ADVERTISEMENT

ಸಂತ ಸೇವಾಲಾಲ್‌ ಜಯಂತ್ಯುತ್ಸವ ಶ್ರೇಷ್ಠ ಪರಂಪರೆ ರಚಿಸಿದ ಸಂತ: ಮಲ್ಲೇಶ್ ಗೌಡ

​ಪ್ರಜಾವಾಣಿ ವಾರ್ತೆ
Published 16 ಫೆಬ್ರುವರಿ 2026, 6:51 IST
Last Updated 16 ಫೆಬ್ರುವರಿ 2026, 6:51 IST
ಹಾಸನದ ಹಾಸನಾಂಬ ಕಲಾಕ್ಷೇತ್ರದಲ್ಲಿ ಭಾನುವಾರ ಆಯೋಜಿಸಿದ್ದ ಜಯಂತ್ಯುತ್ಸವದಲ್ಲಿ ಸಂತ ಸೇವಾಲಾಲರ ಭಾವಚಿತ್ರಕ್ಕೆ ಗಣ್ಯರು ಪುಷ್ಪಾರ್ಪಣೆ ಮಾಡಿದರು
ಹಾಸನದ ಹಾಸನಾಂಬ ಕಲಾಕ್ಷೇತ್ರದಲ್ಲಿ ಭಾನುವಾರ ಆಯೋಜಿಸಿದ್ದ ಜಯಂತ್ಯುತ್ಸವದಲ್ಲಿ ಸಂತ ಸೇವಾಲಾಲರ ಭಾವಚಿತ್ರಕ್ಕೆ ಗಣ್ಯರು ಪುಷ್ಪಾರ್ಪಣೆ ಮಾಡಿದರು   

ಹಾಸನ: ಪರಂಪರೆಯಲ್ಲಿ ಶಬ್ದಗಳು ಬದಲಾಗಬಹುದು. ಆದರೆ ಆಶ್ರಯ, ಸತ್ಯ ಎಂದಿಗೂ ಬದಲಾಗುವುದಿಲ್ಲ. ಅಂತಹ ಶ್ರೇಷ್ಠ ಪರಂಪರೆಯನ್ನು ಸಂತ ಸೇವಾಲಾಲರು ರಚಿಸಿದ್ದಾರೆ ಎಂದು ಕನ್ನಡ ಸಾಹಿತ್ಯ ಪರಿಷತ್‌ ಜಿಲ್ಲಾ ಘಟಕದ ಅಧ್ಯಕ್ಷ ಎಚ್.ಎನ್‌. ಮಲ್ಲೇಶ್ ಗೌಡ ತಿಳಿಸಿದರು.

ಹಾಸನಾಂಬ ಕಲಾಕ್ಷೇತ್ರದಲ್ಲಿ ಭಾನುವಾರ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದ್ದ ಸಂತ ಸೇವಾಲಾಲ್ ಜಯಂತಿ ಉದ್ಘಾಟಿಸಿ ಅವರು ಮಾತನಾಡಿದರು.

ಸಮಾಜಕ್ಕೆ ಮಾದರಿ ಆಗುವಂತಹ ಚೌಕಟ್ಟಿನ ಒಳಗೆ ಸಂತ ಸೇವಾಲಾಲರು ಬದುಕನ್ನು ನಡೆಸುತ್ತ ಜಗತ್ತಿಗೆ ಶ್ರೇಷ್ಠ ವ್ಯಕ್ತಿಯಾಗಿ ಕಂಡುಬಂದರು. ಸೇವಾಲಾಲರ ಬಗ್ಗೆ ಲಿಖಿತವಾಗಿ ಯಾವುದೇ ಮಾಹಿತಿ ಇಲ್ಲದಿದ್ದರೂ, ಮೌಖಿಕ ಪರಂಪರೆಯ ದೊಡ್ಡ ದಾಖಲೆ ಜಗತ್ತಿನಲ್ಲಿದೆ. ಸಂತ ಸೇವಾಲಾಲರು ಸಮಾಜವನ್ನು ತಿದ್ದಲು ಸನ್ಯಾಸತ್ವವೇ ಸರಿಯೆಂದು ವಿವಾಹವನ್ನು ತೊರೆದು ಸಮಾಜದ ಒಳಿತಿಗಾಗಿ ಸನ್ಯಾಸಿ ಪಟ್ಟ ಸ್ವೀಕರಿಸಿದರು ಎಂದರು.

