ADVERTISEMENT

ದಿನ ಬಿಟ್ಟು ದಿನ ಹಾಲು ಖರೀದಿ: ಹಾಲು ಒಕ್ಕೂಟಗಳಿಗೆ ಕೆಎಂಎಫ್‌ ಸೂಚನೆ

​ಪ್ರಜಾವಾಣಿ ವಾರ್ತೆ
Published 1 ಏಪ್ರಿಲ್ 2020, 12:37 IST
Last Updated 1 ಏಪ್ರಿಲ್ 2020, 12:37 IST
ಎಚ್.ಡಿ.ರೇವಣ್ಣ
ಎಚ್.ಡಿ.ರೇವಣ್ಣ   

ಹಾಸನ: ರಾಜ್ಯದಲ್ಲಿ ಲಾಕ್‌ಡೌನ್‌ನಿಂದಾಗಿ ಹಾಲಿನ ಉತ್ಪನ್ನಗಳ ಮಾರಾಟದಲ್ಲಿ ಗಣನೀಯ ಇಳಿಕೆಯಾಗಿ ಹಾಲು ಶೇಖರಣೆ ಹೆಚ್ಚುತ್ತಿರುವ ಕಾರಣ ದಿನ ಬಿಟ್ಟು ದಿನ ಹಾಲು ಖರೀದಿ ಮಾಡುವಂತೆ ಕರ್ನಾಟಕ ಸಹಕಾರ ಹಾಲು ಮಹಾಮಂಡಳ (ಕೆಎಂಎಫ್‌) ಸೂಚನೆ ನೀಡಿದೆ ಎಂದು ಹಾಸನ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ (ಹಾಮೂಲ್‌)ದ ಅಧ್ಯಕ್ಷರೂ ಆದ ಶಾಸಕ ಎಚ್‌.ಡಿ.ರೇವಣ್ಣ ತಿಳಿಸಿದರು.

ರಾಜ್ಯದ 13 ಹಾಲು ಒಕ್ಕೂಟಗಳಿಂದ ನಿತ್ಯ ಶೇಖಣೆಯಾಗುವ 69 ಲಕ್ಷ ಲೀಟರ್ ಹಾಲು ಪೈಕಿ 40 ಲಕ್ಷ ಲೀಟರ್‌ ಮಾರಾಟವಾಗುತ್ತಿದೆ. ಪ್ರಸ್ತುತ 22 ಲಕ್ಷ ಲೀಟರ್‌ ಹಾಲು ಪರಿವರ್ತನೆಗೆ ಮಾತ್ರ ಸೌಲಭ್ಯ ಇದ್ದು. ಹೆಚ್ಚುವರಿಯಾಗಿ 7 ರಿಂದ 8 ಲಕ್ಷ ಲೀಟರ್‌ ಹಾಲು ಉಳಿಯುತ್ತಿದೆ. ಈ ಹಾಲು ಮಾರಾಟಕ್ಕಾಗಲೀ, ಪರಿವರ್ತನೆಗಾಗಲೀ ವ್ಯವಸ್ಥೆ ಕಲ್ಪಿಸಲು ಸಾಧ್ಯವಿಲ್ಲವೆಂದು ಕೆಎಂಎಫ್‌ ಹೇಳಿದೆ. ಸರ್ಕಾರ ಜನರಿಗೆ ನೈಜ ಸ್ಥಿತಿಯನ್ನು ತಿಳಿಸಬೇಕು ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಹಾಮೂಲ್‌ನಲ್ಲಿ ನಿತ್ಯ 8 ಲಕ್ಷ ಲೀಟರ್‌ ಹಾಲು ಸಂಗ್ರಹವಾಗುತ್ತಿದ್ದು, ರೈತರು ಸಂಕಷ್ಟದಲ್ಲಿರುವಾಗ ಹಾಲು ಶೇಖರಣೆಯನ್ನು ನಿಲ್ಲಿಸುವುದಿಲ್ಲ. ಒಕ್ಕೂಟಕ್ಕೆ ಬಂದ ₹ 45 ಕೋಟಿ ಆದಾಯವನ್ನು ಈಗಾಗಲೇ ರೈತರಿಗೆ ಹಿಂತಿರುಗಿಸಲಾಗಿದೆ. ಅದೇ ರೀತಿ ಕೆಎಂಎಫ್‌ ಸಹ ₹144 ಕೋಟಿ ಆದಾಯವನ್ನು ಜಿಲ್ಲಾ ಒಕ್ಕೂಟಗಳಿಗೆ ಹಂಚಿಕೆ ಮಾಡಬೇಕು. ರಾಜ್ಯದಲ್ಲಿ 13 ಲಕ್ಷ ಕುಟುಂಬಗಳು ಹೈನೋದ್ಯಮ ಅವಲಂಬಿಸಿವೆ. ಹಾಲು ಖರೀದಿಗೆ ನಿಲ್ಲಿಸಿದರೆ ಸಂಕಷ್ಟದಲ್ಲಿರುವ ರೈತರಿಗೆ ಸಮಸ್ಯೆ ಆಗಲಿದೆ ಎಂದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.