ADVERTISEMENT

ಬಡವರ ವೈದ್ಯಕೀಯ ಚಿಕಿತ್ಸಾ ವೆಚ್ಚ ಸರ್ಕಾರವೇ ಭರಿಸಲಿ

ಜನರ ಆರೋಗ್ಯದ ಜತೆ ಚೆಲ್ಲಾಟ ಬೇಡ: ಶಾಸಕ ಎಚ್‌.ಡಿ.ರೇವಣ್ಣ

​ಪ್ರಜಾವಾಣಿ ವಾರ್ತೆ
Published 22 ಏಪ್ರಿಲ್ 2021, 13:32 IST
Last Updated 22 ಏಪ್ರಿಲ್ 2021, 13:32 IST
ಎಚ್‌.ಡಿ.ರೇವಣ್ಣ
ಎಚ್‌.ಡಿ.ರೇವಣ್ಣ   

ಹಾಸನ: ರಾಜ್ಯದಲ್ಲಿ ಕೋವಿಡ್‌ ನಿಯಂತ್ರಣ ತಪ್ಪಿದ್ದು, ಸರ್ಕಾರ ಜನರ ಆರೋಗ್ಯದ ಜೊತೆಗೆ ಚೆಲ್ಲಾಟವಾಡದೇ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಶಾಸಕ ಎಚ್‌.ಡಿ. ರೇವಣ್ಣ ಒತ್ತಾಯಿಸಿದರು.

ಕೋವಿಡ್‌ ಎರಡನೇ ಅಲೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ತಜ್ಞರು ಈ ಬಗ್ಗೆ ಮೊದಲೇ ಸರ್ಕಾರಕ್ಕೆ ಸಲಹೆ ನೀಡಿದ್ದರೂ ಎರಡು ತಿಂಗಳಿಂದ ಯಾವುದೇ ನಿರ್ಧಾರ ಕೈಗೊಳ್ಳಲಿಲ್ಲ. ಎರಡೂ ರಾಷ್ಟ್ರೀಯ ಪಕ್ಷಗಳಿಗೆ ಉಪ ಚುನಾವಣೆಯೇ ಮುಖ್ಯವಾಯಿತು ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.

ಕೋವಿಡ್‌ಗೆ ಸರಿಯಾದ ಚಿಕಿತ್ಸೆ ಸಿಗದೇ ಗ್ರಾಮೀಣ ಭಾಗದ ಜನರು, ರೈತರು ಹಾಗೂ ಬಡವರು ಪರಿತಪಿಸುತ್ತಿದ್ದಾರೆ.ರಾಜ್ಯಸಭಾ ಸದಸ್ಯ ಎಚ್‌.ಡಿ.ದೇವೇಗೌಡ ಮತ್ತು ಚನ್ನಮ್ಮ ಅವರು ಕೋವಿಡ್‌ಗೆ ಚಿಕಿತ್ಸೆ ಪಡೆದು ಆಸ್ಪತ್ರೆಯಲ್ಲಿ ಚೆಕ್‌ ನೀಡಿ ಹೊರಗೆ ಬಂದಿದ್ದಾರೆ. ಮಾಜಿ ಪ್ರಧಾನಿಗೆ ಈ ಸ್ಥಿತಿಯಾದರೆ ಸಾಮಾನ್ಯ ಜನರ ಪಾಡೇನು? ಖಾಸಗಿ ಆಸ್ಪತ್ರೆಯಲ್ಲಿ ಜನರಿಂದ ಸುಲಿಗೆ ಮಾಡಲಾಗುತ್ತಿದೆ. ಸರ್ಕಾರ ಇದನ್ನೆಲ್ಲ ನೋಡಿಯೂ ಕಣ್ಮುಚ್ಚಿ ಕುಳಿತಿದೆ. ಬಡವರ ವೈದ್ಯಕೀಯ ಚಿಕಿತ್ಸಾ ವೆಚ್ಚವನ್ನು ಸರ್ಕಾರವೇ ಭರಿಸಬೇಕು ಎಂದು ಒತ್ತಾಯಿಸಿದರು.

