ಹಾಸನ: ಕೊರೊನಾ ಸೋಂಕು ಗಣನೀಯವಾಗಿ ಹೆಚ್ಚುತ್ತಿರುವ ಕಾರಣ ರಾಜ್ಯದಲ್ಲಿ ಲಾಕ್‌ಡೌನ್ ಅನಿವಾರ್ಯ ಎಂದು ಶಾಸಕ ಎಚ್.ಡಿ. ರೇವಣ್ಣ ಹೇಳಿದರು.
ಲಾಕ್‌ಡೌನ್ ಮಾಡುವುದಾದರೇ ಶ್ರಮಿಕ ವರ್ಗವನ್ನು ಗಣನೆಗೆ ತೆಗದುಕೊಳ್ಳಬೇಕು. ಒಂದು ತಿಂಗಳಿಗೆ ಆಗುವಷ್ಟು ಪಡಿತರ ನೀಡಬೇಕು. ಜೊತೆಗೆ ಪ್ರತಿ ಜಿಲ್ಲೆಗೆ ₹ 10 ಕೋಟಿ ಅನುದಾನನೀಡಬೇಕು ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ರಾಜ್ಯಪಾಲರು ಹಾಗೂ ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿ ನಡೆದ ಸರ್ವ ಪಕ್ಷಗಳ ವಿಡಿಯೊ ಸಂವಾದದಲ್ಲಿಯೂ ಎಚ್.ಡಿ.ಕುಮಾರಸ್ವಾಮಿ ಪಕ್ಷದ ಅಭಿಪ್ರಾಯ ತಿಳಿಸಿದ್ದಾರೆ. ರಾಜ್ಯದಲ್ಲಿ ನಿತ್ಯನೂರಾರು ಸಂಖ್ಯೆಯಲ್ಲಿ ಸಾವು ಸಂಭವಿಸುತ್ತಿದ್ದು, ಪರಿಸ್ಥಿತಿ ಹತೋಟಿಗೆ ತರಬೇಕಾದರೆ ಲಾಕ್‌ಡೌನ್ಅಗತ್ಯ ಎಂದು ಅಭಿಪ್ರಾಯಪಟ್ಟರು.
ಸಮುದಾಯ ಆಸ್ಪತ್ರೆಯಲ್ಲಿ 30 ಹಾಸಿಗೆ, ತಾಲ್ಲೂಕು ಕೇಂದ್ರದಲ್ಲಿ 50, ಖಾಸಗಿ ಆಸ್ಪತ್ರೆಯಲ್ಲಿ ಶೇಕಡಾ 50 ರಷ್ಟು ಹಾಸಿಗೆಯನ್ನು ಕೊರೊನಾ ರೋಗಿಗಳ ಚಿಕಿತ್ಸೆಗೆ ಮೀಸಲಿಡಲಾಗಿದೆ ಎಂದು ಆರೋಗ್ಯ ಸಚಿವರು ಹೇಳುತ್ತಾರೆ. ಆದರೆ, ಜಿಲ್ಲೆಯ ಸಮುದಾಯ ಆಸ್ಪತ್ರೆಯಲ್ಲಿ ಈವರೆಗೂ ಒಂದೇ ಒಂದುಕೋವಿಡ್ ರೋಗಿಯನ್ನು ದಾಖಲಿಸಿಕೊಂಡು ಚಿಕಿತ್ಸೆ ನೀಡಿಲ್ಲ. ತಾಲ್ಲೂಕು ಕೇಂದ್ರಗಳಲ್ಲಿ 50 ಜನರು ಮಾತ್ರ ದಾಖಲು ಆಗಿದ್ದಾರೆ ಎಂದು ಹೇಳಿದರು.
ಜಿಲ್ಲೆಯಲ್ಲಿ ನಿತ್ಯ 350 ರಿಂದ 400 ಸೋಂಕು ಪ್ರಕರಣ ಪತ್ತೆಯಾಗುತ್ತಿದೆ. ಏಳು ದಿನದಲ್ಲಿ 23 ಜನ ಮೃತರಾಗಿದ್ದಾರೆ. 38 ಖಾಸಗಿ ಆಸ್ಪತ್ರೆಗಳ ಪೈಕಿ 18 ಆಸ್ಪತ್ರೆಗಳಲ್ಲಿ ಕೋವಿಡ್ ಪೀಡಿತರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಜಿಲ್ಲಾಧಿಕಾರಿ ಕೂಡಲೇ ಖಾಸಗಿ ಆಸ್ಪತ್ರೆ ಮಾಲೀಕರ ಸಭೆ ಕರೆದು, ದರ ಪಟ್ಟಿ, ಹಾಸಿಗೆ, ಔಷಧ ಲಭ್ಯತೆ ಬಗ್ಗೆ ಮಾಹಿತಿ ಪಡೆದು ಕಟ್ಟುನಿಟ್ಟಾಗಿ ಸೂಚನೆ ನೀಡಬೇಕು. ಜಿಲ್ಲೆಯಲ್ಲಿ ಔಷಧ ಸರಬರಾಜು ಮತ್ತು ದಾಸ್ತಾನು ಬಗ್ಗೆ ಔಷಧನಿಯಂತ್ರಕರು ಎಚ್ಚೆತ್ತುಕೊಳ್ಳಬೇಕು ಎಂದು ಒತ್ತಾಯಿಸಿದರು.
