ADVERTISEMENT

ಆಲೂರು | ಅಪಾಯ ಆಹ್ವಾನಿಸುವ ಕೆರೆಯ ಹೂಳು

​ಪ್ರಜಾವಾಣಿ ವಾರ್ತೆ
Published 17 ಜುಲೈ 2023, 5:41 IST
Last Updated 17 ಜುಲೈ 2023, 5:41 IST
ಆಲೂರಿನ ನಾಲ್ಕನೇ ವಾರ್ಡ್‌ನಲ್ಲಿ ಹೂಳು ತುಂಬಿರುವ ಕೆರೆ
ಆಲೂರಿನ ನಾಲ್ಕನೇ ವಾರ್ಡ್‌ನಲ್ಲಿ ಹೂಳು ತುಂಬಿರುವ ಕೆರೆ    

ಎಂ.ಪಿ. ಹರೀಶ್

ಆಲೂರು: ತಾಲ್ಲೂಕು ಕೇಂದ್ರ ಎನಿಸಿಕೊಂಡಿರುವ ಪಟ್ಟಣ ವ್ಯಾಪ್ತಿಯಲ್ಲಿ ನಾಲ್ಕು ಕೆರೆಗಳಿದ್ದವು. ಅವುಗಳನ್ನು ಹೂಳು ತೆಗೆಯದೇ ಎರಡು ಕೆರೆಗಳು ಮುಚ್ಚಿ ಹೋಗಿವೆ. ಉಳಿದೆರಡು ಕೆರೆಗಳಲ್ಲಿ ಈವರೆಗೂ ಹೂಳನ್ನು ಹೊರ ತೆಗೆಯದಿರುವುದರಿಂದ ಏರಿ ತುದಿಯವರೆಗೂ ಗಿಡ ಗುಂಟೆಗಳು ಬೆಳೆದು ನಿಂತಿದೆ. ಭಾರಿ ಮಳೆಯಾದರೆ ನೀರು ತುಂಬಿ ಏರಿ ಒಡೆಯುವ ಸಾಧ್ಯತೆ ಇದೆ.

ಪಟ್ಟಣದಲ್ಲಿ ಬಿದ್ದ ಮಳೆ ನೀರು, ಮನೆಗಳಿಂದ ಹೊರಸೂಸುವ ಕೊಳಚೆ ನೀರು ಹರಿದು ಸೇರಲು ಈ ಎರಡು ಕೆರೆಗಳು ಮಾತ್ರ ಲಭ್ಯವಾಗಿವೆ. ಕೆರೆಗಳಲ್ಲಿ ಭಾರಿ ಹೂಳು ತುಂಬಿರುವುದರಿಂದ ಸ್ವಲ್ಪ ಪ್ರಮಾಣದಲ್ಲಿರುವ ನೀರು ಏರಿ ಸಮೀಪದಲ್ಲಿದೆ. ಏರಿ ಸಂಪರ್ಕ ರಸ್ತೆ ಆಗಿರುವುದರಿಂದ ನಿತ್ಯ ಏರಿ ಮೇಲೆ ನೂರಾರು ವಾಹನಗಳು, ಜನಸಾಮಾನ್ಯರು ತಿರುಗಾಡುತ್ತಾರೆ. ಕೆರೆ ಅಕ್ಕಪಕ್ಕದ ನಿವೇಶನಗಳಿವೆ. ಭಾರಿ ಮಳೆಯಾದರೆ ಕೋಡಿಯೂ ಇಲ್ಲದ ಈ ಕೆರೆಗಳಲ್ಲಿ ಏರಿ ಮೇಲೆ ನೀರು ಹರಿದು ದುಷ್ಪರಿಣಾಮ ಎದುರಾಗಲಿದೆ.

ADVERTISEMENT
ಪಟ್ಟಣದಲ್ಲಿರುವ ಎರಡು ಕೆರೆಗಳು ಹೂಳಿನಿಂದ ತುಂಬಿವೆ. ಹೂಳೆತ್ತಲು ಆದಷ್ಟು ಬೇಗ ಅಂದಾಜು ಪಟ್ಟಿ ತಯಾರಿಸಿ ಕ್ರಮ ಕೈಗೊಳ್ಳಲಾಗುವುದು.
ರಾಜೇಶ್ ಕೋಟ್ಯಾನ್‌, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ

ಕೆರೆಗಳ ಹೂಳು ತೆಗೆದು ನೀರು ಸಂಗ್ರಹವಾಗಲು ಅವಕಾಶ ಕಲ್ಪಿಸಬೇಕು ಎಂದು ಸರ್ಕಾರದ ನಿರ್ದೇಶನವಿದ್ದರೂ, ಸ್ಥಳೀಯ ಆಡಳಿತ ಕಣ್ಮುಚ್ಚಿ ಕುಳಿತಿರುವುದು ವಿಪರ್ಯಾಸ. ವಿಷಯದ ಬಗ್ಗೆ ಪ್ರಸ್ತಾಪಿಸಿದ ಸಂದರ್ಭದಲ್ಲಿ ಈಗ ಮಾಡುತ್ತೇವೆ ಎಂಬ ಭರವಸೆ ನೀಡುತ್ತಾರೆ. ನಂತರದಲ್ಲಿ ಸುಮ್ಮನಾಗುತ್ತಾರೆ ಎಂದು ಜನರು ದೂರುತ್ತಿದ್ದಾರೆ.

ಇತಿಹಾಸದಲ್ಲೇ ಪಟ್ಟಣದ ಕೆರೆಗಳ ಹೂಳೆತ್ತಿಲ್ಲ. ಎರಡು ಚಿಕ್ಕ ಕೆರೆಗಳಿವೆ. ಹೂಳು ತುಂಬಿರುವುದರಿಂದ ಭಾರಿ ಮಳೆಯಾದರೆ ನೀರು ತುಂಬಿ ಏರಿ ಮೇಲೆ ಹರಿಯುವ ಸಾಧ್ಯತೆ ಇದೆ.
ಗೀತಾ, ಆಲೂರು ನಿವಾಸಿ

ಕೆರೆಗೆ ನೀರು ಹರಿಯುವ ಕಾಲುವೆಯನ್ನು ಶುಚಿಗೊಳಿಸಿ, ಚರಂಡಿಗಳಲ್ಲಿ ಸಂಗ್ರಹವಾಗುತ್ತಿರುವ ಕೊಳಚೆ ನೀರು ಸರಾಗವಾಗಿ ಕೆರೆಗೆ ಹರಿಯುವಂತೆ ಪಟ್ಟಣ ಪಂಚಾಯಿತಿ ಅಡಳಿತ ಕ್ರಮ ಕೈಗೊಳ್ಳಬೇಕು. ಕೆರೆ ಸುತ್ತಮುತ್ತ ವಾಸದ ಮನೆಗಳು ನಿರ್ಮಾಣ ಆಗುತ್ತಿರುವುದರಿಂದ, ಮುಂದಿನ ದಿನಗಳಲ್ಲಿ ಭಾರಿ ಮಳೆಯಾದ ಸಂದರ್ಭದಲ್ಲಿ ಅನೇಕ ಅವಘಡ ಎದುರಿಸಬೇಕಾಗುತ್ತದೆ. ಕೂಡಲೆ ಕೆರೆ ಹೂಳು ತೆಗೆಯಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.