ADVERTISEMENT

ಕನ್ನಡ ನೆಲವು ಜಗತ್ತಿನ ಅಚ್ಚರಿಗಳಲ್ಲಿ ಒಂದು. ನಮ್ಮ ವೃತ್ತಿಯೇ ನಮ್ಮ ಧರ್ಮ. ಆ ಶ್ರದ್ದೆಯೇ ಜಗತ್ತಿಗೆ ಕೊಡುಗೆ ಆಗಿರುತ್ತದೆ. ಜಗತ್ತಿನಲ್ಲಿ ಎಲ್ಲರೂ ಪ್ರಕೃತಿ ಆರಾಧಕರು. ನಂತರ ಪ್ರತಿಕೃತಿ ಆರಾಧಕರು. ಪ್ರಕೃತಿಯಲ್ಲಿ ಕಾಣುವ ಪ್ರತಿಯೊಂದು ದೈವದ ಸ್ವರೂಪ, ಪ್ರಕೃತಿಯೇ ಮನುಷ್ಯನ ಸೃಷ್ಟಿಯ ಮೂಲ ಎಂದರು.

ಜನಪದ ಇತಿಹಾಸವು ಜಗತ್ತಿನಲ್ಲಿ ನೇರವಾದ ಇತಿಹಾಸ. ಜನಪದ ಹಾಡುಗಳ ಮೂಲಕ ಇರುವ ಸತ್ಯಗಳ ಬಗ್ಗೆ ಜಗತ್ತಿಗೆ ಅರಿವು ಮೂಡಿಸಿದ ಶರಣರಲ್ಲಿ ಶ್ರೇಷ್ಠತೆ ಕಾಣಬಹುದು ಎಂದರು.

ಬಂಜಾರ ಸಂಘದ ಜಿಲ್ಲಾ ಘಟಕದ ಉಪಾಧ್ಯಕ್ಷ ಧರ್ಮಪ್ಪ ಮಾತನಾಡಿ, ಸಮಾಜದಲ್ಲಿ ಎಂದಿಗೂ ಮಾನವರ ನಡುವೆ ಜಾತಿ, ವರ್ಗಗಳ ಭೇದ ಇಲ್ಲದೇ ಎಲ್ಲರೂ ಒಂದೇ ಎಂಬ ಭಾವನೆ ನಮ್ಮಲ್ಲಿ ಇದ್ದರೆ ಮಾತ್ರ ಶರಣರ ಸಾಹಿತ್ಯವನ್ನು ಜೀವನದಲ್ಲಿ ಅಳವಡಿಸಿಕೊಳಲು ಸಾಧ್ಯ ಎಂದರು.

ಬಂಜಾರ ಸಮಾಜದ ಆರಾಧ್ಯ ದೇವ ಸಂತ ಸೇವಾಲಾಲರ ಅವರ ಆಧ್ಯಾತ್ಮಿಕ, ಧಾರ್ಮಿಕ, ಸಾಹಿತ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಎಚ್.ಪಿ. ತಾರಾನಾಥ್, ಕನ್ನಡ ಸಾಹಿತ್ಯ ಪರಿಷತ್‌ ಗೌರವ ಕಾರ್ಯದರ್ಶಿ ಬೊಮ್ಮೇಗೌಡ, ಸಮುದಾಯದ ಮುಖಂಡರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.