
ಗಂಡಸಿ: ಪ್ರಸ್ತುತ ಶೈಕ್ಷಣಿಕ ವರ್ಷದಿಂದಲೇ ಹೋಬಳಿಯ ಗಂಡಸಿ ಹ್ಯಾಂಡ್ ಪೋಸ್ಟ್‌ನಲ್ಲಿ ಕರ್ನಾಟಕ ಪಬ್ಲಿಕ್ ಶಾಲೆ ಪ್ರಾರಂಭವಾಗಲಿದೆ ಎಂದು ಗೃಹ ಮಂಡಳಿ ಅಧ್ಯಕ್ಷ, ಶಾಸಕ ಕೆ.ಎಂ. ಶಿವಲಿಂಗೇಗೌಡ ತಿಳಿಸಿದರು.
ಹೋಬಳಿಯ ಪ್ರವಾಸಿ ಮಂದಿರದ ಬಳಿ ಮಂಗಳವಾರ ಲಾಳನಕೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ 10 ಹಳ್ಳಿಗಳಿಗೆ ₹ 16 ಕೋಟಿ ವೆಚ್ಚದ ವಿವಿಧ ಕಾಮಗಾರಿಗಳ ಭೂಮಿಪೂಜೆ ಮತ್ತು ಲಾಳನಕೆರೆ ಗ್ರಾಮ ಪಂಚಾಯಿತಿ ಮಟ್ಟದ ಜನಸಂಪರ್ಕ ಸಭೆ ಉದ್ಘಾಟಿಸಿ ಅವರು ಮಾತನಾಡಿದರು.
ಕರ್ನಾಟಕ ಪಬ್ಲಿಕ್ ಶಾಲೆಯ ಕಟ್ಟಡ ನಿರ್ಮಾಣಕ್ಕೆ ₹ 3.5 ಕೋಟಿ ಮಂಜೂರಾತಿ ದೊರೆತಿದ್ದು, ಸದ್ಯದಲ್ಲಿ ಕೆಲಸ ಪ್ರಾರಂಭವಾಗಲಿದೆ ಎಂದರು.
‘ರಾಷ್ಟ್ರೀಯ ಜಲಜೀವನ್ ಮಿಷನ್ ಯೋಜನೆ ಅಡಿ ₹ 750 ಕೋಟಿ ವೆಚ್ಚದಲ್ಲಿ ಅರಸೀಕೆರೆ ಕ್ಷೇತ್ರದ 535 ಹಳ್ಳಿಗಳಿಗೆ ಹೇಮಾವತಿ ನೀರನ್ನು ಒದಗಿಸಲಾಗುವುದು. ಗನ್ನಿಗಡ ಬಳಿಯಿಂದ ಪೈಪ್‌ಲೈನ್ ಮೂಲಕ ಹರಿಸಿ ಗಂಡಸಿ ಹ್ಯಾಂಡ್ ಪೋಸ್ಟ್ ಬಳಿ ಶುದ್ಧೀಕರಿಸಿ ಮನೆಗಳಿಗೆ ಹರಿಸುವ ಜವಾಬ್ದಾರಿಯನ್ನು ಮೇಘ ಕಂಪನಿ ಗುತ್ತಿಗೆ ನೀಡಲಾಗಿದೆ. ಕೆಲವು ಗ್ರಾಮಗಳಲ್ಲಿ ಪೈಪ್‌ಲೈನ್, ಟ್ಯಾಂಕ್ ಕಾಮಗಾರಿಗಳು ಕಳಪೆ ಆಗಿದ್ದು, ನ್ಯೂನತೆಗಳನ್ನು ಸರಿಪಡಿಸಬೇಕಾಗಿದೆ. ಅದಕ್ಕಾಗಿ ಸರ್ಕಾರದಿಂದ ಗುತ್ತಿಗೆದಾರರಿಗೆ ನೀಡಬೇಕಾಗಿರುವ ₹ 73 ಕೋಟಿ ತಡೆ ಹಿಡಿಯಲಾಗಿದೆ. ಪಿಡಿಒಗಳು ಕಾಮಗಾರಿ ಗುಣಮಟ್ಟ ಪರೀಕ್ಷಿಸಿ, ಸರಿ ಇದೆ ಎಂದು ಖಾತರಿ ಪಡಿಸಿದ ನಂತರ ಬಿಲ್ ಪಾವತಿಸಲು ತೀರ್ಮಾನಿಸಲಾಗುವುದು’ ಎಂದರು.
ಪ್ರತಿ ಗ್ರಾಮದಲ್ಲೂ ಶುದ್ಧ ಕುಡಿಯುವ ನೀರು, ಬೋರವೆಲ್ ನೀರು ಹರಿಸುವಾಗ ಪ್ರತ್ಯೇಕ ಧ್ವನಿಯ ಸೈರನ್ ವ್ಯವಸ್ಥೆ ಮಾಡಲಾಗುವುದು ಎಂದರು.
ತಹಶೀಲ್ದಾರ್ ಸಂತೋಷ್ ಕುಮಾರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೆಟ್ರೋ ಬಾಬು, ತಾಲ್ಲೂಕು ಪಂಚಾಯತಿ ಮಾಜಿ ಸದಸ್ಯರಾದ ಆಗ್ರೋ ಬಾಬು, ಈಶ್ವರಪ್ಪ, ಯರಗನಾಳು ಮಲ್ಲೇಶ್, ನಾಗರಹಳ್ಳಿ ಕೃಷ್ಣೇಗೌಡ, ಎಪಿಎಂಸಿ ಮಾಜಿ ಸದಸ್ಯರಾದ ರಾಮಚಂದ್ರು, ಜಯರಾಮ್, ಕಾಂಗ್ರೆಸ್ ಮುಖಂಡರಾದ ವೆಂಕಟೇಶ್, ಕೋಳಿ ಅಂಗಡಿ ಗಿರೀಶ್, ಧರ್ಮಣ್ಣ, ಸ್ಥಳೀಯ ಗ್ರಾಮ ಪಂಚಾಯತಿ ಅಧ್ಯಕ್ಷರು, ಸದಸ್ಯರು, ಸಾರ್ವಜನಿಕರು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.