ADVERTISEMENT

ಅರಕಲಗೂಡು | ಬಗರ್ ಹುಕುಂ: ಭೂಮಿಗಾಗಿ 10 ಸಾವಿರಕ್ಕೂ ಅಧಿಕ ಅರ್ಜಿ

ಬಗರ್ ಹುಕುಂ ಸಮಿತಿ ಸಭೆಯಲ್ಲಿ ಪಹಣಿ ವಿತರಿಸಿದ ಶಾಸಕ ಎ.ಮಂಜು

​ಪ್ರಜಾವಾಣಿ ವಾರ್ತೆ
Published 6 ಜುಲೈ 2025, 2:13 IST
Last Updated 6 ಜುಲೈ 2025, 2:13 IST
ಅರಕಲಗೂಡಿನಲ್ಲಿ ಶನಿವಾರ ನಡೆದ ಬಗರ್ ಹುಕುಂ ಸಮಿತಿ ಸಭೆಯಲ್ಲಿ, ದುಮ್ಮಿಗ್ರಾಮದ ಭೂ ಮಂಜೂರಾತಿ ಫಲಾನುಭವಿಗಳಿಗೆ ಶಾಸಕ ಎ.ಮಂಜು ಪಹಣಿ ವಿತರಿಸಿದರು
ಅರಕಲಗೂಡಿನಲ್ಲಿ ಶನಿವಾರ ನಡೆದ ಬಗರ್ ಹುಕುಂ ಸಮಿತಿ ಸಭೆಯಲ್ಲಿ, ದುಮ್ಮಿಗ್ರಾಮದ ಭೂ ಮಂಜೂರಾತಿ ಫಲಾನುಭವಿಗಳಿಗೆ ಶಾಸಕ ಎ.ಮಂಜು ಪಹಣಿ ವಿತರಿಸಿದರು   

ಅರಕಲಗೂಡು: ತಾಲ್ಲೂಕಿನಲ್ಲಿ ಬಗರ್ ಹುಕುಂ ಯೋಜನೆಯ ಫಾರಂ ನಂ 53 ರಲ್ಲಿ ಜಮೀನು ಸಕ್ರಮ ಕೋರಿ 10,650 ಅರ್ಜಿಗಳು ಸಲ್ಲಿಕೆಯಾಗಿದ್ದು, ಅರ್ಜಿಗಳನ್ನು ಪರಿಶೀಲಿಸಿ ಅರ್ಹರಿಗೆ ಜಮೀನು ಮಂಜೂರಾತಿಗೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಶಾಸಕ ಎ. ಮಂಜು ತಿಳಿಸಿದರು.

ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ಶನಿವಾರ ನಡೆದ ಬಗರ್‌ಹುಕುಂ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು, ಅಧಿಕಾರಿಗಳು ಸರ್ವೆ ಕಾರ್ಯಕ್ಕೆ ತೆರಳಿದಾಗ ಅರ್ಜಿದಾರರು ಅನುಭವದಲ್ಲಿ ಇದ್ದಾರೆಯೇ?, ಕ್ರಮಬದ್ದವಾಗಿ ಅರ್ಜಿ ಸಲ್ಲಿಸಿದ್ದಾರೆಯೇ ಎಂಬ ವಿಷಯಗಳ ಕುರಿತು ಪರಿಶೀಲಿಸಿ ಕಡತ ಸಿದ್ದಪಡಿಸುವಂತೆ ಸೂಚಿಸಿದರು.

ಕಸಬಾ ಹೋಬಳಿ ಹೆತ್ತಗೌಡನಹಳ್ಳಿ ಗ್ರಾಮದ ಸರ್ವೆ ನಂ 36ರಲ್ಲಿ 11 ಮಂದಿ ಅರ್ಜಿ ಸಲ್ಲಿಸಿದ್ದು, ಇದರಲ್ಲಿ 5 ಮಂದಿಗೆ 3.28ಎಕರೆ ಭೂಮಿ ಮಂಜೂರು ಮಾಡಲಾಗಿದೆ. ಉಳಿದ 6 ಅರ್ಜಿಗಳನ್ನು ಪರಿಶೀಲನೆಗಾಗಿ ಬಾಕಿ ಇರಿಸಲಾಗಿದೆ. ಮಲ್ಲಿಪಟ್ಟಣ ಹೋಬಳಿ ಬಬ್ಬಗಳಲೆ ಗ್ರಾಮದ ಇಬ್ಬರಿಗೆ ಭೂಮಿ ಮಂಜೂರು ಮಾಡಿರುವುದಾಗಿ ಹೇಳಿದರು.

ADVERTISEMENT

ಅರ್ಜಿ ವಿಲೇವಾರಿ ಕಾರ್ಯ ನಿಧಾನಗತಿಯಲ್ಲಿ ಸಾಗುತ್ತಿದ್ದು, ಚುರುಕುಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಬಗರ್ ಹುಕುಂ ಸಮಿತಿ ಸದಸ್ಯರಾದ ಎಸ್.ಎಲ್. ಗಣಪತಿ, ಪುಟ್ಟಯ್ಯ, ವೇದಾವತಿ, ತಹಶೀಲ್ದಾರ್ ಕೆ.ಸಿ. ಸೌಮ್ಯ, ಗ್ರೇಡ್ -2 ತಹಶೀಲ್ದಾರ್ ಸಿ.ಸ್ವಾಮಿ, ಕಂದಾಯ ಇಲಾಖೆ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.

ಸರ್ಕಾರಿ ಭೂಮಿ: ಗ್ರಾಮಸ್ಥರ ಆಕ್ರೋಶ: ಹೆತ್ತಗೌಡನಹಳ್ಳಿ ಗ್ರಾಮದ ಸರ್ವೆ ನಂ 36 ರಲ್ಲಿ 33.31 ಎಕರೆ ಭೂಮಿ ಇದ್ದು ಇದನ್ನು ಗ್ರಾಮಸ್ಥರು ಗೋಮಾಳವಾಗಿ ಉಪಯೋಗಿಸುತ್ತಿದ್ದಾರೆ. ಇದನ್ನು ಮಂಜೂರು ಮಾಡದಂತೆ ಅರ್ಜಿ ಸಲ್ಲಿಸಿದ್ದರೂ ಶಾಸಕರು ತಮ್ಮ ಬೆಂಬಲಿಗರಿಗೆ ಮಂಜೂರಾತಿ ಮಾಡುತ್ತಿದ್ದಾರೆ ಎಂದು ಆರೋಪಿಸಿ ಗ್ರಾಮದ ಕೆಲವರು ಶಾಸಕ ಎ.ಮಂಜು ಹಾಗೂ ತಹಶೀಲ್ದಾರ್ ವಿರುದ್ದ ಘೋಷಣೆ ಕೂಗಿದರು. ಭೂಮಿ ಕೋರಿ ಅರ್ಜಿ ಸಲ್ಲಿಸಿರುವವರಲ್ಲಿ ಭೂರಹಿತರು ಇಲ್ಲ. ಗ್ರಾಮದ ಸರ್ಕಾರಿ ಜಮೀನನ್ನು ಉಳಿಸಬೇಕು ಎಂದು ಒತ್ತಾಯಿಸಿದರು. ಸಭೆ ಮುಗಿಸಿ ತೆರಳುತ್ತಿದ್ದ ಶಾಸಕ ಎ. ಮಂಜು ಅವರೊಂದಿಗೆ ಕೆಲವರು ಮಾತಿನ ಚಕಮಕಿ ನಡೆಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.