ADVERTISEMENT

ಕಲ್ಲೇಸೋಮನಹಳ್ಳಿ ಏತ ನೀರಾವರಿ ಯೋಜನೆಗೆ ಶಾಸಕ ಸಿ.ಎನ್. ಬಾಲಕೃಷ್ಣ ಚಾಲನೆ

​ಪ್ರಜಾವಾಣಿ ವಾರ್ತೆ
Published 6 ಜುಲೈ 2025, 2:19 IST
Last Updated 6 ಜುಲೈ 2025, 2:19 IST
ಬಾಗೂರು ಹೋಬಳಿಯ ನವಿಲೆ ಗ್ರಾಮದ ಬಳಿ ಇರುವ ಬಾಗೂರು–ನವಿಲೆ ಸುರಂಗದ ನಿರ್ಗಮನ ದ್ವಾರದ ಹೇಮಾವತಿ ಮುಖ್ಯ ನಾಲೆಯ ಜಾಕ್‌ವ್‌ಲ್‌ನಲ್ಲಿ ಶಾಸಕ ಸಿಎನ್ ಬಾಲಕೃಷ್ಣ ಕಲ್ಲೇ ಸೋಮನಹಳ್ಳಿ ಏತ ನೀರಾವರಿ ಯೋಜನೆಗೆ ಪೂಜೆ ಸಲ್ಲಿಸುವ ಮೂಲಕ ಚಾಲನೆ ನೀಡಿದರು
ಬಾಗೂರು ಹೋಬಳಿಯ ನವಿಲೆ ಗ್ರಾಮದ ಬಳಿ ಇರುವ ಬಾಗೂರು–ನವಿಲೆ ಸುರಂಗದ ನಿರ್ಗಮನ ದ್ವಾರದ ಹೇಮಾವತಿ ಮುಖ್ಯ ನಾಲೆಯ ಜಾಕ್‌ವ್‌ಲ್‌ನಲ್ಲಿ ಶಾಸಕ ಸಿಎನ್ ಬಾಲಕೃಷ್ಣ ಕಲ್ಲೇ ಸೋಮನಹಳ್ಳಿ ಏತ ನೀರಾವರಿ ಯೋಜನೆಗೆ ಪೂಜೆ ಸಲ್ಲಿಸುವ ಮೂಲಕ ಚಾಲನೆ ನೀಡಿದರು   

ಬಾಗೂರು (ನುಗ್ಗೇಹಳ್ಳಿ): ರೈತರ ದಶಕದ ಕನಸಾಗಿದ್ದ ಬಾಗೂರು ಹಾಗೂ ನುಗ್ಗೇಹಳ್ಳಿ ಹೋಬಳಿಗಳ 20ಕ್ಕೂ ಹೆಚ್ಚು ಕೆರೆಗಳನ್ನು ತುಂಬಿಸುವ ಕಲ್ಲೇ ಸೋಮನಹಳ್ಳಿ ಏತ ನೀರಾವರಿ ಯೋಜನೆಗೆ ಅಧಿಕೃತವಾಗಿ ಚಾಲನೆ ನೀಡಲಾಗಿದೆ ಎಂದು ಶಾಸಕ ಸಿ.ಎನ್ ಬಾಲಕೃಷ್ಣ ತಿಳಿಸಿದರು.

ಹೋಬಳಿಯ ನವಿಲೆ ಗ್ರಾಮದ ಬಳಿ ಇರುವ ಬಾಗೂರು–ನವಿಲೆ ಸುರಂಗದ ನಿರ್ಗಮನ ದ್ವಾರದ ಹೇಮಾವತಿ ಮುಖ್ಯ ನಾಲೆಯ ಜಾಕ್‌ವೆಲ್‌ನಲ್ಲಿ ಯೋಜನೆಗೆ ಚಾಲನೆ ನೀಡಿ ಮಾತನಾಡಿದರು.

ಬಾಗೂರು ಹೋಬಳಿಯ ಕೆಂಬಾಳು ಎಂ ಶಿವರ ಹಾಗೂ ನುಗ್ಗೇಹಳ್ಳಿ ಹೋಬಳಿಯ ತಗಡೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಸುಮಾರು 20 ಕೆರೆಗಳನ್ನು ತುಂಬಿಸುವ ಯೋಜನೆಯಾಗಿದ್ದು, ನಬಾರ್ಡ್ ನೆರವಿನಿಂದ ಸುಮಾರು ₹35 ಕೋಟಿ ವೆಚ್ಚದಲ್ಲಿ ಯೋಜನೆಯನ್ನು ಪೂರ್ಣಗೊಳಿಸಲಾಗಿದೆ. ಕಳೆದ ವರ್ಷ ಪ್ರಯೋಗಿಕವಾಗಿ ಯೋಜನೆ ವ್ಯಾಪ್ತಿಯ ಕೆಲವು ಕೆರೆಗಳಿಗೆ ನೀರು ಹರಿಸಲಾಗಿತ್ತು. ಎಂ ಶಿವರ ಹಾಗೂ ಕೆಂಬಾಳು ವ್ಯಾಪ್ತಿಯಲ್ಲಿ ಪೈಪ್‌ಲೈನ್ ಕಾಮಗಾರಿ ಕೆಲವು ಭಾಗಗಳಲ್ಲಿ ಸಣ್ಣಪುಟ್ಟ ಸಮಸ್ಯೆಗಳಿಂದ ಪೂರ್ಣಗೊಂಡಿರಲಿಲ್ಲ. ಆದರೆ ಆ ಎಲ್ಲಾ ಕಾಮಗಾರಿಗಳನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸುವಂತೆ ಗುತ್ತಿಗೆದಾರರಿಗೆ ತಿಳಿಸಲಾಗಿತ್ತು. ಈಗ ಯೋಜನೆಯ ಸಂಪೂರ್ಣ ಕಾಮಗಾರಿ ಪೂರ್ಣಗೊಂಡಿದ್ದು ಈ ವರ್ಷದ ಪೂರ್ವ ಹಂಗಾಮಿನ ಪ್ರಾರಂಭದಿಂದಲೇ ಯೋಜನೆಗೆ ಚಾಲನೆ ನೀಡಲಾಗಿದೆ ಎಂದರು.

