ADVERTISEMENT

ಅರಕಲಗೂಡು | ಕುಫ್ರಿ ಕರಣ್ ತಳಿ ಬೆಳೆಯಲು ಸಲಹೆ

​ಪ್ರಜಾವಾಣಿ ವಾರ್ತೆ
Published 5 ಸೆಪ್ಟೆಂಬರ್ 2025, 2:06 IST
Last Updated 5 ಸೆಪ್ಟೆಂಬರ್ 2025, 2:06 IST
ಅರಕಲಗೂಡು ತಾಲ್ಲೂಕು ಹುಲ್ಲಂಗಾಲ ಮತ್ತು ಬೈಚನಹಳ್ಳಿ ಗ್ರಾಮಗಳಲ್ಲಿ ನೂತನ ತಳಿ ಕುಫ್ರಿ ಕರಣ್ ಆಲೂಗೆಡ್ಡೆ ಬೆಳೆ ತಾಕುಗಳನ್ನು ಜಿಲ್ಲಾ ತೋಟಗಾರಿಕೆ ಉಪನಿರ್ದೇಶಕ ಎಚ್. ಆರ್. ಯೋಗೇಶ್ ವೀಕ್ಷಿಸಿದರು
ಅರಕಲಗೂಡು ತಾಲ್ಲೂಕು ಹುಲ್ಲಂಗಾಲ ಮತ್ತು ಬೈಚನಹಳ್ಳಿ ಗ್ರಾಮಗಳಲ್ಲಿ ನೂತನ ತಳಿ ಕುಫ್ರಿ ಕರಣ್ ಆಲೂಗೆಡ್ಡೆ ಬೆಳೆ ತಾಕುಗಳನ್ನು ಜಿಲ್ಲಾ ತೋಟಗಾರಿಕೆ ಉಪನಿರ್ದೇಶಕ ಎಚ್. ಆರ್. ಯೋಗೇಶ್ ವೀಕ್ಷಿಸಿದರು   

ಅರಕಲಗೂಡು: ಜಿಲ್ಲೆಯಲ್ಲಿ ಆಲೂಗಡ್ಡೆ ಬೆಳೆ ಪ್ರದೇಶ ಕ್ಷೀಣಿಸುತ್ತಿದ್ದು, ರೈತರು ಹೊಸ ತಳಿಗಳನ್ನು ಆಯ್ಕೆ ಮಾಡಿಕೊಂಡು ಹೊಸ ತಾಂತ್ರಿಕತೆಯನ್ನು ಅಳವಡಿಸಿಕೊಳ್ಳುವುದು ಇಂದಿನ ಅಗತ್ಯವಾಗಿದೆ ಎಂದು ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಎಚ್.ಆರ್.ಯೋಗೇಶ್ ತಿಳಿಸಿದರು.

ತಾಲೂಕಿನ ಕಸಬಾ ಹೋಬಳಿಯ ಹುಲ್ಲಂಗಾಲ ಮತ್ತು ಬೈಚನಹಳ್ಳಿಗಳಲ್ಲಿ ಆಲೂಗೆಡ್ಡೆ ತಾಕುಗಳಿಗೆ ಸೋಮವಾರ ಭೇಟಿ ನೀಡಿ ಪರಿಶೀಲಿಸಿ ಅವರು ಮಾತನಾಡಿದರು.

ಹಿಮಾಚಲ ಪ್ರದೇಶದ ಕೇಂದ್ರೀಯ ಆಲೂಗೆಡ್ಡೆ ಸಂಶೋಧನಾ ಕೇಂದ್ರವು 2020ರಲ್ಲಿ ಬಿಡುಗಡೆ ಮಾಡಿರುವ ‘ಕುಫ್ರಿ ಕರಣ್’ ಹೊಸ ತಳಿಯ ಆಲೂಗೆಡ್ಡೆ ದಪ್ಪ ಎಲೆಗಳನ್ನು ಹೊಂದಿ ಅಂಗಮಾರಿ ರೋಗ ನಿರೋಧಕ ಶಕ್ತಿ ಹೊಂದಿದ್ದು, ದುಂಡನೆಯ ಗೆಡ್ಡೆಗಳನ್ನು ಸಹ ನೀಡಬಲ್ಲ ತಳಿಯಾಗಿದೆ. ರೈತರು ಇದನ್ನು ಬೆಳೆಯಬೇಕು ಎಂದು ಸಲಹೆ ಮಾಡಿದರು.

