ADVERTISEMENT

ಅಧಿವೇಶನದಲ್ಲಿ ಜಿಲ್ಲೆಯ ಸಮಸ್ಯೆಗಳ ಚರ್ಚೆ: ಸಂಸದ ಶ್ರೇಯಸ್ ಪಟೇಲ್

​ಪ್ರಜಾವಾಣಿ ವಾರ್ತೆ
Published 23 ಆಗಸ್ಟ್ 2025, 2:12 IST
Last Updated 23 ಆಗಸ್ಟ್ 2025, 2:12 IST
ಗೌರಿ ಗಣೇಶ ಹಬ್ಬದ ನಿಮಿತ್ತ ಹಾಸನ ಮಹಾನಗರ ಪಾಲಿಕೆ ಸಭಾಂಗಣದಲ್ಲಿ ಪೌರಕಾರ್ಮಿಕರಿಗೆ ಸಂಸದ ಶ್ರೇಯಸ್ ಪಟೇಲ್‌ ಬಾಗಿನ ಹಾಗೂ ಉಡುಗೊರೆ ವಿತರಿಸಿದರು. ಪಾಲಿಕೆ ಆಯುಕ್ತ ಕೃಷ್ಣಮೂರ್ತಿ, ಎಂಜಿನಿಯರ್ ಹಾಗೂ ಇತರೆ ಸಿಬ್ಬಂದಿ ಹಾಜರಿದ್ದರು
ಗೌರಿ ಗಣೇಶ ಹಬ್ಬದ ನಿಮಿತ್ತ ಹಾಸನ ಮಹಾನಗರ ಪಾಲಿಕೆ ಸಭಾಂಗಣದಲ್ಲಿ ಪೌರಕಾರ್ಮಿಕರಿಗೆ ಸಂಸದ ಶ್ರೇಯಸ್ ಪಟೇಲ್‌ ಬಾಗಿನ ಹಾಗೂ ಉಡುಗೊರೆ ವಿತರಿಸಿದರು. ಪಾಲಿಕೆ ಆಯುಕ್ತ ಕೃಷ್ಣಮೂರ್ತಿ, ಎಂಜಿನಿಯರ್ ಹಾಗೂ ಇತರೆ ಸಿಬ್ಬಂದಿ ಹಾಜರಿದ್ದರು   

ಹಾಸನ: ಲೋಕಸಭೆಯ ಮುಂಗಾರು ಅಧಿವೇಶನದ ವೇಳೆ ಜಿಲ್ಲೆಯ ಸಮಸ್ಯೆಗಳ ಕುರಿತು ಸಂಬಂಧಪಟ್ಟ ಸಚಿವರಲ್ಲಿ ಮನವಿ ಮಾಡಿದ್ದು, ಸಕಾರಾತ್ಮಕ ಪ್ರತಿಕ್ರಿಯೆ ನೀಡಿದ್ದಾರೆ ಎಂದು ಸಂಸದ ಶ್ರೇಯಸ್ ಪಟೇಲ್ ತಿಳಿಸಿದರು.

ನಾನು ಎರಡನೇ ಬಾರಿ ಸಂಸತ್‌ ಅಧಿವೇಶನದಲ್ಲಿ ಭಾಗವಹಿಸಿದ್ದು, ಜಿಲ್ಲೆಯ ರೈತರ ಜ್ವಲಂತ ಸಮಸ್ಯೆಗಳಾದ ತೆಂಗು ಹಾಗೂ ಮೆಕ್ಕೆ ಜೋಳಕ್ಕೆ ರೋಗ ಭಾದೆ ಕುರಿತು ಚರ್ಚೆ ಮಾಡಿದ್ದೇನೆ ಎಂದರು.

