ADVERTISEMENT

ಹಾಸನ: ಬೆಲೆ ಏರಿಕೆ ನಡುವೆ ಬೆಳಕಿನ ಹಬ್ಬದ ಸಂಭ್ರಮ

ಅಗತ್ಯ ವಸ್ತುಗಳ ಖರೀದಿಗೆ ಮುಗಿಬಿದ್ದ ಗ್ರಾಹಕರು

ಕೆ.ಎಸ್.ಸುನಿಲ್
Published 3 ನವೆಂಬರ್ 2021, 19:30 IST
Last Updated 3 ನವೆಂಬರ್ 2021, 19:30 IST
ಹಾಸನದಲ್ಲಿ ಮಣ್ಣಿನ ಹಣತೆಗಳ ಖರೀದಿಯಲ್ಲಿ ನಿರತರಾಗಿರುವ ಗ್ರಾಹಕರು
ಹಾಸನದಲ್ಲಿ ಮಣ್ಣಿನ ಹಣತೆಗಳ ಖರೀದಿಯಲ್ಲಿ ನಿರತರಾಗಿರುವ ಗ್ರಾಹಕರು   

ಹಾಸನ: ಬೆಳಕಿನ ಹಬ್ಬ ದೀಪಾವಳಿ ಸಂಭ್ರಮ ಜಿಲ್ಲೆಯಾದ್ಯಂತ ಮನೆ ಮಾಡಲಿದೆ. ಹಬ್ಬದ ಅಂಗವಾಗಿ ಅಗತ್ಯ ವಸ್ತುಗಳ ಖರೀದಿಗೆ ಜನರು ಮುಗಿಬಿದ್ದಿದ್ದಾರೆ.

ಕಟ್ಟಿನಕೆರೆ ಮಾರುಕಟ್ಟೆ, ಹೂವು, ತರಕಾರಿ ಮಾರುಕಟ್ಟೆ, ಕಸ್ತೂರಬಾ ರಸ್ತೆ, ಮಹಾವೀರ್‌ ವೃತ್ತ, ಎನ್‌.ಆರ್‌. ವೃತ್ತ ಬದಿಯಲ್ಲಿ ಜನಜಾತ್ರೆಯೇ ನೆರೆದಿತ್ತು. ಕಸ್ತೂರ ಬಾ ರಸ್ತೆಯಲ್ಲಿ ಟ್ರಾಫಿಕ್‌ ಜಾಮ್‌ ಉಂಟಾಗಿದ್ದು, ವಾಹನ ಸವಾರರು ಪರದಾಡಿದರು. ಎಲ್ಲೆಂದರಲ್ಲಿ ದ್ವಿಚಕ್ರ ವಾಹನಗಳನ್ನು ಅಡ್ಡಾದಿಡ್ಡಿಯಾಗಿ ನಿಲ್ಲಿಸಿದ್ದರು.

ಅಗತ್ಯ ವಸ್ತುಗಳ ಬೆಲೆ ಏರಿಕೆ ನಡುವೆಯೂ ಹೂವು, ಹಣ್ಣು, ಬಾಳೆದಿಂಡು, ಮಾವಿನ ಸೊಪ್ಪು ಮಾರಾಟ ಜೋರಾಗಿತ್ತು. ಹಲವು ವ್ಯಾಪಾರಿಗಳುಮತ್ತು ಗ್ರಾಹಕರು ಮಾಸ್ಕ್‌ ಧರಿಸಿರಲಿಲ್ಲ. ಅಂತರವನ್ನು ಪಾಲಿಸಲಿಲ್ಲ. ಹಣತೆ, ಪಟಾಕಿ ವ್ಯಾಪಾರಿಗಳು ಈ ಬಾರಿ ಉತ್ತಮ ವ್ಯಾಪಾರದ ನಿರೀಕ್ಷೆಯಲ್ಲಿದ್ದಾರೆ.

