
ಹಿರೀಸಾವೆ: ‘ಸಂಸಾರ ಸುಖವಾಗಿ ಇರಬೇಕಾದರೆ, ಪತಿ, ಪತ್ನಿಯರಲ್ಲಿ ಸಮಾನತೆ, ಗೌರವ, ಪ್ರೀತಿ ಇರಬೇಕು. ಮದುವೆ ಎನ್ನುವುದು ಮುಂದಿನ ಪೀಳಿಗೆಯ ಬೆಳವಣಿಗೆಯ ಮಾರ್ಗವಾಗಿದೆ ಎನ್ನುವುದನ್ನು ಎಲ್ಲರೂ ಅರಿಯಬೇಕು’ ಎಂದು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಚೌಧರಿ ಹೇಳಿದರು.
ಹೋಬಳಿಯ ಕಬ್ಬಳಿ ಬಸವೇಶ್ವರ ಸ್ವಾಮಿಯ ಜಾತ್ರಾ ಮಹೋತ್ಸವದ ಅಂಗವಾಗಿ ಸೋಮವಾರ ಏರ್ಪಡಿಸಿದ್ದ ಸಾಮೂಹಿಕ ವಿವಾಹದಲ್ಲಿ ಅವರು ಮಾತನಾಡಿದರು.
‘ಇಂದಿನ ಯುವ ಜನತೆಯಲ್ಲಿ ತಾಳ್ಮೆ ಇಲ್ಲದೇ ಇರುವುದರಿಂದ ಮದುವೆಯಾದ ಆರು ತಿಂಗಳಿನಿಂದ ಒಂದು ವರ್ಷದಲ್ಲಿ ವಿವಾಹ ವಿಚ್ಛೇದನ ಪ್ರಕರಣಗಳು ಸಂಖ್ಯೆ ಹೆಚ್ಚಾಗುತ್ತಿವೆ. ತಿಂಗಳಿಗೆ ಹತ್ತಾರು ಪ್ರಕರಣಗಳು ಮಹಿಳಾ ಆಯೋಗಕ್ಕೆ ಬರುತ್ತಿವೆ. ನಾನೇ ಸ್ವತಃ ತಾಯಿಯಾಗಿ ಕೌನ್ಸೆಲಿಂಗ್ ಮಾಡುತ್ತಿದ್ದೇನೆ. ಪೋಷಕರು ಲಕ್ಷ, ಲಕ್ಷ ಖರ್ಚು ಮಾಡಿ ಮದುವೆ ಮಾಡುವ ಬದಲು, ಸರಳ ಮತ್ತು ಸಾಮೂಹಿಕ ವಿವಾಹ ಮಾಡುವುದು ಒಳಿತು’ ಎಂದರು.
ನೂತನ ವಧು–ವರರನ್ನು ಆಶೀರ್ವದಿಸಿದ ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ನಿರ್ಮಲಾನಂದನಾಥ ಸ್ವಾಮೀಜಿ ಮಾತನಾಡಿ, ‘ದೇಶದಲ್ಲಿ ಪ್ರಜೆಯಾಗಿ ಬದುಕಲು ಸಂವಿಧಾನದ ನಿಯಮಗಳು ಇದ್ದಂತೆ, ಗೃಹಸ್ಥಾಶ್ರಮದಲ್ಲಿ ಉತ್ತಮ ಜೀವನ ನಡೆಸಲು ನಿಯಮಗಳಿವೆ. ಅದನ್ನು ಪತಿ–ಪತ್ನಿಯರು ಪಾಲಿಸುವುದರಿಂದ ಉತ್ತಮ ದಂಪತಿಯಾಗಿ ಬಾಳಬಹುದು’ ಎಂದರು.