ADVERTISEMENT

‘ಜಿಲ್ಲೆಯಲ್ಲಿ ಹಲವು ವರ್ಷಗಳಿಂದಲೂ ‘ಕುಫ್ರಿ’, ‘ಜ್ಯೋತಿ’ ತಳಿಯನ್ನು ಬೆಳೆಯುತ್ತಿದ್ದು, ತಳಿಗಳ ವೈವಿಧ್ಯ ಇಲ್ಲದೆ ಒಂದೇ ತಳಿಯ ಮೇಲೆ ರೈತರು ಅವಲಂಬಿತರಾಗಿದ್ದರು. 10 ವರ್ಷಗಳಿಂದ ‘ಹಿಮಾಲಿನಿ’ ತಳಿಯು ಅಂಗಮಾರಿ ರೋಗನಿರೋಧಕ ಶಕ್ತಿ ಹೊಂದಿದೆ ಎಂದು ಕೆಲವು ರೈತರು ಬೆಳೆದರಾದರೂ, ‘ಜ್ಯೋತಿ’ ತಳಿಯನ್ನು ಮೀರಿ ‘ಹಿಮಾಲಿನಿ’ ತಳಿಯು ಹೆಚ್ಚಿನ ಪ್ರದೇಶವನ್ನು ಆಕ್ರಮಿಸಲಿಲ್ಲ. ‘ಹಿಮಾಲಿನಿ’ಯು ‘ಜ್ಯೋತಿ’ಯಷ್ಟು ಗುಂಡಗಿನ ಗೆಡ್ಡೆಗಳನ್ನು ಕೊಡದಿರುವುದು ಇದಕ್ಕೆ ಒಂದು ಕಾರಣವಾಗಿದೆ’ ಎಂದು ವಿಶ್ಲೇಷಿಸಿದರು.

‘ಸಂಶೋಧನಾ ಕೇಂದ್ರವು ಹಲವು ತಳಿಗಳನ್ನು ಬಿಡುಗಡೆ ಮಾಡಿದ್ದರೂ ಜಿಲ್ಲೆಯ ರೈತರಿಗೆ ಎಲ್ಲಾ ತಳಿಗಳ ಬೀಜವೂ ಮಾರುಕಟ್ಟೆಯಲ್ಲಿ ದೊರಕುತ್ತಿಲ್ಲ. ‘ಕುಫ್ರಿ ಕರಣ್‘ ತಳಿಯನ್ನು ಕಳೆದ ಸಾಲಿನಲ್ಲಿ ತಾಲ್ಲೂಕಿನ ಬೈಚನಹಳ್ಳಿ ಗ್ರಾಮದ ರೈತ ದಯಾನಂದ್ ಅವರು ಕುಡಿಕಾಂಡ ಸಸಿಗಳಿಂದ ಬೀಜೋತ್ಪಾದನೆ ಮಾಡಿದ್ದಾರೆ. ಉತ್ಪಾದನೆಯಾದ ಬೀಜವನ್ನು ಸಂಗ್ರಹಿಸಿ ಈ ಮುಂಗಾರು ಹಂಗಾಮಿನಲ್ಲಿ ಬೆಳೆದಿದ್ದು, ಬೆಳೆಯು ಜ್ಯೋತಿ ಮತ್ತು ಹಿಮಾಲಿನಿ ತಳಿಗಳಿಗಿಂತಲೂ ಉತ್ತಮವಾಗಿ ಬೆಳವಣಿಗೆ ಹೊಂದಿದೆ’ ಎಂದರು.

ಹಿರಿಯ ಸಹಾಯಕ ನಿರ್ದೇಶಕ ಡಿ. ರಾಜೇಶ್, ರೈತ ದಯಾನಂದ್ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.