ADVERTISEMENT

ಲಂಕೇಶ್‌ ಬಹುಮುಖ ಪ್ರತಿಭೆಯ ದೈತ್ಯ: ದಿನೇಶ್ ಅಮೀನ್‌ಮಟ್ಟು

​ಪ್ರಜಾವಾಣಿ ವಾರ್ತೆ
Published 10 ಮಾರ್ಚ್ 2025, 11:40 IST
Last Updated 10 ಮಾರ್ಚ್ 2025, 11:40 IST
ಹಾಸನದ ಕನ್ನಡ ಸಾಹಿತ್ಯ ಪರಿಷತ್ ಭವನದಲ್ಲಿ ಆಯೋಜಿಸಿದ್ದ ಲಂಕೇಶ್‌–90: ಮಾತುಕತೆ–ಸಂವಾದ ಕಾರ್ಯಕ್ರಮದಲ್ಲಿ ಲಂಕೇಶರ ನೀಲು ಕಾವ್ಯದ ಪೋಸ್ಟರ್‌ಗಳನ್ನು ಬಿಡುಗಡೆ ಮಾಡಲಾಯಿತು.
ಹಾಸನದ ಕನ್ನಡ ಸಾಹಿತ್ಯ ಪರಿಷತ್ ಭವನದಲ್ಲಿ ಆಯೋಜಿಸಿದ್ದ ಲಂಕೇಶ್‌–90: ಮಾತುಕತೆ–ಸಂವಾದ ಕಾರ್ಯಕ್ರಮದಲ್ಲಿ ಲಂಕೇಶರ ನೀಲು ಕಾವ್ಯದ ಪೋಸ್ಟರ್‌ಗಳನ್ನು ಬಿಡುಗಡೆ ಮಾಡಲಾಯಿತು.   

ಹಾಸನ: ಚಳವಳಿಗಳು ಸೋತು-ಸೊರಗಿರುವ ಪ್ರಸ್ತುತ ಸಂದರ್ಭದಲ್ಲಿನ ಸಾಮಾಜಿಕ, ಸಾಂಸ್ಕೃತಿಕ ಹಾಗೂ ರಾಜಕೀಯ ಸೂಕ್ಷ್ಮಗಳಿಗೆ ಸ್ಪಂದಿಸಲು ಈಗ ಲಂಕೇಶ್ ಇರಬೇಕಿತ್ತು ಎಂದು ಬಯಸುತ್ತಿರುವುದು, ಪರೋಕ್ಷವಾಗಿ ನಮ್ಮ ವೈಫಲ್ಯಗಳನ್ನು ಹೇಳಿಕೊಳ್ಳುತ್ತಿದ್ದೇವೆ ಎಂದು ಪತ್ರಕರ್ತ ದಿನೇಶ್ ಅಮೀನ್ ಮಟ್ಟು ಆಭಿಪ್ರಾಯಪಟ್ಟರು.

ನಗರದ ಕನ್ನಡ ಸಾಹಿತ್ಯ ಪರಿಷತ್‌ ಭವನದಲ್ಲಿ ಜನಪರ ಸಂಘಟನೆಗಳ ಒಕ್ಕೂಟ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಹಯೋಗದಲ್ಲಿ ಆಯೋಜಿಸಿದ್ದ ‘ಲಂಕೇಶ್-90: ಮಾತುಕತೆ-ಸಂವಾದ’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

