ADVERTISEMENT

ಚನ್ನರಾಯಪಟ್ಟಣ: ಪ್ರಯಾಣಿಕರನ್ನು ಇಳಿಸಿ, ಎರಡು ಬಸ್‌ಗಳ ಜಪ್ತಿ

ಪರಿಹಾರ ನೀಡದ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ: ಕೋರ್ಟ್‌ ಆದೇಶ

​ಪ್ರಜಾವಾಣಿ ವಾರ್ತೆ
Published 13 ಫೆಬ್ರುವರಿ 2026, 23:48 IST
Last Updated 13 ಫೆಬ್ರುವರಿ 2026, 23:48 IST
ಚಿಕ್ಕಮಗಳೂರು ವಿಭಾಗಕ್ಕೆ ಸೇರಿದ ಎರಡು ಬಸ್‌ಗಳನ್ನು ಜಪ್ತಿ ಮಾಡಿ, ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ಕೋರ್ಟ್‌ ಎದುರು ನಿಲ್ಲಿಸಿರುವುದು
ಚಿಕ್ಕಮಗಳೂರು ವಿಭಾಗಕ್ಕೆ ಸೇರಿದ ಎರಡು ಬಸ್‌ಗಳನ್ನು ಜಪ್ತಿ ಮಾಡಿ, ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ಕೋರ್ಟ್‌ ಎದುರು ನಿಲ್ಲಿಸಿರುವುದು   

ಚನ್ನರಾಯಪಟ್ಟಣ (ಹಾಸನ): ಅಪಘಾತದಲ್ಲಿ ಮೃತಪಟ್ಟಿದ್ದ ಇಬ್ಬರ ಕುಟುಂಬಕ್ಕೆ ಪರಿಹಾರ ನೀಡದ, ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಚಿಕ್ಕಮಗಳೂರು ವಿಭಾಗದ ಎರಡು ಬಸ್‌ಗಳನ್ನು ಪಟ್ಟಣದಲ್ಲಿ ಜಪ್ತಿ ಮಾಡಲಾಯಿತು.

ಶುಕ್ರವಾರ ಶೃಂಗೇರಿಯಿಂದ ಬೆಂಗಳೂರು ಹಾಗೂ ಬೆಂಗಳೂರಿನಿಂದ ಚಿಕ್ಕಮಗಳೂರಿಗೆ ತೆರಳುತ್ತಿದ್ದ ಬಸ್‌ಗಳನ್ನು ತಡೆಹಿಡಿದ ಕೋರ್ಟ್‌ ಸಿಬ್ಬಂದಿ, ಪ್ರಯಾಣಿಕರನ್ನು ಇಳಿಸಿ, ಜಪ್ತಿ ಮಾಡಿದರು. ಸಿಬ್ಬಂದಿಯ ಈ ನಡೆಗೆ ಪ್ರಯಾಣಿಕರು ಆಕ್ಷೇಪ ವ್ಯಕ್ತಪಡಿಸಿದರು.

ಚನ್ನರಾಯಪಟ್ಟಣ ತಾಲ್ಲೂಕಿನ ಬೇಡಿಗನಹಳ್ಳಿ ಬಳಿ ಸಂಸ್ಥೆಯ ಬಸ್ ಮತ್ತು ಬೈಕ್ ನಡುವೆ 2023ರ ಏಪ್ರಿಲ್ 23 ರಂದು ನಡೆದಿದ್ದ ಅಪಘಾತದಲ್ಲಿ ರವಿಕಿರಣ್ (19) ಮತ್ತು ರೇಣುಕಪ್ಪ (52) ಸ್ಥಳದಲ್ಲಿ ಮೃತಪಟ್ಟಿದ್ದರು. ಕುಟುಂಬದವರು ವಕೀಲ ದರ್ಶನ್ ಪಟೇಲ್ ಮೂಲಕ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದ್ದರು..

ADVERTISEMENT

4ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಲಯ, ರವಿಕಿರಣ್ ಕುಟುಂಬಕ್ಕೆ  ₹19.93 ಲಕ್ಷ ಮತ್ತು ರೇಣುಕಪ್ಪ ಕುಟುಂಬಕ್ಕೆ ₹12.41 ಲಕ್ಷ  ಪರಿಹಾರ ನೀಡುವಂತೆ ಚಿಕ್ಕಮಗಳೂರು ವಿಭಾಗಕ್ಕೆ ಸೂಚಿಸಿತ್ತು.

‘ಪರಿಹಾರ ನೀಡದ್ದರಿಂದ ಬಸ್‍ಗಳನ್ನು ಜಪ್ತಿ ಮಾಡಿದ್ದರು. ₹16 ಲಕ್ಷ ಪರಿಹಾರದ ಮೊತ್ತದ ಚೆಕ್ ಅನ್ನು ಕೋರ್ಟ್‌ಗೆ ನೀಡಿದ್ದರಿಂದ ಬಸ್‌ಗಳನ್ನು ಬಿಡುಗಡೆ‌ ಮಾಡಲಾಗಿದೆ. ಬಾಕಿ ಮೊತ್ತವನ್ನು ಫೆ.28ರೊಳಗೆ ಪಾವತಿಸುವಂತೆ ನ್ಯಾಯಾಲಯ‌ ಆದೇಶ ನೀಡಿದೆ‌’ ಎಂದು‌ ವಕೀಲ ದರ್ಶನ್ ಪಟೇಲ್ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.