ADVERTISEMENT

ಮನೆಗಳಲ್ಲಿ ಪ್ರತಿ ದಿನ ರಾತ್ರಿ ಮಹಿಳೆಯರು ಹಣತೆಗಳನ್ನು ಬೆಳಗಿಸಿ ಹಬ್ಬವನ್ನು ಆಚರಿಸುತ್ತಾರೆ. ಹಾಗಾಗಿ, ದೀಪಾವಳಿ ಸಮಯದಲ್ಲಿ ಹಣತೆಗಳಿಗೆ ಹೆಚ್ಚಿನ ಬೇಡಿಕೆ. ಹಬ್ಬ ಆರಂಭಕ್ಕೂ ನಾಲ್ಕೈದು ದಿನ ಮುಂಚಿತವಾಗಿ ಮಣ್ಣಿನ ಹಣತೆ, ಪಿಂಗಾಣಿ ಹಣತೆಗಳು ಮಾರುಕಟ್ಟೆಗೆ ಲಗ್ಗೆ ಇಡುತ್ತವೆ. ಮಣ್ಣಿನಹಣತೆಗಳ ಭರಾಟೆ ಜೋರಾಗಿದೆ.

ಕಸ್ತೂರ ಬಾ ರಸ್ತೆ, ಹಾಸನಾಂಬ ರಸ್ತೆ ಸೇರಿದಂತೆ ಜನಸಂದಣಿ ಹೆಚ್ಚಿರುವ ಪ್ರದೇಶಗಳಲ್ಲಿ ವ್ಯಾಪಾರಿಗಳು ಬಗೆ ಬಗೆಯ ಮಣ್ಣಿನ ಅಲಂಕಾರಿಕ ದೀಪಗಳನ್ನು ತಳ್ಳು ಗಾಡಿಗಳಲ್ಲಿ, ಅಂಗಡಿಗಳ ಮುಂಭಾಗದಲ್ಲಿ ಇಟ್ಟು ಮಾರಾಟ ಮಾಡುತ್ತಿದ್ದಾರೆ. ₹ 5ರಿಂದ ಹಿಡಿದು ₹ 100 ಬೆಲೆಯ ಹಣತೆ, ದೀಪಗಳು ಗ್ರಾಹಕರನ್ನು ಸೆಳೆಯುತ್ತಿವೆ.

ದೀಪಾವಳಿ ಹಬ್ಬದ ಕಾರಣ ಸಹಜವಾಗಿಯೇ ಹಣ್ಣುಗಳ ಬೆಲೆಯಲ್ಲಿ ₹ 20ರಿಂದ ₹ 50 ಹೆಚ್ಚಾಗಿದೆ. ಚೆಂಡು ಹೂವಿನ ಮಾರಾಟ ನಡೆದಿದೆ.ನಗರದಲ್ಲಿ ಮಾರಾಟ ಮಳಿಗೆಗಳು ವಿದ್ಯುತ್‌ ದೀಪಗಳಿಂದ ಝಗಮಗಿಸುತ್ತಿವೆ. ಹಬ್ಬದ ಸಂಭ್ರಮ ಇಮ್ಮಡಿಗೊಳಿಸಲು ಮಹಿಳೆಯರು ಮಾರುಕಟ್ಟೆಯಲ್ಲಿ ಅಲಂಕಾರಿಕ ದೀಪಗಳನ್ನು ಕೊಳ್ಳುತ್ತಿರುವ ದೃಶ್ಯ ಕಂಡು ಬಂತು.

‘ಕಳೆದ ವರ್ಷ ಕೋವಿಡ್‌ನಿಂದಾಗಿ ವ್ಯಾಪಾರವೇ ಇರಲಿಲ್ಲ. ಜೀವನ ನಡೆಸುವುದೇ ಕಷ್ಟವಾಗಿತ್ತು. ಈ ಬಾರಿ ಜನರು ಹೊರಗೆ ಬರುತ್ತಿದ್ದಾರೆ. ಆದರೆ, ನಾಲ್ಕು ದಿನಗಳಿಂದ ಸುರಿಯುತ್ತಿರುವ ಮಳೆ ವ್ಯಾಪಾರಕ್ಕೆ ಅಡ್ಡಿ ಉಂಟು ಮಾಡುತ್ತಿದೆ. ಗುರುವಾರ, ಶುಕ್ರವಾರ ವ್ಯಾಪಾರ ಹೆಚ್ಚಾಗಬಹುದು. ಮಣ್ಣಿನ ಹಣತೆಗಳಿಗೆ ಬೇಡಿಕೆ ಹೆಚ್ಚು ಇದೆ’ ಎನ್ನುತ್ತಾರೆ ಕಟ್ಟಿನಕೆರೆ ಮಾರುಕಟ್ಟೆ ವರ್ತಕ ದೇವರಾಜ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.