ADVERTISEMENT

ಜಿಲ್ಲಾಧಿಕಾರಿ ಕೂಡಲೇ ಖಾಸಗಿ ಆಸ್ಪತ್ರೆಗಳ ಮಾಲೀಕರ ಸಭೆ ಕರೆದು ಖಾಸಗಿ ಆಸ್ಪತ್ರೆಗಳಿಗೆ ಕಟ್ಟುನಿಟ್ಟಿನ ಆದೇಶ ನೀಡಬೇಕು. ಚಿಕಿತ್ಸಾ ವೆಚ್ಚಗಳ ಬಗ್ಗೆ ಆಯಾ ಆಸ್ಪತ್ರೆಯಲ್ಲಿ ಪಟ್ಟಿ ಪ್ರದರ್ಶನ ಮಾಡಬೇಕು. ಜಿಲ್ಲೆಯಲ್ಲಿ 16 ಖಾಸಗಿ ಆಸ್ಪತ್ರೆಗಳಲ್ಲಿ ಮಾತ್ರ ಕೋವಿಡ್‌ ಚಿಕಿತ್ಸೆಗೆ ಮೀಸಲಿಡಲಾಗಿದೆ ಎಂದರು.

ರೆಮ್‌ಡಿಸಿವಿರ್‌ ಚುಚ್ಚುಮದ್ದು ಕೊರತೆ ಉಂಟಾಗಿದೆ. ದುಪ್ಪಟ್ಟು ಹಣ ನೀಡಿ ಖರೀದಿಸಬೇಕಾದ ಪರಿಸ್ಥಿತಿ ಉಂಟಾಗಿದೆ. ರಾಜ್ಯ ಸರ್ಕಾರ ಕೊರೊನಾ ನಿಯಂತ್ರಣಕ್ಕೆ ಪ್ರತಿ ಜಿಲ್ಲೆಗೂ ₹10 ಕೋಟಿ ನೀಡಬೇಕು. ಅದರಲ್ಲಿ ತಾಲ್ಲೂಕುವಾರು ತಲಾ ಒಂದು ಕೋಟಿ ರೂಪಾಯಿ ಹಂಚಿಕೆ ಮಾಡಿ ಉಳಿದ ಹಣವನ್ನು ಜಿಲ್ಲಾಧಿಕಾರಿಗೆ ನೀಡಬೇಕು ಎಂದು ಎಂದರು.

ಕೊರೊನಾದಿಂದ ಜನರು ಸಂಕಷ್ಟದಲ್ಲಿರುವಾಗ ಗ್ರಾಮೀಣ ಭಾಗದ ಚಿಲ್ಲರೆ ಅಂಗಡಿಗಳಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡಲಾಗುತ್ತಿದ್ದು, ಕೆಲವರು ತಮ್ಮ ಪತ್ನಿಯ ಮಾಂಗಲ್ಯ ಸರ ಅಡವಿಟ್ಟು ಮದ್ಯ ಸೇವನೆ ಮಾಡುತ್ತಿದ್ದಾರೆ. ಅಬಕಾರಿ ಇಲಾಖೆ ಅಧಿಕಾರಿಗಳು ಪ್ರತಿ ಅಂಗಡಿಯಲ್ಲಿ ಪಿಗ್ಮಿ ಸಂಗ್ರಹಿಸುವ ರೀತಿ ಮಾಮೂಲಿ ಹಣ ಸಂಗ್ರಹಿಸುತ್ತಿದ್ದಾರೆ. ಆದ್ದರಿಂದ ಗ್ರಾಮೀಣ ಭಾಗದಲ್ಲಿ ಮದ್ಯ ಮಾರಾಟಕ್ಕೆ ಕಡಿವಾಣ ಹಾಕಬೇಕು ಎಂದು ಆಗ್ರಹಿಸಿದರು.

ಕೋವಿಡ್‌ನಿಂದ ಜನ ಸಂಕಷ್ಟ ಅನುಭವಿಸಿದರೆ ಮತ್ತೊಂದೆಡೆ ಸಾರಿಗೆ ನೌಕರರ ಮುಷ್ಕರದಿಂದ ಸಾಕಷ್ಟು ತೊಂದರೆ ಅನುಭವಿಸುವಂತಾಯಿತು. ಖಾಸಗಿ ಬಸ್‌ಗಳಲ್ಲಿ ಸಾರ್ವಜನಿಕರ ಹಣ ಸುಲಿಗೆ ಮಾಡಲಾಯಿತು. ಸರ್ಕಾರವೇ ಇದಕ್ಕೆ ಅನುಮತಿಯನ್ನೂ ನೀಡಿತ್ತು. ಹಬ್ಬದ ಸಂದರ್ಭ ಬಿಟ್ಟು ನಂತರದಲ್ಲಿ ಸಾರಿಗೆ ಸಂಸ್ಥೆ ನೌಕರರು ಮುಷ್ಕರ ಮಾಡಬಹುದಿತ್ತು ಎಂದು ಅಭಿಪ್ರಾಯಪಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.