ADVERTISEMENT

ಹಾಸನ | ಬೋನಿಗೆ ಬಿದ್ದ ಚಿರತೆ: ಗ್ರಾಮಸ್ಥರು ನಿಟ್ಟುಸಿರು

​ಪ್ರಜಾವಾಣಿ ವಾರ್ತೆ
Published 4 ಅಕ್ಟೋಬರ್ 2024, 14:26 IST
Last Updated 4 ಅಕ್ಟೋಬರ್ 2024, 14:26 IST
ಅರಸೀಕೆರೆ ತಾಲ್ಲೂಕಿನ ರಾಮಸಾಗರ ಗ್ರಾಮದ ಬಳಿ ಇರಿಸಿದ್ದ ಬೋನಿಗೆ ಬಿದ್ದಿರುವ ಚಿರತೆ.
ಅರಸೀಕೆರೆ ತಾಲ್ಲೂಕಿನ ರಾಮಸಾಗರ ಗ್ರಾಮದ ಬಳಿ ಇರಿಸಿದ್ದ ಬೋನಿಗೆ ಬಿದ್ದಿರುವ ಚಿರತೆ.   

ಹಾಸನ: ಅರಸೀಕೆರೆ ತಾಲ್ಲೂಕಿನ ರಾಮಸಾಗರ ಗ್ರಾಮದಲ್ಲಿ ಹಲವು ದಿನಗಳಿಂದ ಕರು, ಕುರಿ, ನಾಯಿಗಳನ್ನು ಹೊತ್ತೊಯ್ದು ಆತಂಕ ಸೃಷ್ಟಿಸಿದ್ದ ಚಿರತೆ, ಅರಣ್ಯ ಇಲಾಖೆ ಇಟ್ಟಿದ್ದ ಬೋನಿಗೆ ಬಿದ್ದಿದೆ.

ಹಲವು ದಿನಗಳಿಂದ ಹಗಲು ವೇಳೆಯೇ ಜಾನುವಾರುಗಳ ಮೇಲೆ ದಾಳಿ ನಡೆಸುತ್ತಿದ್ದ ಚಿರತೆ ಆತಂಕ ಸೃಷ್ಟಿಸಿತ್ತು. ರೈತರ ಜಮೀನಿನಲ್ಲಿ ಕಾಣಿಸಿಕೊಂಡು ಜನರಲ್ಲಿ ಭಯದ ವಾತಾವರಣ ಮೂಡಿಸಿತ್ತು. ಗ್ರಾಮದಲ್ಲಿ ಆತಂಕಕ್ಕೆ ಕಾರಣವಾಗಿರುವ ಚಿರತೆ ಸೆರೆ ಹಿಡಿಯುವಂತೆ ಸ್ಥಳೀಯರು ಅರಣ್ಯ ಇಲಾಖೆಗೆ ಒತ್ತಾಯಿಸಿದ್ದರು.

ನಂತರ ಅರಣ್ಯ ಇಲಾಖೆ ಚಿರತೆ ಸೆರೆಗೆ ಕೆಲ ದಿನಗಳ ಹಿಂದೆ ಬೋನು ಇರಿಸಿದ್ದು, ಶುಕ್ರವಾರ ಎರಡು ವರ್ಷದ ಹೆಣ್ಣು ಚಿರತೆ ಬೋನಿಗೆ ಬಿದ್ದಿದೆ. ಇದರಿಂದಾಗಿ ಸ್ಥಳೀಯರು ಹಾಗೂ ರೈತರು ನಿಟ್ಟಿಸಿರು ಬಿಡುವಂತಾಗಿದೆ. ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ADVERTISEMENT

ಅರಸೀಕೆರೆ ತಾಲ್ಲೂಕಿನ ಹಲವು ಗ್ರಾಮಗಳಲ್ಲಿ ಚಿರತೆ, ಕರಡಿ ಹಾಗೂ ಇತರೆ ಕಾಡುಪ್ರಾಣಿಗಳ ಹಾವಳಿ ವಿಪರೀತವಾಗಿದ್ದು, ಅರಣ್ಯ ಇಲಾಖೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಹಾಗೂ ರೈತರು ಆಗ್ರಹಿಸಿದ್ದಾರೆ.

ತೋಟದಲ್ಲೇ ಬೀಡು ಬಿಟ್ಟ ಕಾಡಾನೆಗಳು: ಬೇಲೂರು ತಾಲ್ಲೂಕಿನ ಲಕ್ಕುಂದ ಗ್ರಾಮದ ಕೊಡಗನಹಳ್ಳಿ ಎಸ್ಟೇಟ್‌ನಲ್ಲಿ ಒಂದು ಕಡೆಯಿಂದ ಮತ್ತೊಂದು ಕಡೆಗೆ ಆನೆಗಳ ಹಿಂಡು ದಾಟಿ ಹೋಗಿದ್ದು, ಕಾಡಾನೆಗಳು ಕಾಣುತ್ತಿದ್ದಂತೆ ಕೆಲಸ ನಿಲ್ಲಿಸಿದ ಕಾರ್ಮಿಕರು, ಆನೆಗಳಿಂದ ತಪ್ಪಿಸಿಕೊಳ್ಳಲು ಮರದ ಬದಿಯಲ್ಲಿ ಅಡಗಿ ಕುಳಿತುಕೊಳ್ಳಬೇಕಾಯಿತು.

ಕಾಫಿ ತೋಟದೊಳಗೆ ಆನೆಗಳ ಹಿಂಡು ಬೀಡು ಬಿಟ್ಟಿದ್ದು, ಅರಣ್ಯ ಇಲಾಖೆ, ಆನೆ ಕಾರ್ಯಪಡೆ ಸಿಬ್ಬಂದಿ ಸ್ಥಳದಲ್ಲೇ ಠಿಕಾಣಿ ಹೂಡಿದ್ದಾರೆ. ಕಾಡಾನೆಗಳ ಚಲನವಲನದ ಬಗ್ಗೆ ಸ್ಥಳೀಯರಿಗೆ ಮಾಹಿತಿ ನೀಡುತ್ತಿದ್ದು, ಕಾರ್ಮಿಕರು ಆತಂಕದಲ್ಲಿ ಕೆಲಸ ಮಾಡುವಂತಾಗಿದೆ.

ಕಾಡಾನೆಗಳನ್ನು ಓಡಿಸಲು ಪಟಾಕಿ ಸಿಡಿಸಿದ್ದರಿಂದ ಗುಂಪಿನಿಂದ ಕಾಡಾನೆಗಳು ಬೇರೆಯಾಗಿದ್ದು ಮತ್ತಷ್ಟು ಅಂತಂಕಕ್ಕೆ ಕಾರಣವಾಗಿದೆ.

ಕಾಡಾನೆ ಹಾವಳಿಯಿಂದ ಇಲ್ಲಿನ ರೈತರು ಹಾಗೂ ಕಾಫಿ ಬೆಳೆಗಾರರು ರೋಸಿ ಹೋಗಿದ್ದು, ಕಾಡಾನೆಗಳ ಹಾವಳಿಗೆ ಶಾಶ್ವತ ಪರಿಹಾರ ಕಂಡುಹಿಡಿದು ಸೂಕ್ತ ಪರಿಹಾರ ಒದಗಿಸಬೇಕು ಎಂದು ಆಗ್ರಹಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.