80ರ ದಶಕದಲ್ಲಿ ಲಂಕೇಶ್ ಪತ್ರಿಕೆಯ ಪ್ರಭಾವ ಚಳವಳಿಗಳನ್ನು ಬೆಳೆಸಿತೋ ಅಥವಾ ಅಂದಿನ ದಲಿತ, ರೈತ ಮತ್ತು ಭಾಷಾ ಚಳವಳಿಗಳು ಲಂಕೇಶ್ ಪತ್ರಿಕೆಯನ್ನು ಬೆಳೆಸಿದವೋ ಎನ್ನುವುದು ನನ್ನಂತಹ ಅನೇಕರಿಗೆ ಜಿಜ್ಞಾಸೆ ಇದೆ. ಆದರೆ ಲಂಕೇಶ್ ನನ್ನಿಂದಲೇ ಚಳವಳಿಗಳು ಬೆಳೆಯಿತು ಎಂದು ಹೇಳಿಕೊಂಡಿದ್ದಾರೆ. ಅದೇ ಸಂದರ್ಭದಲ್ಲಿ ಅವರು ಚಳವಳಿಗಳ ಕುರಿತು ವಿರೋಧಾಭಾಸದ ನಿಲುವನ್ನು ಹೊಂದಿದ್ದರು. ಚಳುವಳಿಗಳನ್ನು ಕುಗ್ಗಿಸುವಂತಹ ಬರಹಗಳನ್ನೂ ಬರೆಯುತ್ತಿದ್ದರು ಎಂದು ಹಲವಾರು ಉದಾಹರಣೆಗಳ ಮೂಲಕ ವಿವರಿಸಿದರು.

ADVERTISEMENT

ಲಂಕೇಶ್ ಕೇವಲ ಸಾಹಿತಿ ಆಗಿದ್ದರೆ ಇಷ್ಟೊಂದು ಮಂಥನ ಮಾಡುವ ಅವಶ್ಯಕತೆ ಬರುತ್ತಿರಲಿಲ್ಲ. ಅವರು ಬಹುಮುಖ ಪ್ರತಿಭೆಯ ದೈತ್ಯರಾಗಿದ್ದರು ಸಾಹಿತಿ, ನಾಟಕಕಾರ, ಸಿನಿಮಾ ನಿರ್ದೆಶಕ-ತಯಾರಕ ಆಗಿದ್ದರೂ, ಅವರೊಬ್ಬ ನಿರ್ಭಿಡೆಯ ಪತ್ರಕರ್ತ ಆಗಿದ್ದರಿಂದ ಜನಮಾನಸದಲ್ಲಿ ಉಳಿದು ಇಂದಿಗೂ ಚರ್ಚೆಯಾಗುತ್ತಿದ್ದಾರೆ ಎಂದು ಹೇಳಿದರು.

ಧರ್ಮಸ್ಥಳಕ್ಕೆ ಹೋಗಿ ಅಡ್ಡಬೀಳುವ ರಾಜಕಾರಣಿಗಳನ್ನು ಅವರಂತೆ ಹಿಗ್ಗಾಮುಗ್ಗಾ ಯಾರೂ ಕೂಡ ಖಂಡಿಸುವ ಸಾಮರ್ಥ್ಯವಿರಲಿಲ್ಲ. ಅಬ್ದುಲ್ ನಜೀರ್‌ಸಾಬ್ ಅವರನ್ನು ಹೊರತುಪಡಿಸಿ  ರಾಜಕುಮಾರ್‌ ಅವರನ್ನೊಳಗೊಂಡು ಅವರ ಟೀಕೆಗೆ ಗುರಿಯಾಗದ ಯಾವ ರಾಜಕಾರಣಿ, ನಟ, ಹೋರಾಟಗಾರ, ಸಾಹಿತಿ ಇಲ್ಲವೇ ಇಲ್ಲ ಎಂದರು.

ಲಂಕೇಶರ ಒಡನಾಡಿಯಾಗಿ ಕೆಲಸ ಮಾಡಿದ ಅನುಭವ ಹಂಚಿಕೊಂಡ ಸಾಹಿತಿ ಬಾನು ಮುಷ್ತಾಕ್, ಲಂಕೇಶ್ ಪತ್ರಿಕೆ ಉಚ್ಛ್ರಾಯ ಸ್ಥಿತಿಯಲ್ಲಿದ್ದಾಗ ಅವರ ಜೊತೆಯಲ್ಲಿ ಕೆಲಸ ಮಾಡಿದ ಅನುಭವದಲ್ಲಿ ಅವರ ವ್ಯಕ್ತಿತ್ವದ ಅಂಕು-ಡೊಂಕುಗಳ ಕುರಿತು ಅವರೊಂದಿಗೆ ಹೆಚ್ಚು ಜಗಳ ಮಾಡಿದ್ದರೆ ಅದು ನಾನೆ ಎಂದರು.