ADVERTISEMENT

ಹಾಸನ ಜಿಲ್ಲಾ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಅಧ್ಯಕ್ಷ ನವಿಲೆ ಪರಮೇಶ್, ನವಿಲೆ ನಾಗೇಶ್ವರ, ನೀರು ಬಳಕೆದಾರರ ಸಂಘದ ಅಧ್ಯಕ್ಷ ಎನ್‌.ಬಿ ನಾಗರಾಜ್, ಸಂಘದ ಕಾರ್ಯದರ್ಶಿ ದುಗ್ಗೇನಹಳ್ಳಿ ವೀರೇಶ್, ನವಿಲೆ ಕೃಷಿ ಪತ್ತಿನ ಅಧ್ಯಕ್ಷ ಕುಮಾರಸ್ವಾಮಿ, ಮುಖಂಡರಾದ ಹೊಸೂರು ಚಂದ್ರಪ್ಪ, ಮರಿ ದೇವೇಗೌಡ, ವಿ.ಎನ್ ಮಂಜುನಾಥ್, ದೀಪು, ಭಕ್ತರಹಳ್ಳಿ ಪುಟ್ಟರಾಜು, ಸಂಪತ್ ಕುಮಾರ್, ಪುಟ್ಟಸ್ವಾಮಿ, ಎನ್.ಕೆ ನಾಗಪ್ಪ, ಓಬಳಾಪುರ ಬಸವರಾಜ್, ದೇವರಾಜ್, ಸೇರಿದಂತೆ ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ಹಾಜರಿದ್ದರು.

‘100 ಕೋಟಿ ಅನುದಾನಕ್ಕೆ ಮನವಿ’

ನವಿಲೆ ಬಳಿ ಇರುವ ಹೇಮಾವತಿ ಮುಖ್ಯನಾಲೆಯಿಂದ ಜಾಕ್‌ವೆಲ್ ಮೂಲಕ ಪೈಪ್‌ಲೈನ್ ಅಳವಡಿಸಿ ಎಡ ಮತ್ತು ಬಲಭಾಗದ 20ಕ್ಕೂ ಹೆಚ್ಚು ಕೆರೆಗಳನ್ನು ತುಂಬಿಸುವ ಯೋಜನೆಯಾಗಿದೆ. ಈ ಭಾಗದ ರೈತರಿಗೆ ಕೆರೆಕಟ್ಟೆಗಳು ತುಂಬುವುದರಿಂದ ಮುಂಬರುವ ದಿನಗಳಲ್ಲಿ ಹೆಚ್ಚಿನ ಅನುಕೂಲವಾಗಲಿದೆ. ತಾಲ್ಲೂಕಿನ ಏತ ನೀರಾವರಿ ಯೋಜನೆಗಳ ಆಧುನೀಕರಣಕ್ಕೆ ನಬಾರ್ಡ್ ವತಿಯಿಂದ ₹100 ಕೋಟಿ ಅನುದಾನ ನೀಡುವಂತೆ ರಾಜ್ಯ ಸರ್ಕಾರ ಹಾಗೂ ನಬಾರ್ಡ್ ಅಧಿಕಾರಿಗಳಿಗೆ ಮನವಿ ಮಾಡಲಾಗಿದೆ. ಅನುದಾನ ದೊರೆತರೆ ನಾಲೆಗಳ ಆಧುನೀಕರಣ ಸೇರಿದಂತೆ ಹೊಸ ಯಂತ್ರಗಳನ್ನು ಜಾಕ್‌ವೆಲ್‌ಗಳಲ್ಲಿ ಅಳವಡಿಕೆ ಮಾಡುವ ಮೂಲಕ ಯೋಜನೆಗೆ ವೇಗ ನೀಡಲಾಗುತ್ತದೆ ಎಂದರು. ನೀರೆತ್ತುವ ಮೋಟಾರ್‌ಗೆ ಚಾಲನೆ: ಈ ವರ್ಷದ ಪೂರ್ವ ಹಂಗಾಮಿನಲ್ಲಿ ನವಿಲೆ ಏತ ನೀರಾವರಿ ಯೋಜನೆ ವ್ಯಾಪ್ತಿಯ ಕೆರೆಗಳಿಗೆ ನೀರು ಹರಿಸುವ ಸಲುವಾಗಿ ನೀರೆತ್ತುವ ಮೋಟಾರ್‌ಗೆ ಇದೇ ಸಂದರ್ಭದಲ್ಲಿ ಶಾಸಕ ಸಿ.ಎನ್ ಬಾಲಕೃಷ್ಣರವರು ಚಾಲನೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.