ಈಗ ಪರಿಸ್ಥಿತಿ ಕೈಮೀರುವ ಹಂತ ತಲುಪಿದೆ. ಅಂತ್ಯ ಸಂಸ್ಕಾರ ಮಾಡಲು ಶವಗಳನ್ನು ತಂದು ಸಾಲುಗಟ್ಟಿ ನಿಲ್ಲಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಈಗ ಬಾಯಿ ಬಡಿದುಕೊಂಡರೆ ಏನು ಪ್ರಯೋಜನ ಎಂದು ಟೀಕಿಸಿದ ಅವರು, ಜಿಲ್ಲಾಧಿಕಾರಿ ಅವರು ಬುಧವಾರ ಶಾಸಕರು, ಸಂಸದರ ಸಭೆ ಕರೆದು ಅಭಿಪ್ರಾಯ ಸಂಗ್ರಹಿಸಬೇಕು ಎಂದರು.
ಕೂಲಿ ಕಾರ್ಮಿಕರು, ಆಟೋ ಚಾಲಕರು, ಕಟ್ಟಡ ಕಾರ್ಮಿಕರು ಸೇರಿದಂತೆ ಶ್ರಮಿಕ ವರ್ಗದವರಿಗೆ ಸರ್ಕಾರ ನೆರವಾಗಬೇಕು. ಒಂದು ತಿಂಗಳಿಗೆ ಆಗುವಷ್ಟು ಅಕ್ಕಿ, ಗೋಧಿ, ಹಾಗೂ ಖರ್ಚು ನೀಡಬೇಕು. ತರಕಾರಿ, ದಿನಸಿ ಅಂಗಡಿ ಹಾಗೂ ಅಗತ್ಯ ಸೇವೆಗಳನ್ನು ವಾರದಲ್ಲಿ ಎರಡು ದಿನ, ದಿನಕ್ಕೆ ಎರಡು ಗಂಟೆ ಮಾತ್ರ ತೆರೆಯಬೇಕು ಎಂದು ಸಲಹೆ ನೀಡಿದರು.
ಮಲೆನಾಡು ಭಾಗವಾದ ಸಕಲೇಶಪುರ, ಆಲೂರು ಸೇರಿದಂತೆ ಬೇಲೂರು, ಅರಸೀಕೆರೆ, ಚನ್ನರಾಯಪಟ್ಟಣ, ಹೊಳೆನರಸೀಪುರದಲ್ಲಿ ಕುಡಿಯುವ ನೀರಿಗೆ ಸಮಸ್ಯೆ ಇದ್ದು, ಕೂಡಲೇ ವರದಿ ತರಿಸಿಕೊಂಡು ಟ್ಯಾಂಕರ್, ಖಾಸಗಿ ಕೊಳವೆ ಬಾವಿ ಮೂಲಕ ನೀರು ಪೂರೈಸಬೇಕು ಎಂದರು.
ಶಾಸಕ ಸಿ.ಎನ್. ಬಾಲಕೃಷ್ಣ ಮಾತನಾಡಿ, ಆರ್‌ಟಿ–ಪಿಸಿಆರ್‌ಗಿಂತಲೂ ರ‍್ಯಾಪಿಡ್ ಟೆಸ್ಟ್‌ಗೆ ಹೆಚ್ಚಿನ ಒತ್ತು ನೀಡಬೇಕು. ಇಲ್ಲದಿದ್ದರೆ ಪರೀಕ್ಷಾ ವರದಿ ಬರುವಷ್ಟರಲ್ಲಿ ಹೆಚ್ಚು ಜನರಿಗೆ ಸೋಂಕು ಹರಡುವ ಸಾಧ್ಯತೆ ಇದೆ. ಜಿಲ್ಲೆಯಲ್ಲಿ ರೆಮ್‌ಡಿಸಿವಿರ್ ಚುಚ್ಚುಮದ್ದು ದರ ₹ 2 ಸಾವಿರ. ಆದರೆ ಕಾಳಸಂತೆಯಲ್ಲಿ ಈ ಚುಚ್ಚುಮದ್ದು ಐದು ಪಟ್ಟು ಹೆಚ್ಚಿನ ದರಕ್ಕೆ ಮಾರಾಟ ಮಾಡುತ್ತಿರುವ ಬಗ್ಗೆ ದೂರು ಇದ್ದು, ಈ ಬಗ್ಗೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.