ತೆಂಗಿಗೆ ತಗುಲಿರುವ ಕಾಯಿಲೆ ಕುರಿತು ಶೂನ್ಯ ವೇಳೆಯಲ್ಲಿ ಮಾತನಾಡಿದ್ದೇನೆ. ಈ ಸಂದರ್ಭದಲ್ಲಿ ಸಚಿವರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, 15 ದಿನದಲ್ಲಿ ಕೇರಳದಿಂದ ಸಂಶೋಧನಾ ತಂಡ ಜಿಲ್ಲೆಗೆ ಭೇಟಿ ನೀಡಿ ಪರಿಶೀಲನೆ ಕೈಗೊಳ್ಳಲಿದೆ. ಈ ವರದಿಯನ್ನಾಧರಿಸಿ ಕೇಂದ್ರ ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಲಿದೆ ಎಂದರು.

ADVERTISEMENT

‘ಅರಸೀಕೆರೆಯಲ್ಲಿ ತೆಂಗು ಸಂಶೋಧನಾ ಕೇಂದ್ರದ ಉನ್ನತೀಕರಣ ಮಾಡುವ ನಿಟ್ಟಿನಲ್ಲಿ ಮನವಿ ಮಾಡಿದ್ದು, ಸಚಿವರಿಂದ ಅಗತ್ಯ ಭರವಸೆ ವ್ಯಕ್ತವಾಗಿದೆ. ಜಿಲ್ಲೆಯಲ್ಲಿ ಮೆಕ್ಕೆಜೋಳಕ್ಕೆ ಬಿಳಿ ಸುಳಿ ರೋಗ ಕಂಡು ಬಂದ ಹಿನ್ನೆಲೆಯಲ್ಲಿ ತಜ್ಞರು ಸೋಯಾಬೀನ್ ಬೆಳೆಯಲು ಸಲಹೆ ನೀಡಿದ್ದಾರೆ’ ಎಂದರು.

‘ಬೇಲೂರು- ಹಾಸನ ರಾಷ್ಟ್ರೀಯ ಹೆದ್ದಾರಿ 173 ರ ಭೂ ಸ್ವಾಧೀನ ಮಾಡಿಕೊಳ್ಳಲು ಹೆಚ್ಚುವರಿಯಾಗಿ ₹ 100 ಕೋಟಿ ಅನುದಾನ ಬಿಡುಗಡೆಗೆ ಮನವಿ ಮಾಡಲಾಗಿದೆ. ಇದಕ್ಕೆ ಕೇಂದ್ರ ಸಚಿವ ನಿತಿನ್‌ ಗಡ್ಕರಿ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ’ ಎಂದು ತಿಳಿಸಿದರು.

‘ಪ್ರಸಾದ್’ ಯೋಜನೆಯಡಿ ಶ್ರವಣಬೆಳಗೊಳ ಹಾಗೂ ಬೇಲೂರು, ಹಳೇಬೀಡು ಪ್ರವಾಸೋದ್ಯಮ ಅಭಿವೃದ್ಧಿಗೆ ಅಗತ್ಯ ಅನುದಾನ ಬಿಡುಗಡೆಗೆ ಪ್ರವಾಸೋದ್ಯಮ ಸಚಿವ ಶೇಖಾವತ್ ಅವರೊಂದಿಗೂ ಚರ್ಚೆ ನಡೆಸಿರುವುದಾಗಿ ಹೇಳಿದರು.

‘ಕೇಂದ್ರ ನಗರಾಭಿವೃದ್ಧಿ ಸಚಿವರೊಂದಿಗೆ ಮಾತನಾಡಿದ್ದು, ಪಿಎಂಎವೈ ಯೋಜನೆಯಡಿ ನಗರಪಾಲಿಕೆಯಲ್ಲಿ ಅರ್ಧಕ್ಕೆ ನಿಂತಿರುವ ಕೆಲಸವನ್ನು ಪೂರ್ಣಗೊಳಿಸಲು ಮನವಿ ಮಾಡಲಾಗಿದೆ. 24 ಕಡತಗಳ ವಿಲೇವಾರಿಗೆ ಶೀಘ್ರ ಕ್ರಮ ಕೈಗೊಳ್ಳಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸಚಿವರು ಸೂಚನೆ ನೀಡಿದ್ದಾರೆ’ ಎಂದರು.

