
ಶ್ರವಣಬೆಳಗೊಳ: ‘ಶಿಕ್ಷಣದ ಜೊತೆಗೆ ಮಕ್ಕಳಿಗೆ ಅವಶ್ಯವಿರುವ ಆರ್ಥಿಕ, ವ್ಯವಹಾರಿಕ ಮತ್ತು ಸಾಮಾನ್ಯ ಜ್ಞಾನ, ಕೌಶಲ ಹೆಚ್ಚಿಸಲು ಪ್ರತಿ ಶಾಲೆಯಲ್ಲಿ ಸರ್ಕಾರದ ನಿಯಮದಂತೆ ಮೆಟ್ರಿಕ್ ಮೇಳ ಆಯೋಜನೆ ಮಾಡಲಾಗುತ್ತಿದೆ’ ಎಂದು ಶಿಕ್ಷಣ ಸಂಯೋಜಕ ಜಿ.ಟಿ.ಯಾದವರಾಜ್ ಹೇಳಿದರು.
ಹೋಬಳಿಯ ದಮ್ಮನಿಂಗಳ ಗ್ರಾಮದ ರಚನಾ ಪಬ್ಲಿಕ್ ಶಾಲೆಯಲ್ಲಿ ಗುರುವಾರ ಹಮ್ಮಿಕೊಂಡಿದ್ದ ಮಕ್ಕಳ ಸಂತೆ ಹಾಗೂ ಆಹಾರಮೇಳ ಕಾರ್ಯಕ್ರಮ ಉದ್ಘಾಟಸಿ ಅವರು ಮಾತನಾಡಿದರು.
‘ಮಕ್ಕಳು ವಿದ್ಯಾಭ್ಯಾಸದಲ್ಲಿ ಪ್ರಮುಖವಾಗಿರುವ ಗಣಿತವನ್ನು ಪ್ರಾಯೋಗಿಕವಾಗಿ ಅಭ್ಯಸಿಸಲು ಮಕ್ಕಳ ಸಂತೆ ಸಹಕಾರಿಯಾಗಿದೆ. ಇಲ್ಲಿ ತಾವು ತಮ್ಮ ಪೋಷಕರ ಸಹಕಾರದಿಂದ ವಿವಿಧ ತಿಂಡಿ, ತಿನಿಸುಗಳನ್ನು ಸಿದ್ಧಪಡಿಸಿಕೊಂಡು, ಇಲ್ಲವೇ ಸಂತೆಯಲ್ಲಿ ಹೋಗಿ ಕೆಲ ತರಕಾರಿಗಳನ್ನು ಕೊಂಡು ತಂದು ಶಾಲೆ ಆವರಣದಲ್ಲಿ ಪೋಷಕರಿಗೆ, ಶಿಕ್ಷಕರಿಗೆ, ಸಾರ್ವಜನಿಕರಿಗೆ ಮಾರಾಟ ಮಾಡುತ್ತಾರೆ. ಇದರಿಂದ ಹಣದ ಮೌಲ್ಯ, ಕೂಡುವುದು, ಕಳೆಯುವ ಲೆಕ್ಕದ ಜ್ಞಾನ ಮಕ್ಕಳಲ್ಲಿ ಹೆಚ್ಚಾಗುತ್ತದೆ’ ಎಂದರು.
ರಚನಾ ಪಬ್ಲಿಕ್ ಶಾಲೆಯ ಕಾರ್ಯದರ್ಶಿ ಎಚ್.ಟಿ.ಪ್ರಕಾಶ್ ಮಾತನಾಡಿ, ‘ಮಕ್ಕಳ ಸಂತೆ, ಮಕ್ಕಳಿಗೆ ಕೇವಲ ಶೈಕ್ಷಣಿಕ ಜ್ಞಾನವಷ್ಟೇ ಅಲ್ಲದೆ ಪ್ರಾಪಂಚಿಕ ಜ್ಞಾನವನ್ನು ತಿಳಿಸುವಂತಹ ಉದ್ದೇಶ ಇದಾಗಿದೆ. ಮಕ್ಕಳ ಸಂತೆ ಮತ್ತು ಆಹಾರ ಮೇಳದಲ್ಲಿ ಅವರು ಪ್ರತ್ಯಕ್ಷವಾಗಿ ನೋಡುವ ಮೂಲಕ ಅದನ್ನು ತಿಳಿಯುತ್ತಾರೆ’ ಎಂದರು.
ಶಾಲೆಯ ಮುಖ್ಯ ಶಿಕ್ಷಕಿ ಸವಿತಪ್ರಸಾದ್ ಮಾತನಾಡಿ, ‘ಮಕ್ಕಳ ಸಂತೆ ಆಯೋಜನೆಯಿಂದ ಮಕ್ಕಳು ದೊಡ್ಡವರೊಂದಿಗೆ ವ್ಯವಹರಿಸುವ ರೀತಿ, ಶಿಸ್ತು, ಸಂಯಮ, ಮತ್ತು ತಾಳ್ಮೆಯನ್ನು ರೂಡಿಸಿಕೊಳ್ಳಲು ನೆರವಾಗುವುದರ ಜೊತೆಗೆ ಸೋಲು ಮತ್ತು ಗೆಲವುನ್ನು ಸಮನಾಗಿ ಸ್ವೀಕರಿಸುವ ಮನೋಭಾವ ಇದರಿಂದ ಬೆಳೆಯುತ್ತದೆ’ ಎಂದರು.
ಉದ್ಘಾಟನೆಯ ಬಳಿಕ, ವಿದ್ಯಾರ್ಥಿಗಳು ಬಹಳ ಉತ್ಸಾಹದಿಂದ ವಿವಿಧ ರೀತಿಯ ತಿಂಡಿ ತಿನಿಸು, ವಿವಿಧ ಬಗೆಯ ತರಕಾರಿಗಳು, ಹಣ್ಣು, ಪಾನಿಪುರಿ, ಸಲಾಡ್, ಚಹಾ ಬಿಸ್ಕತ್, ಕಬಾಬ್, ಬಿರಿಯಾನಿ ಸೇರಿದಂತೆ ಇತರ ಪದಾರ್ಥಗಳನ್ನು ಮಾರಾಟ ಮಾಡಿ ಸಂಭ್ರಮಿಸಿದರು. ಪಾಲಕರು ಮಕ್ಕಳು ತಯಾರಿಸಿದ ಪದಾರ್ಥಗಳ ರುಚಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷೆ ಸುನಿತಾ ಪ್ರಕಾಶ್, ಸಿಆರ್‌ಪಿ ಯೋಗೇಶ್, ಸಹ ಶಿಕ್ಷಕರಾದ ಎಚ್.ಟಿ.ದಿವ್ಯಾ, ಎಂ.ಎನ್.ಭೂಮಿಕಾ, ನಂದಿನಿ, ಪ್ರಮೋದಿನಿ, ನಯನಕುಮಾರ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.