ADVERTISEMENT

ನಟ ಚೇತನ್ ವಿರುದ್ಧ ಕಾನೂನು ಕ್ರಮಕ್ಕೆ ಆಗ್ರಹ

ಡಿ.ಸಿ, ಎಸ್ಪಿಗೆ ಮನವಿ ಸಲ್ಲಿಸಿದ ಜಿಲ್ಲಾ ಬ್ರಾಹ್ಮಣ ಸಭಾ

​ಪ್ರಜಾವಾಣಿ ವಾರ್ತೆ
Published 17 ಜೂನ್ 2021, 15:10 IST
Last Updated 17 ಜೂನ್ 2021, 15:10 IST
ಹಾಸನ ಜಿಲ್ಲಾ ಬ್ರಾಹ್ಮಣ ಸಭಾದಿಂದ ಪೊಲೀಸ್‌ ವರಿಷ್ಠಾಧಿಕಾರಿಗೆ ಮನವಿ ಸಲ್ಲಿಸಲಾಯಿತು.
ಹಾಸನ ಜಿಲ್ಲಾ ಬ್ರಾಹ್ಮಣ ಸಭಾದಿಂದ ಪೊಲೀಸ್‌ ವರಿಷ್ಠಾಧಿಕಾರಿಗೆ ಮನವಿ ಸಲ್ಲಿಸಲಾಯಿತು.   

ಹಾಸನ: ‘ಪ್ರಚಾರಕ್ಕಾಗಿ ಬ್ರಾಹ್ಮಣ ಸಮುದಾಯದ ಕುರಿತು ಅವಹೇಳನಕಾರಿಯಾಗಿ ಮಾತನಾಡುತ್ತಿರುವ ಚಿತ್ರನಟ ಚೇತನ್ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು’ ಎಂದು ಆಗ್ರಹಿಸಿ ಜಿಲ್ಲಾ ಬ್ರಾಹ್ಮಣ ಸಭಾ ಆಗ್ರಹಿಸಿದೆ.

ಈ ಸಂಬಂಧ ಪೊಲೀಸ್‍ ವರಿಷ್ಠಾಧಿಕಾರಿ ಆರ್.ಶ್ರೀನಿವಾಸ್‌ ಗೌಡ ಹಾಗೂ ಜಿಲ್ಲಾಧಿಕಾರಿ ಆರ್‌.ಗಿರೀಶ್ ಅವರಿಗೆ ಗುರುವಾರ ಮನವಿ ಸಲ್ಲಿಸಿದ ಮುಖಂಡರು,‘ಅರ್ಚಕ ವೃತ್ತಿ ಮೂಲಕ ಸ್ವಾಭಿಮಾನಿ ಬದುಕು ಕಟ್ಟಿಕೊಂಡಿರುವ ಬ್ರಾಹ್ಮಣರನ್ನು ಅವಾಚ್ಯ ಶಬ್ಧಗಳಿಂದ ನಿಂದಿಸಿರುವ ವಿಡಿಯೋ ವೈರಲ್ ಆಗಿದೆ. ಅರ್ಥವಿಲ್ಲದ ಹೇಳಿಕೆ ಮೂಲಕ ಸಮಾಜಕ್ಕೆ ತಪ್ಪು ಸಂದೇಶ ಸಾರುತ್ತಿದ್ದಾರೆ. ಪ್ರಚಾರ ಬೇಕು ಎಂಬ ಕಾರಣಕ್ಕೆ ಬ್ರಾಹ್ಮಣರನ್ನು ಆಧ್ಯಾತ್ಮಿಕ ಭಯೋತ್ಪಾದಕರು, ಬ್ರಾಹ್ಮಣ್ಯದ ದಬ್ಬಾಳಿಕೆ ಎಂದು ಹಿಯಾಳಿಸಿದ್ದಾರೆ. ಇದರಿಂದ ಸಮುದಾಯಕ್ಕೆ ಭಾರಿ ನೋವಾಗಿದೆ’ ಎಂದು ಹೇಳಿದರು.

ಈ ಸಂಬಂಧ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿಯಿಂದ ಚೇತನ್ ವಿರುದ್ಧ ದೂರು ದಾಖಲಿಸಿದ್ದು, ತ್ವರಿತಗತಿಯಲ್ಲಿ ವಿಚಾರಣೆ ನಡೆಸಿ, ಅವರ ವಿರುದ್ಧ ಕಾನೂನುಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.

ADVERTISEMENT

ನಿಯೋಗದಲ್ಲಿ ಸಮುದಾಯದ ಮುಖಂಡರಾದ ಡಾ. ರಮೇಶ್, ಕೆ.ಎಸ್. ನಾಗರಾಜ್, ಎಸ್.ಕೆ. ವೇಣುಗೋಪಾಲ್, ಜಿಲ್ಲಾ ಬ್ರಾಹ್ಮಣ ಸಭಾ ಪ್ರಧಾನ ಕಾರ್ಯದರ್ಶಿ ಟಿ.ಎಚ್.ಚಂದ್ರಶೇಖರ್, ಸಹ ಕಾರ್ಯದರ್ಶಿ ಪ್ರಸಾದ್, ವಕೀಲ ಎನ್.ಎಸ್. ಗೋಪಾಲ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.