ADVERTISEMENT

ಬೆಟ್ಟದ ತಪ್ಪಲಲ್ಲಿ ತೀರ್ಥಂಕರರಿಗೆ ಮಸ್ತಕಾಭಿಷೇಕ

ಜೈನರಗುತ್ತಿಯಲ್ಲಿ ಮೊಳಗಿದ ಮಂಗಳವಾದ್ಯ, ಮಂತ್ರಘೋಷ

​ಪ್ರಜಾವಾಣಿ ವಾರ್ತೆ
Published 14 ಫೆಬ್ರುವರಿ 2022, 5:44 IST
Last Updated 14 ಫೆಬ್ರುವರಿ 2022, 5:44 IST
ಹಳೇಬೀಡು ಸಮೀಪದ ಅಡಗೂರು ಜೈನರ ಗುತ್ತಿಯಲ್ಲಿ ಭಾನುವಾರ ಪಾರ್ಶ್ವನಾಥ ತೀರ್ಥಂಕರರ ಕಳಸಾಭಿಷೇಕ ವಾರ್ಷಿಕ ಪೂಜೆಯ ಅಂಗವಾಗಿ ಜೈನ ಮುನಿಗಳಾದ ಪುಣ್ಯಸಾಗರ ಮುನಿ ಮಹಾರಾಜ್ ಹಾಗೂ ವೀರಸಾಗರ ಮುನಿ ಮಹಾರಾಜರ ಸಮ್ಮುಖದಲ್ಲಿ ಧರ್ಮ ಧ್ವಜಾರೋಹಣ ನಡೆಯಿತು
ಹಳೇಬೀಡು ಸಮೀಪದ ಅಡಗೂರು ಜೈನರ ಗುತ್ತಿಯಲ್ಲಿ ಭಾನುವಾರ ಪಾರ್ಶ್ವನಾಥ ತೀರ್ಥಂಕರರ ಕಳಸಾಭಿಷೇಕ ವಾರ್ಷಿಕ ಪೂಜೆಯ ಅಂಗವಾಗಿ ಜೈನ ಮುನಿಗಳಾದ ಪುಣ್ಯಸಾಗರ ಮುನಿ ಮಹಾರಾಜ್ ಹಾಗೂ ವೀರಸಾಗರ ಮುನಿ ಮಹಾರಾಜರ ಸಮ್ಮುಖದಲ್ಲಿ ಧರ್ಮ ಧ್ವಜಾರೋಹಣ ನಡೆಯಿತು   

ಹಳೇಬೀಡು: ಅಡಗೂರು ಜೈನರಗುತ್ತಿ ಅತಿಶಯ ಕ್ಷೇತ್ರದಲ್ಲಿ ಭಾನುವಾರ ವಾರ್ಷಿಕ ಪೂಜಾ ಮಹೋತ್ಸವ ಹಾಗೂ ಪಾರ್ಶ್ವನಾಥ ತೀರ್ಥಂಕರರ ಕಳಸಾಭಿಷೇಕ ಪುರೋಹಿತರ ಮಂತ್ರ ಘೋಷ ಹಾಗೂ ಮಂಗಳವಾದ್ಯದೊಂದಿಗೆ ವೈಭವದಿಂದ ನೆರವೇರಿತು.

ಶಿವಪುರ ಕಾವಲಿನ ರಾಶಿಗುಡ್ಡದ ಹಸಿರು ಪರಿಸರದ ಮಡಿಲಿನಲ್ಲಿರುವ ಜಿನಮಂದಿರದಲ್ಲಿ ಮುಂಜಾನೆ ಯಿಂದಲೇ ಪೂಜಾ ವಿಧಾನ ಆರಂಭ ವಾಯಿತು. ಮುಗಿಲು ಮುಟ್ಟುವಂತೆ ಜಯಘೋಷ ಮೊಳಗಿತ್ತು. ದಿಗಂಬರ ಪಂಥದ ಜೈನಾಗಮ ವಿಧಾನದಂತೆ ಜೈನ ಮುನಿಗಳಾದ ಪುಣ್ಯಸಾಗರ ಮುನಿಮಹಾರಾಜ್ ಹಾಗೂ ವೀರಸಾಗರ ಮಹಾರಾಜರ ಸಾನ್ನಿಧ್ಯದಲ್ಲಿ ಪೂಜಾ ವಿಧಾನಗಳು ನೆರವೇರಿತು.

