ADVERTISEMENT

ಗ್ರಾಮ ಪಂಚಾಯಿತಿ ಚುನಾವಣೆ: ಅಖಾಡದಲ್ಲಿ ವಕೀಲರು, ಉಪನ್ಯಾಸಕರು, ಎಂಜಿನಿಯರ್‌ಗಳು

ಮೂರು ಪಕ್ಷಗಳ ಬೆಂಬಲದೊಂದಿಗೆ ಸ್ಪರ್ಧೆ, ಹಲವು ಕ್ಷೇತ್ರಗಳಲ್ಲಿ ಈಗಾಗಲೇ ಅವಿರೋಧ ಆಯ್ಕೆ

ಕೆ.ಎಸ್.ಸುನಿಲ್
Published 19 ಡಿಸೆಂಬರ್ 2020, 19:30 IST
Last Updated 19 ಡಿಸೆಂಬರ್ 2020, 19:30 IST
ವಾಸುದೇವ್, ಮೋಹನ್‌ ಕುಮಾರ್‌, ಕೃಷ್ಣಮೂರ್ತಿ
ವಾಸುದೇವ್, ಮೋಹನ್‌ ಕುಮಾರ್‌, ಕೃಷ್ಣಮೂರ್ತಿ   

ಹಾಸನ: ಉನ್ನತ ಶಿಕ್ಷಣ ಪಡೆದ ಹಲವು ಮಂದಿ ಈ ಬಾರಿ ಗ್ರಾಮ ಪಂಚಾಯಿತಿ ಸ್ಪರ್ಧಾ ಕಣದಲ್ಲಿರುವುದು ವಿಶೇಷವಾಗಿದೆ. ಅದರಲ್ಲೂ ಹಲವರು ಈಗಾಗಲೇ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಸರ್ಕಾರಿ ಕಾಲೇಜು ಅತಿಥಿ ಉಪನ್ಯಾಸಕರು, ಖಾಸಗಿ ಶಾಲೆ ಶಿಕ್ಷಕರು, ಉಪನ್ಯಾಸಕರು,ಪದವೀಧರರು, ಸ್ನಾತಕೋತ್ತರ ಪದವೀಧರರು, ಬಿಇ ಪದವೀಧರರು, ಕಾನೂನು ಪದವಿ ಪಡೆದವರು, ನಿವೃತ್ತ ಸರ್ಕಾರಿ ಅಧಿಕಾರಿಗಳು ಬದಲಾವಣೆ ಬಯಸಿ ಸ್ಪರ್ಧಾ ಕಣದಲ್ಲಿದ್ದಾರೆ.

ಕಾಂಗ್ರೆಸ್‌, ಜೆಡಿಎಸ್‌, ಬಿಜೆಪಿ ಪಕ್ಷದ ಬೆಂಬಲದೊಂದಿಗೆ ಹಲವರು ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಕೆಲವರು ಸ್ವತಂತ್ರಅಭ್ಯರ್ಥಿಗಳಾಗಿ ಸ್ಪರ್ಧಾ ಕಣದಲ್ಲಿದ್ದಾರೆ. ಇವರಲ್ಲಿ ಕೆಲವರ ವಿರುದ್ಧ ಸ್ಪರ್ಧಿಗಳು ಅನಕ್ಷರಸ್ಥರೂ ಆಗಿದ್ದಾರೆ.

ADVERTISEMENT

ಚನ್ನರಾಯಪಟ್ಟಣ ತಾಲ್ಲೂಕಿನ ಕಲ್ಕರೆ ಗ್ರಾಮ ಪಂಚಾಯಿತಿ ದೇವಗೆರೆ ಗ್ರಾಮದಿಂದ ವಕೀಲ ಬಸವರಾಜ್‌ ಸ್ಪರ್ಧಿಸಿದ್ದಾರೆ. ಕಳೆದಬಾರಿಯೂ ಸ್ಪರ್ಧಿಸಿ ಆಯ್ಕೆಯಾಗಿದ್ದರು. ನುಗ್ಗೇಹಳ್ಳಿ ಗ್ರಾಮ ಪಂಚಾಯಿತಿಯ ಎರಡನೇ ಬ್ಲಾಕ್‌ನಿಂದ ನಿವೃತ್ತ ಹೆಡ್‌ ಕಾನ್‌ಸ್ಟೇಬಲ್‌ ಬೆಟ್ಟಯ್ಯ ಮೊದಲ ಬಾರಿಗೆ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ.