ರಾಷ್ಟ್ರೀಯ ಹೆದ್ದಾರಿ 75 ರ ಮತ್ತಷ್ಟು ಅಭಿವೃದ್ಧಿಗೆ ಹಣ ಒದಗಿಸುವಂತೆ ಮನವಿ ಮಾಡಲಾಗಿದೆ. ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರೊಂದಿಗೂ ಮಾತನಾಡಿದ್ದು, ಜಿಲ್ಲೆಯಲ್ಲಿ ರೈಲು ನಿಲುಗಡೆ ಹಾಗೂ ನಿಲ್ದಾಣಗಳಿಗೆ ಮೂಲಸೌಕರ್ಯ ಒದಗಿಸಲು ಕೋರಲಾಗಿದೆ. ಹಂಗರಹಳ್ಳಿ ಮೇಲ್ಸೇತುವೆ ಮರು ನಿರ್ಮಾಣಕ್ಕೆ ಟೆಂಡರ್ ಪ್ರಕ್ರಿಯೆ ಪ್ರಗತಿಯಲ್ಲಿದ್ದು. ಹಾಸನ ನಗರದ ಎನ್.ಆರ್. ವೃತ್ತದಿಂದ ಹಾದು ಹೋಗುವ ರೈಲ್ವೆ ಮೇಲ್ಸೇತುವೆಯು ಸಹ ಮುಂದಿನ ಫೆಬ್ರುವರಿ ವೇಳೆಗೆ ಭಾಗಶಃ ಮುಕ್ತಾಯವಾಗುವ ಕುರಿತು ಭರವಸೆ ವ್ಯಕ್ತಪಡಿಸಿದರು.

ಹಾಸನ ನಗರ ಪಾಲಿಕೆಗೆ ಹಂತಹಂತವಾಗಿ ಹಣ ಬಿಡುಗಡೆ ಮಾಡುವ ಸಂಬಂಧ ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್ ಭರವಸೆ ನೀಡಿದ್ದು, ಮುಂದಿನ ಬಜೆಟ್‌ನಲ್ಲಿ ಅನುದಾನ ಬಿಡುಗಡೆ ಮಾಡುವ ಕುರಿತು ಮಾತನಾಡಿದ್ದಾರೆ ಎಂದು ಹೇಳಿದರು.

ಮುಂಗಾರು ಅಧಿವೇಶನದಲ್ಲಿ ಕೇಂದ್ರ ಸರ್ಕಾರ ತರಾತುರಿಯಲ್ಲಿ ಕೆಲವು ಕಾಯ್ದೆಗಳನ್ನು ಜಾರಿ ಮಾಡಲು ಹೊರಟಿದ್ದು, ಇದಕ್ಕೆ ನಮ್ಮ ಪಕ್ಷ ಹಾಗೂ ಇಂಡಿಯಾ ಮೈತ್ರಿಕೂಟದಿಂದಲೂ ತೀವ್ರ ವಿರೋಧ ವ್ಯಕ್ತವಾಗಿದೆ ಎಂದರು.

ಜೈಲಿಗೆ ಹೋಗಿ ಬಂದ ಮುಖಂಡರು ಚುನಾವಣೆಯಲ್ಲಿ ಸ್ಪರ್ಧಿಸದಂತಹ ಹಾಗೂ ಒಂದು ಕಡೆ ಕೇಂದ್ರೀಕರಿಸಿರುವಂತಹ ಕಾಯ್ದೆ ತರಲು ಹೊರಟಿದ್ದಾರೆ. ಇದನ್ನು ಜಂಟಿ ಸಂಸದೀಯ ಸಮಿತಿ ಹಾಗೂ ನುರಿತ ಲೋಕಸಭಾ ಸದಸ್ಯರೊಂದಿಗೆ ಚರ್ಚಿಸಿ ಜಾರಿ ಮಾಡುವಂತೆ ಒತ್ತಾಯಿಸಲಾಗಿದೆ. ಯಾವುದೇ ಕಾಯ್ದೆ ಜಾರಿಗೆ ಬೇಕಾದ ಬಹುಮತ ಅವರಲ್ಲಿ ಇಲ್ಲವಾಗಿದೆ ಎಂದರು.