ಯಾವುದೇ ಅಡ್ಡಿ ಎದುರಾಗದೆ ಮಹೋತ್ಸವ ಶಾಂತಿಯುತವಾಗಿ ನೆರವೇರಲಿ ಎಂದು ಪ್ರಾರ್ಥಿಸಲಾಯಿತು. ಪ್ರಥಮಾಚಾರ್ಯ ಶಾಂತಿ ಸಾಗರ ಮಹಾರಾಜ್ ಅವರ ಪರಂಪರೆಯಲ್ಲಿ ಬಂದಂತರ ಜೈನ ಮುನಿಗಳ ಸ್ಮರಣೆಯೊಂದಿಗೆ ಪೂಜಾ ವಿಧಾನ ಆರಂಭವಾಯಿತು.

ADVERTISEMENT

ಪಾರ್ಶ್ವನಾಥ ತೀರ್ಥಂಕರರಿಗೆ 108 ಕಳಸಾಭಿಷೇಕ ನೆರವೇರಿಸಿದ ನಂತರ, ಜಲ, ಶ್ರೀಗಂಧ, ಚಂದನ, ಹಾಲು, ಅಕ್ಕಿಹಿಟ್ಟು, ಎಳನೀರು, ಕಬ್ಬಿನಹಾಲು ಕಷಾಯ ಹಾಗೂ ವಿವಿಧ ಪುಷ್ಪಗಳಿಂದ ಅಭಿಷೇಕ ನೆರವೇರಿಸಲಾಯಿತು.

‘ಸಕಲ ಜೀವಿಗಳಿಗೂ ಶಾಂತಿ, ಮುಕ್ತಿ, ದೊರೆಯಲಿ ಎಂದು ಮಹಾಶಾಂತಿಧಾರೆ ನೆರವೇರಿಸಲಾಯಿತು.

ಪದ್ಮಾವತಿ ಹಾಗೂ ಬ್ರಹ್ಮದೇವ, ಯಕ್ಷದೇವತೆಗಳಿಗೆ ಪೂಜೆ, ವಿಶೇಷ ಅಲಂಕಾರದ ನಂತರ ಮಹಮಂಗಳಾರತಿ ನಡೆಯಿತು. ಬೆಂಗಳೂರಿನ ವಿಧಾನಚಾರ್ಯ ಪ್ರವೀಣ್ ಪಂಡಿತ್, ಸ್ಥಳೀಯ ಪುರೋಹಿತರಾದ ಎ.ಜೆ.ನಾಗರಾಜು, ಶೀತಲ್ ಕುಮಾರ್ ಪೂಜಾ ವಿಧಾನ ನಡೆಸಿದರು.

ಧಾರ್ಮಿಕ ಸಭೆಯಲ್ಲಿ ಪುಣ್ಯಸಾಗರ ಮಹಾರಾಜರು ಮಾತನಾಡಿ, ‘ಜೈನಧರ್ಮ ಜಗತ್ತಿಗೆ ಅಹಿಂಸೆಯ ಸಂದೇಶ ಸಾರಿದೆ. ತೀರ್ಥಂಕರರು ಹೇಳಿದ ಶಾಂತಿಯ ಸಂದೇಶಗಳನ್ನು ಜೈನ ಧರ್ಮ ಇಂದಿನ ಅನುಯಾಯಿಗಳು ಅನುಸರಿಸುತ್ತಿದ್ದಾರೆ’ ಎಂದರು.

‘ಜೈನಮುನಿ ವೀರಸಾಗರ ಮುನಿ ಮಹಾರಾಜರು 4 ವರ್ಷದಿಂದ ಕ್ಷೇತ್ರದ ಅಭಿವೃದ್ಧಿಯಲ್ಲಿ ತೊಡಗಿಸಿಕೊಂಡಿದ್ದು,
ಧಾರ್ಮಿಕ ಕಾರ್ಯ ಮಾತ್ರವಲ್ಲದೆ ಶೈಕ್ಷಣಿಕ ಚಟುವಟಿಕೆ ನಡೆಸಲು ಉದ್ದೇಶಿಸಲಾಗಿದೆ’ ಎಂದರು.

ಜೈನರಗುತ್ತಿ ಟ್ರಸ್ಟ್ ಅಧ್ಯಕ್ಷ ಎಂ.ಅಜಿತ್ ಕುಮಾರ್, ಉಪಾಧ್ಯಕ್ಷ ಬ್ರಹ್ಮದೇವ ಕುಣಿಗಲ್, ಮಾಜಿ ಅಧ್ಯಕ್ಷ ದೇವೇಂದ್ರ ಹೊಂಗೇರಿ, ಕಾರ್ಯದರ್ಶಿ ಸಜ್ಜನ್ ಜೈನ್, ಮುಖಂಡರಾದ ಶಶಿಕುಮಾರ್, ಸುಮತಿಕುಮಾರ್, ಧವನ್ ಜೈನ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.