ಕಲ್ಕೆರೆ ಕ್ಷೇತ್ರದಿಂದ ಆಯ್ಕೆ ಬಯಸಿರುವ ಇಂಗ್ಲಿಷ್‌ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ವಾಸುದೇವ್‌ ಅವರುಎಸ್‌ಎಫ್‌ಐ, ಡಿವೈಎಫ್‌ಐ ನೇತೃತ್ವದಲ್ಲಿ ನಡೆದ ಹಲವು ಹೋರಾಟಗಳಲ್ಲಿ ಭಾಗಿಯಾಗಿದ್ದರು. ಪ್ರಸ್ತುತ ಡಿವೈಎಫ್‌ಐ ಜಿಲ್ಲಾ ಘಟಕದ ಅಧ್ಯಕ್ಷರಾಗಿದ್ದಾರೆ.

ಹೀರಿಸಾವೆ ಪಂಚಾಯಿತಿ ಎರಡನೇ ಬ್ಲಾಕ್‌ನಿಂದ ಕಾನೂನು ಪದವೀಧರ ಮಂಜುನಾಥ ಪ್ರಸಾದ್‌, ನಾಲ್ಕನೇ ಬ್ಲಾಕ್‌ನಿಂದ ಖಾಸಗಿ ಶಾಲೆ ಶಿಕ್ಷಕಿ ವೇದಾವತಿ, ಎಂಬಿಎ ಪದವೀಧರ ಪ್ರತಿಭಾ ಭರತ್‌, ಕಿರೀಸಾವೆ ಗ್ರಾಮದಿಂದ ನಿವೃತ್ತ ಪೋಸ್ಟ್ ಮಾಸ್ಟರ್‌ ಲಕ್ಷ್ಮಣ ಬೆಳಗೌಡ ಹಾಗೂ ಮತ್ತಿಘಟ್ಟ ಪಂಚಾಯಿತಿ ಅರಕೆರೆ ಗ್ರಾಮದಿಂದ ಖಾಸಗಿ ಶಾಲೆ ಶಿಕ್ಷಕ ಅನಿಲ್ ಕಣಕ್ಕಿಳಿದಿದ್ದಾರೆ.

ಕಾಂತರಾಜಪುರ ಗ್ರಾಮ ಪಂಚಾಯಿತಿ ಕ್ಷೇತ್ರದಿಂದ ಆಯ್ಕೆ ಬಯಸಿ ಸ್ಪರ್ಧಿಸಿರುವ ಕೆ.ಎ.ನಿತಿನ್‌ ಅವರು ಮೆಕಾನಿಕಲ್ ಎಂಜಿನಿಯರ್.

2005ರ ಅವಧಿಯಲ್ಲಿ ಕಾಂತರಾಜಪುರ‌ ಗ್ರಾಮ ಪಂಚಾಯಿತಿಯಿಂದ ಆಯ್ಕೆಯಾಗಿದ್ದ ಕೆ.ಬಿ. ಸೋಮಶೇಖರ ಅವರು ಮತ್ತೊಮ್ಮೆಚುನಾವಣೆಗೆ ಸ್ಪರ್ಧಿಸಿದ್ದಾರೆ. ಇವರು ಕೆ.ಆರ್.ಪೇಟೆ ಖಾಸಗಿ‌ ಪಿಯು ಕಾಲೇಜಿನಲ್ಲಿ‌ ಐದು ವರ್ಷ ಪ್ರಾಂಶುಪಾಲರಾಗಿ ಕೆಲಸ ಮಾಡಿದ್ದಾರೆ.ಪ್ರಸ್ತುತ ಕಾಂತರಾಜಪುರದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ‌ ನಿರ್ದೇಶಕರಾಗಿದ್ದಾರೆ.

ಕೇರಳಾಪುರ ಎರಡನೇ ಬ್ಲಾಕ್‌ನಿಂದ ಪೆಟ್ರೋಲ್ ಬಂಕ್‌ ಮಾಲೀಕ ಬಿ.ಮಂಜುನಾಥ್‌, ಬಸವಾಪಟ್ಟಣ ನಾಲ್ಕನೇ ಬ್ಲಾಕ್‌ಗೆ ವಕೀಲ ಡಿ.ಸಿ.ಪ್ರಶಾಂತ್‌, ಮೂರನೇ ಬ್ಲಾಕ್‌ಗೆ ಅತಿಥಿ ಉಪನ್ಯಾಸಕ ಚಂದ್ರಶೇಖರ್‌ ಸ್ಪರ್ಧಿಸಿದ್ದಾರೆ.