‘ಧರ್ಮಸ್ಥಳದ ಬಗ್ಗೆ ಗೌರವವಿದೆ’

ಶ್ರೀಕ್ಷೇತ್ರ ಧರ್ಮಸ್ಥಳ ವಿರುದ್ಧ ಅಪಪ್ರಚಾರ ವಿಚಾರವಾಗಿ ಮಾತನಾಡಿದ ಸಂಸದ ಶ್ರೇಯಸ್ ಪಟೇಲ್ ಎಸ್ಐಟಿ ತನಿಖೆ ಮಾಡುತ್ತಿದೆ. ನನಗಂತೂ ವೈಯಕ್ತಿಕವಾಗಿ ಧರ್ಮಸ್ಥಳದ ಬಗ್ಗೆ ತುಂಬಾ ಗೌರವವಿದೆ ಎಂದರು. ಧರ್ಮಸ್ಥಳದ ಧರ್ಮಾಧಿಕಾರಿಗಳನ್ನು ಗೌರವಿಸುತ್ತೇನೆ. ಪೂಜ್ಯ ಭಾವನೆಯಿಂದ ನೋಡುತ್ತೇನೆ. ಅವರೂ ಸಂಸದರಾಗಿದ್ದಾರೆ. ನಾವು ಅವರು ಒಟ್ಟಿಗೆ ಒಂದೇ ಕಡೆ ವಾಸವಿದ್ದೇವೆ. ನಾನು ಮಂಜುನಾಥನ ದೈವಭಕ್ತ ಎಂದು ಹೇಳಿದರು.

‘ಹೇಮೆಗೆ ಬಾಗಿನ ಶೀಘ್ರ’

‘ಹೇಮಾವತಿ ಜಲಾಶಯ ಭರ್ತಿಯಾಗಿದ್ದು ಶೀಘ್ರದಲ್ಲಿಯೇ ಮುಖ್ಯಮಂತ್ರಿ ಉಪಮುಖ್ಯಮಂತ್ರಿ ಜಿಲ್ಲಾ ಉಸ್ತುವಾರಿ ಸಚಿವರೊಂದಿಗೆ ಹೇಮಾವತಿ ಜಲಾಶಯಕ್ಕೆ ಬಾಗಿನ ಅರ್ಪಿಸಲಾಗುವುದು’ ಎಂದು ಸಂಸದ ಶ್ರೇಯಸ್ ಪಟೇಲ್ ತಿಳಿಸಿದರು.

ವಿಧಾನ ಮಂಡಲ ಹಾಗೂ ಸಂಸತ್‌ ಅಧಿವೇಶನದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸೇರಿದಂತೆ ಸಚಿವರು ಹೇಮಾವತಿ ಜಲಾಶಯಕ್ಕೆ ಬಾಗಿನ ಅರ್ಪಿಸಲು ಸಮಯ ಆಗಿಲ್ಲ. ಮುಂದಿನ ಕೆಲ ದಿನಗಳಲ್ಲಿ ಬಾಗಿನ ಅರ್ಪಿಸುವ ಕಾರ್ಯಕ್ರಮ ನಿಗದಿಪಡಿಸಲಾಗುವುದು ಎಂದು ತಿಳಿಸಿದರು.

‘ಜಿಲ್ಲೆಯು ಪಹಣಿ ಪೋಡು ದುರಸ್ತಿ ಕಾರ್ಯದಲ್ಲಿ ರಾಜ್ಯದಲ್ಲಿಯೇ ಪ್ರಥಮ ಸ್ಥಾನ ಪಡೆದಿದ್ದು ಸೆಪ್ಟೆಂಬರ್ ಕೊನೆಯ ವಾರದಲ್ಲಿ ಮುಖ್ಯಮಂತ್ರಿ ನೇತೃತ್ವದಲ್ಲಿ ಬೃಹತ್ ಕಾರ್ಯಕ್ರಮವನ್ನು ಮಾಡಲಾಗುವುದು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.