ಲಂಕೇಶ್ ಪತ್ರಿಕೆಯ ಜೊತೆಗಿನ ಒಡನಾಟ ನನ್ನನ್ನು ಒಬ್ಬ ಪ್ರಜ್ಞಾವಂತ ಬರಹಗಾರ್ತಿಯಾಗಿ ರೂಪಿಸಿತು. ಲಂಕೇಶರಿಗೆ ಪಾಳೇಗಾರಿಕೆ ಮನೋವೃತ್ತಿ ಎಷ್ಟಿತ್ತೋ, ಅಷ್ಟೇ ಪ್ರಮಾಣದ ತಾಯಿ ಹೃದಯ ಇತ್ತು ಎಂದರು.

ರೋಹಿತ್ ಅಗಸರಹಳ್ಳಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಅಧ್ಯಕ್ಷತೆ ವಹಿಸಿದ್ದ ಕಾರ್ಮಿಕ ಮುಖಂಡ ಧರ್ಮೆಶ್ ಮಾತನಾಡಿದರು. ಲೇಖಕಿ ರೂಪ ಹಾಸನ, ಬಾನು ಮುಷ್ತಾಕ್ ಅವರ ಕೃತಿ ಬೂಕರ್ ಪ್ರಶಸ್ತಿ ಪಟ್ಟಿಯಲ್ಲಿ ಬಂದಿರುವುದಕ್ಕೆ ಶುಭ ಹಾರೈಸಿದರು. ಕನ್ನಡ ಸಾಹಿತ್ಯ ಪರಿಷತ್ತಿನ ಕೋಶಾಧಿಕಾರಿ ಜಯರಾಮ್ ಉಪಸ್ಥಿತರಿದ್ದರು. ಲಂಕೇಶರ ನೀಲು ಕಾವ್ಯದ ಪೋಸ್ಟರ್‌ಗಳನ್ನು ಬಿಡುಗಡೆ ಮಾಡಲಾಯಿತು. ಸಭಾಂಗಣದ ಆವರಣದಲ್ಲಿ ಲಂಕೇಶರ ಎಲ್ಲ ಕೃತಿಗಳ ಪ್ರದರ್ಶನದ ವ್ಯವಸ್ಥೆ ಮಾಡಲಾಗಿತ್ತು.

ಬಿಜಿವಿಎಸ್ ತಾಲ್ಲೂಕು ಸಮಿತಿ ಸದಸ್ಯೆ ವನಜಾಕ್ಷಿ ನಿರೂಪಿಸಿದರು. ಕಲಾವಿದ ಕುಮಾರ್ ಕಟ್ಟೆಬೆಳಗುಲಿ ಕುವೆಂಪು ಅವರ ಓ ನನ್ನ ಚೇತನ ಗೀತೆ ಹಾಡಿದರು, ಕವಯತ್ರಿ ಜ.ನಾ.ತೇಜಶ್ರಿ ಅವರು ಲಂಕೇಶ್ ಅವರ ಕವಿತೆ ವಾಚಿಸಿ ವಿವರಿಸಿದರು. ಬಿಜಿವಿಎಸ್‌ನ ಅಹಮದ್ ಹಗರೆ ಸ್ವಾಗತಿಸಿದರು. ಕೆ.ಪಿ.ಆರ್.ಎಸ್ ಜಿಲ್ಲಾ ಘಟಕದ ಅಧ್ಯಕ್ಷ ಎಚ್.ಆರ್.ನವೀನ್‌ಕುಮಾರ್ ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.