ಖಾಸಗಿ ಕಾಲೇಜು ಉಪನ್ಯಾಸಕ ಆರ್‌.ಎಸ್‌.ಮಹೇಶ್ ಹಾಗೂ ಬಿ.ಇ ಪದವೀಧರ ಸತೀಶ್‌ ಅವರು ಬೇಲೂರು ತಾಲ್ಲೂಕಿನ ರಾಯಪುರ ಗ್ರಾಮ ಪಂಚಾಯಿತಿಯಲ್ಲಿ ಪರಸ್ಪರ ಎದುರಾಳಿಯಾಗಿದ್ದಾರೆ.

ಖಾಸಗಿ ಸುದ್ದಿ ವಾಹಿನಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಬಿಬಿಎಂ ಪದವೀಧರ ಕೃಷ್ಣಮೂರ್ತಿ ಅವರು ಬೇಲೂರು ತಾಲ್ಲೂಕಿನ ಇಬ್ಬೀಡು ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಮೊದಲ ಬಾರಿಗೆ ಅದೃಷ್ಟ ಪರೀಕ್ಷೆ ಇಳಿದಿದ್ದಾರೆ.

ಗ್ರಾಮೀಣ ಅಭಿವೃದ್ಧಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ, ದಲಿತ ಪರ ಹೋರಾಟಗಳಲ್ಲಿ ಗುರುತಿಸಿಕೊಂಡಿರುವ ಎಚ್‌.ಆರ್.ಮೋಹನ್‌ ಕುಮಾರ್‌ ಅವರು ಸಕಲೇಶಪುರ ತಾಲ್ಲೂಕಿನ ಹಾನುಬಾಳ್‌ ಹೋಬಳಿಯ ಅಚ್ಚರಡಿ ಗ್ರಾಮ ಪಂಚಾಯಿತಿ ಕ್ಷೇತ್ರದಿಂದ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಎಚ್.ಸಿ.ಚನ್ನಕೇಶವ ಕೃಷಿ ಕೆಲಸ ಮಾಡಿಕೊಂಡಿದ್ದಾರೆ. ಗ್ರಾಮೀಣ ಜನರ ಸೇವೆ ಮಾಡುವ ಉದ್ದೇಶದಿಂದ ಹಾನುಬಾಳ್‌ ಹೋಬಳಿಯ ಇಂದಿರಾನಗರ ಮೀಸಲು ಕ್ಷೇತ್ರದಿಂದ ಸ್ಪರ್ಧಿಸಿದ್ದಾರೆ.

ಕೃಷಿ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದು, ತಮ್ಮ ಕಾಫಿ ತೋಟದಲ್ಲಿ ವಿವಿಧ ಪ್ರಯೋಗ ಮಾಡುತ್ತಿರುವ ಎಂ.ಜೆ.ಅಪೂರ್ವ ಅವರು ಹಲಸುಲಿಗೆ ಮಹಿಳಾ ಮೀಸಲು ಕ್ಷೇತ್ರದಿಂದ ಸ್ಪರ್ಧಿಸಿದ್ದಾರೆ.

ಸಕಲೇಶಪುರ ಪಟ್ಟಣದ ಆಕ್ಸ್‌ಫರ್ಡ್‌ ಶಾಲೆಯಲ್ಲಿ ದೈಹಿಕ ಶಿಕ್ಷಣ ಶಿಕ್ಷಕರಾಗಿರುವ ಸುದರ್ಶನ್‌ ಅವರು ವಳಹಳ್ಳಿ ಕ್ಷೇತ್ರದಿಂದ ಹಾಗೂ ಮಳಲಿ ಗ್ರಾಮ ಪಂಚಾಯಿತಿ ಮಠಸಾಗರ ಕ್ಷೇತ್ರದಿಂದ ಎಂಬಿಎ ಪದವೀಧರ ಮದನ್‌ ಕುಮಾರ್ ಸ್ಪರ್ಧಿಸಿದ್ದಾರೆ.

‘ವಿದ್ಯಾವಂತ ಯುವ ಸಮುದಾಯ ರಾಜಕೀಯ ಪ್ರವೇಶಿಸಿದರೆ ಸರ್ಕಾರದ ಸೌಲಭ್ಯಗಳನ್ನು ಸರಿಯಾಗಿ ಬಳಸಿಕೊಳ್ಳಲುಸಹಕಾರಿ ಆಗಲಿದೆ. ಪಂಚಾಯಿತಿ ಮಟ್ಟದಲ್ಲಿ ಯಾವುದೇ ಭ್ರಷ್ಟಾಚಾರ ನಡೆಯದಂತೆ ನೋಡಿಕೊಳ್ಳಬಹುದು’ ಎಂದು ಸುದರ್ಶನ್‌ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.