‘ಹೆಣ್ಣು ಮಕ್ಕಳಿಗೆ ಶಿಕ್ಷಣ, ಸಾಮಾಜಿಕ ಜ್ಞಾನ, ದುಡಿಮೆ ಎಂಬುದು ಇದೆ. ಅದ್ದರಿಂದ ಗಂಡ, ಹೆಂಡತಿಯನ್ನು ಸಮಾನತೆಯಿಂದ ಕಾಣಬೇಕು. ಧನಾತ್ಮಕ, ಋಣಾತ್ಮಕ ಸಂಪರ್ಕದಿಂದ ವಿದ್ಯುತ್ ದೀಪ ಬೆಳಗುವಂತೆ, ಕುಟುಂಬ ಚನ್ನಾಗಿರಬೇಕಾದರೆ ಸತಿ–ಪತಿ ಉತ್ತಮ ಸಂಸ್ಕಾರವನ್ನು ರೂಢಿಸಿಕೊಳ್ಳಬೇಕು’ ಎಂದು ಹೇಳಿದರು.
ಹಾಸನ ಮಠದ ಶಂಭುನಾಥ ಸ್ವಾಮೀಜಿ, ಆದಿಚುಂಚನಗಿರಿ ಶಾಖಾ ಮಠಗಳ ಕೈಲಾಸಪತಿ ಸ್ವಾಮೀಜಿ, ಚಂದ್ರಶೇಖರನಾಥ ಸ್ವಾಮೀಜಿ, ಸಾಯಿ ಮಂದಿರದ ಗುರುಮೂರ್ತಿ ಗುರೂಜಿ, ಕಬ್ಬಳಿ ಮಠದ ಶಿವಪುತ್ರನಾಥ ಸ್ವಾಮೀಜಿ, ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಎಚ್.ಎಸ್. ವಿಜಯಕುಮಾರ್, ಸಾಮೂಹಿಕ ವಿವಾಹದ ನೇತೃತ್ವ ವಹಿಸಿದ್ದ ಪ್ರದೀಪಾ ವೆಂಕಟೇಶ್ ಪ್ರಸಾದ್, ಮಾಜಿ ಮೇಯರ್ ಹೇಮಾವತಿ ಗೋಪಾಲಯ್ಯ, ಪ್ರಮುಖರಾದ ಕುಸುಮ ಬಾಲಕೃಷ್ಣ, ಸುರಭಿ ರಘು, ವಿವಿಧ ಇಲಾಖೆಯ ಅಧಿಕಾರಿಗಳು, ಗ್ರಾಮಸ್ಥರು, ಆದಿಚುಂಚನಗಿರಿ ಶಿಕ್ಷಣ ಸಂಸ್ಥೆಯ ಸಿಬ್ಬಂದಿ ಇದ್ದರು.
ರಾಜ್ಯದಲ್ಲಿ ಬಾಲ್ಯವಿವಾಹ ಪ್ರಕರಣಗಳು ಹೆಚ್ಚುತ್ತಿವೆ. ಇದನ್ನು ತಡೆಕಟ್ಟುವುದು ಎಲ್ಲರ ಕರ್ತವ್ಯವಾಗಿದೆ. ವರದಕ್ಷಿಣೆ ಪ್ರಕರಣ ಸುಳ್ಳು ಎಂದು ಸಾಬೀತಾದರೆ ಕಠಿಣವಾದ ಶಿಕ್ಷೆ ಇದೆನಾಗಲಕ್ಷ್ಮಿ ಚೌಧರಿ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ
ಎಲ್ಲ ಋಣಗಳನ್ನು ತೀರಿಸಬಹುದು. ಆದರೆ ಹೆತ್ತವರ ಋಣ ತೀರಿಸಲಾಗದು. ವೃದ್ಧಾಪ್ಯದಲ್ಲಿ ನೋಡಿಕೊಳ್ಳವ ಮೂಲಕ ಆ ಋಣವನ್ನು ತೀರಿಸಬೇಕು. ಅತ್ತೆಮಾವ ಸೊಸೆಯನ್ನು ಮಗಳಂತೆ ಕಂಡರೆ ಉತ್ತಮ ಕುಟುಂಬವಾಗುತ್ತದೆನಿರ್ಮಲಾನಂದನಾಥ ಸ್ವಾಮೀಜಿ ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.