ADVERTISEMENT

ಹಾಸನ: ಶಬರಿಮಲೆಗೆ ಮಹಿಳೆಯರ ಪ್ರವೇಶಕ್ಕೆ ಖಂಡನೆ

ಶಬರಿಮಲೆ ಕ್ಷೇತ್ರ ಸಂರಕ್ಷಣಾ ಕ್ರಿಯಾ ಸಮಿತಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 3 ಜನವರಿ 2019, 13:38 IST
Last Updated 3 ಜನವರಿ 2019, 13:38 IST
ಹಾಸನ ಜಿಲ್ಲಾಧಿಕಾರಿ ಕಚೇರಿ ಎದುರು ಶಬರಿಮಲೆ ಕ್ಷೇತ್ರ ಸಂರಕ್ಷಣಾ ಕ್ರಿಯಾ ಸಮಿತಿ ಪ್ರತಿಭಟನೆ ನಡೆಸಿತು.
ಹಾಸನ ಜಿಲ್ಲಾಧಿಕಾರಿ ಕಚೇರಿ ಎದುರು ಶಬರಿಮಲೆ ಕ್ಷೇತ್ರ ಸಂರಕ್ಷಣಾ ಕ್ರಿಯಾ ಸಮಿತಿ ಪ್ರತಿಭಟನೆ ನಡೆಸಿತು.   

ಹಾಸನ: ‘ಶಬರಿಮಲೆಗೆ ಮಹಿಳೆಯರ ಪ್ರವೇಶ ಹಾಗೂ ಕೇರಳ ಕಮ್ಯೂನಿಸ್ಟ್‌ ಸರ್ಕಾರದ ಹಿಂದೂ ವಿರೋಧಿ ಧೋರಣೆ’ ಖಂಡಿಸಿ ಶಬರಿಮಲೆ ಕ್ಷೇತ್ರ ಸಂರಕ್ಷಣಾ ಕ್ರಿಯಾ ಸಮಿತಿ ಪ್ರತಿಭಟನೆ ನಡೆಸಿತು.

ಹೇಮಾವತಿ ಪ್ರತಿಮೆ ಬಳಿಯಿಂದ ಪ್ರತಿಭಟನಾಕಾರರು, ಕೇರಳ ಸರ್ಕಾರದ ವಿರುದ್ಧ ಘೋಷಣೆ ಕೂಗುತ್ತಾ ಜಿಲ್ಲಾಧಿಕಾರಿ ಕಚೇರಿಗೆ ಬಂದು ಮನವಿ ಸಲ್ಲಿಸಿದರು.

‘ಹಿಂದೂಗಳ ಧಾರ್ಮಿಕ ಭಾವನೆಗೆ ಘಾಸಿ ತರುವ ಉದ್ದೇಶದಿಂದಲೇ ಪೊಲೀಸರ ರಕ್ಷಣೆಯಲ್ಲಿ ಅಯ್ಯಪ್ಪ ಸ್ವಾಮಿ ದೇವಳಕ್ಕೆ ಬಿಂದು, ಕನಕದುರ್ಗ ಎಂಬ ಮಹಿಳೆಯರು ಪ್ರವೇಶಿಸಿದ್ದಾರೆ. 18 ಮೆಟ್ಟಿಲು ಹತ್ತುವ ಬದಲು ವಿಐಪಿ ಸಾಲಿನ ಮೂಲಕ ಸ್ವಾಮಿಯ ದರ್ಶನ ಮಾಡಿ ಬಂದ್ದಿದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ADVERTISEMENT

‘ಕೇರಳ ಸರ್ಕಾರ ಭಕ್ತರ ನಂಬಿಕೆ, ಹಿಂದೂ ಸಂಪ್ರದಾಯ, ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟು ಮಾಡುವಂತಹ ಕೆಲಸ ಮಾಡಿದೆ. 10 ವರ್ಷದಿಂದ 50 ವರ್ಷದೊಳಗಿನ ಮಹಿಳೆಯರು ದೇವಾಲಯ ಪ್ರವೇಶಿಸುವಂತಿಲ್ಲ ಎಂಬ ಸಂಪ್ರದಾಯವನ್ನು ಈ ಇಬ್ಬರೂ ಉಲ್ಲಂಘನೆ ಮಾಡಿದ್ದಾರೆ’ ಎಂದು ಆರೋಪಿಸಿದರು.

‘ಕನಕದುರ್ಗ, ಬಿಂದು ಸಿಪಿಎಂ ಬೆಂಬಲಿಗರು. ಉದ್ದೇಶ ಪೂರ್ವಕವಾಗಿಯೇ ಶಾಂತಿ ಕದಡಲು ಈ ರೀತಿ ನಡೆದುಕೊಂಡಿದ್ದಾರೆ. ಇರುಮುಡಿ ತುಪ್ಪವನ್ನು ದೇವರಿಗೆ ಅರ್ಪಿಸದೇ ಪಾವಿತ್ರ್ಯ ಹಾಳು ಮಾಡುವ ಉದ್ದೇಶವನ್ನಷ್ಟೇ ಇರಿಸಿಕೊಂಡಿದ್ದರು’ ಎಂದು ದೂರಿದರು.

‘ಎಡ ಪಂಥೀಯ ಸಂಘಟನೆಗಳು ಮುಂದಿನ ದಿನಗಳಲ್ಲಿ ಕರ್ನಾಟಕದ ದೇವಸ್ಥಾನಗಳಲ್ಲಿ ನಡೆಯುತ್ತಿರುವ ಧಾರ್ಮಿಕ ಚಟುವಟಿಕೆಗಳನ್ನು ಹತ್ತಿಕ್ಕಲು ವ್ಯವಸ್ಥಿತ ಸಂಚು ಮಾಡುವ ಸಂಶಯ ಉಂಟಾಗಿದೆ. ಹೀಗಾಗಿ ರಾಜ್ಯ ಸರ್ಕಾರ ಕೂಡಲೇ ಪ್ರಮುಖ ದೇವಸ್ಥಾನಗಳಿಗೆ ವಿಶೇಷ ಭದ್ರತೆ ನೀಡಬೇಕು. ಹಿಂದುಗಳ ಧಾರ್ಮಿಕ ಭಾವನೆ ಹತ್ತಿಕ್ಕುವ ಪ್ರಯತ್ನ ನಡೆಯುತ್ತಿರುವರಿಂದ ಇಂತಹ ಸಂಘಟನೆಗಳನ್ನು ಪತ್ತೆ ಮಾಡಿ ನಿಷೇಧಿಸಬೇಕು’ ಎಂದು ಒತ್ತಾಯಿಸಿದರು.

ಮುಖಂಡರಾದ ಶೋಭನ್ ಬಾಬು, ವೇಣುಗೋಪಾಲ್, ಪ್ರಸನ್ನಕುಮಾರ್, ಮಂಜುನಾಥ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.