ವಿವರಗಳನ್ನು ನೀಡುವಂತೆ ಕಾಳೇನಹಳ್ಳಿ ಗ್ರಾಮ ಪಂಚಾಯಿತಿಗೆ ಅವರು ಅರ್ಜಿ ಸಲ್ಲಿಸಿದ್ದರು. ಪರಿಶಿಷ್ಟ ಜಾತಿ, ಪಂಗಡದವರಿಗೆ ಹಾಗೂ ಅಂಗವಿಕಲರಿಗೆ ನೀಡಿದ ಅನುದಾನದ ವಿವರ ಕೋರಿದ್ದರು.
ಪ್ರತಿಯಾಗಿ ನೋಟಿಸ್ ನೀಡಿದ್ದ ಪಿಡಿಒ, ಕಡತಗಳನ್ನು ಪರಿಶೀಲಿಸಲು ತಿಳಿಸಿದ್ದರು. ಬಳಿಕ, ದಾಖಲೆಗಳು 16,370 ಪುಟಗಳಿದ್ದು, ಪ್ರತಿ ಪುಟಕ್ಕೆ ₹ 2 ರಂತೆ ₹ 32,340 ಶುಲ್ಕವನ್ನು ಡಿಡಿ ಮೂಲಕ ಪಾವತಿಸಲು ಸೂಚಿಸಿದ್ದರು. ತಮ್ಮ ಸಿಂಧಿ ಹಸುವನ್ನು ₹25 ಸಾವಿರಕ್ಕೆ ಮಾರಾಟ ಮಾಡಿದ್ದ ರವಿ, ಉಳಿದ ಹಣವನ್ನು ಸ್ನೇಹಿತರ ಬಳಿ ಪಡೆದು, ಡಿಡಿ ಮೂಲಕ ಪಂಚಾಯಿತಿಗೆ ಪಾವತಿಸಿದ್ದರು. ನಂತರ ದಾಖಲೆಗಳನ್ನು ಅಂಚೆ ಮೂಲಕ ರವಾನಿಸಲಾಗಿತ್ತು.
ಈ ಕುರಿತು ‘ಪ್ರಜಾವಾಣಿ’ ಜೊತೆ ಮಾತನಾಡಿದ ಅವರು, ‘ಕೊಟ್ಟಿಗೆ ಮಂಜೂರು ಮಾಡುವಂತೆ ಸಲ್ಲಿಸಿದ್ದ ನನ್ನ ಅರ್ಜಿಯನ್ನು ಪಂಚಾಯಿತಿಯು ತಿರಸ್ಕರಿಸಿತ್ತು. ಆದರೆ, ಬೇರೆಯವರಿಗೆ ಮಂಜೂರು ಮಾಡಿತ್ತು. ಆ ಬಗ್ಗೆ ದಾಖಲೆಗಳನ್ನು ಒದಗಿಸುವಂತೆ ಅರ್ಜಿ ಸಲ್ಲಿಸಿದ್ದೆ. ದಾಖಲೆಗಳನ್ನು ಕೂಲಂಕಷವಾಗಿ ಪರಿಶೀಲಿಸುತ್ತೇನೆ. ತಿಳಿದವರಿಗೂ ತೋರಿಸುತ್ತೇನೆ. ಅವ್ಯವಹಾರ ಕಂಡು ಬಂದಲ್ಲಿ ದೂರು ನೀಡುತ್ತೇನೆ’ ಎಂದರು.
ಈ ಕುರಿತು ಪ್ರತಿಕ್ರಿಯೆ ಪಡೆಯಲು ಪಿಡಿಒ ಲೋಕೇಶ್ ಅವರನ್ನು ಸಂಪರ್ಕಿಸಲು ಯತ್ನಿಸಿದರೂ ಲಭ್ಯರಾಗಲಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.