ADVERTISEMENT

ಬಡವರಿಗೆ ನಿವೇಶನ ನೀಡದೆ ಅನ್ಯಾಯ

ಬ್ಯಾಂಕ್ ಕಿರುಕುಳ ತಡೆಯಲು ಆಗ್ರಹ: ಡಿಸಿ ಕಚೇರಿ ಎದುರು ರೈತರ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 18 ಜನವರಿ 2026, 4:40 IST
Last Updated 18 ಜನವರಿ 2026, 4:40 IST
ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ನೇತೃತ್ವದಲ್ಲಿ ಶನಿವಾರ ನೂರಾರು ರೈತರು ಹಾಸನದಲ್ಲಿ ಪ್ರತಿಭಟನೆ ನಡೆಸಿದರು.
ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ನೇತೃತ್ವದಲ್ಲಿ ಶನಿವಾರ ನೂರಾರು ರೈತರು ಹಾಸನದಲ್ಲಿ ಪ್ರತಿಭಟನೆ ನಡೆಸಿದರು.   

ಹಾಸನ: ಜಿಲ್ಲೆಯ ರೈತರು ಎದುರಿಸುತ್ತಿರುವ ವಿವಿಧ ಸಮಸ್ಯೆಗಳನ್ನು ಬಗೆಹರಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ನೇತೃತ್ವದಲ್ಲಿ ಶನಿವಾರ ನೂರಾರು ರೈತರು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ನಗರದ ಹೇಮಾವತಿ ಪ್ರತಿಮೆ ಎದುರು ಸಂಘಟಿತರಾದ ರೈತರು ಮತ್ತು ಸಂಘದ ಮುಖಂಡರು, ಮೆರವಣಿಗೆಯಲ್ಲಿ ಎನ್.ಆರ್. ವೃತ್ತದ ಮೂಲಕ ಸಾಗಿ ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ನಡೆಸಿದರು. ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.

ರೈತ ಸಂಘದ ಮುಖಂಡ ಆನೆಕೆರೆ ರವಿ ಮಾತನಾಡಿ, ಬೀರನಹಳ್ಳಿ ಕೆರೆ ಪ್ರದೇಶದಲ್ಲಿ 2007ರಲ್ಲಿ ಬಡವರಿಗೆ ನೀಡಿದ್ದ ನಿವೇಶನಗಳನ್ನು, ನಂತರ ಹಿಂಪಡೆದಿರುವುದು ಅನ್ಯಾಯ. ಹಿಂಪಡೆಯಲಾದ ನಿವೇಶನಗಳಿಗೆ ಪರ್ಯಾಯವಾಗಿ ತಕ್ಷಣವೇ ನಿವೇಶನ ನೀಡಬೇಕು ಎಂದು ಆಗ್ರಹಿಸಿದರು.

ADVERTISEMENT

ಬೇಲೂರು ತಾಲ್ಲೂಕಿನ ಬಂಟೆನಹಳ್ಳಿ ಗ್ರಾಮದಲ್ಲಿ ವಿವಿಧ ಸಮುದಾಯಗಳ 400ಕ್ಕೂ ಹೆಚ್ಚು ಕುಟುಂಬಗಳಿಗೆ ನಿವೇಶನ ನೀಡದೇ ವಂಚನೆ ಮಾಡಲಾಗುತ್ತಿದೆ. ಸರ್ಕಾರ ಕೂಡಲೇ ಎಚ್ಚೆತ್ತು ಬಡವರಿಗೆ ನಿವೇಶನ ಕಲ್ಪಿಸಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಿಗೆ ಘೇರಾವ್ ಹಾಕಲಾಗುವುದು ಎಂದು ಎಚ್ಚರಿಸಿದರು.

ಜಿಲ್ಲೆಯ ವಿವಿಧ ಭಾಗಗಳಲ್ಲಿ ಅಕ್ರಮ–ಸಕ್ರಮ ಯೋಜನೆಯಡಿ ನೀಡಲಾದ ಹಕ್ಕುಪತ್ರಗಳನ್ನು ತಡೆಹಿಡಿಯಲಾಗುತ್ತಿದೆ. ಇದು ಬಡವರಿಗೆ ವಂಚನೆಯಾಗಿದ್ದು, ಸರ್ಕಾರ ತಕ್ಷಣವೇ ಈ ಅವ್ಯವಹಾರಗಳಿಗೆ ಕಡಿವಾಣ ಹಾಕಬೇಕು. ಬೇಡಿಕೆಗಳಿಗೆ ಸ್ಪಂದಿಸದಿದ್ದರೆ ರೈತ ಸಂಘ ತನ್ನದೇ ರೀತಿಯಲ್ಲಿ ಪ್ರತಿರೋಧ ನಡೆಸಲಿದೆ ಎಂದು ತಿಳಿಸಿದರು.

ಜಿಲ್ಲೆಯಾದ್ಯಂತ ಬಡ ರೈತರ ಸಾಲದ ಹೆಸರಿನಲ್ಲಿ ಆನ್‌ಲೈನ್ ಮೂಲಕ ಆಸ್ತಿಗಳನ್ನು ಹರಾಜು ಮಾಡುವ ಪ್ರಕ್ರಿಯೆ ನಡೆಯುತ್ತಿರುವುದು ಖಂಡನೀಯ. ಸರ್ಕಾರ ಮಧ್ಯಪ್ರವೇಶಿಸಿ ಈ ಹರಾಜು ಪ್ರಕ್ರಿಯೆ ನಿಲ್ಲಿಸಬೇಕು. ಮಾಹಿತಿ ಇಲ್ಲದೇ ರೈತರ ಆಸ್ತಿಪಾಸ್ತಿ ಬ್ಯಾಂಕ್ ಪಾಲಾಗುತ್ತಿರುವುದು ಸರಿಯಲ್ಲ. ಕ್ರಮ ಕೈಗೊಳ್ಳದಿದ್ದರೆ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.

ರಾಷ್ಟ್ರೀಕೃತ ಬ್ಯಾಂಕ್‌ಗಳು ಗೌರವಯುತವಾಗಿ ಸಾಲ ವಸೂಲಿ ಮಾಡಬೇಕು. ಆನ್‌ಲೈನ್ ಹರಾಜು ಮೂಲಕ ರೈತರನ್ನು ವಂಚಿಸುವ ಕ್ರಮ ಮುಂದುವರಿದರೆ ರೈತ ಸಂಘ ಸಹಿಸುವುದಿಲ್ಲ ಎಂದು ಹೇಳಿದರು.

ಬಾಬು, ಮೊಹಮ್ಮದ್ ಸಾದಿಕ್, ವಿಠಲ, ಪುಟ್ಟರಾಜು, ಕಾಳಕ್ಕ, ಪವಿತ್ರಾ, ಕವಿತಾ ಸೇರಿದಂತೆ ಅನೇಕ ರೈತರು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.