
ಹೊಳೆನರಸೀಪುರ: ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಶೋಷಿತರ, ದಮನಿತರ ಹಿತರಕ್ಷಣೆಗಾಗಿ ಸಂಘಟನೆ ಕಟ್ಟಿದ್ದರು. ದಲಿತ ಸಮುದಾಯದಲ್ಲಿ ಹುಟ್ಟಿರುವ ನಾವು ಸಂವಿಧಾನ ನಮಗೆ ನೀಡಿರುವ ಹಕ್ಕು ಮತ್ತು ಕರ್ತವ್ಯಗಳನ್ನು ಗೌರವಿಸಿ ಸ್ಥಾನಮಾನ, ಅವಕಾಶಗಳನ್ನ ಪಡೆದುಕೊಳ್ಳಲು ಹೋರಾಡಬೇಕು ಎಂದು ಸಚಿವ ಡಾ. ಎಚ್.ಸಿ ಮಹದೇವಪ್ಪ ಕರೆ ನಿಡಿದರು.
ಡಾ. ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಕರ್ನಾಟಕ ಪರಿಶಿಷ್ಟ ಜಾತಿ– ಪರಿಶಿಷ್ಟ ವರ್ಗದ ಸರ್ಕಾರಿ ನೌಕರರ ಸಂಘದ ತಾಲ್ಲೂಕು ಘಟಕ ಶನಿವಾರ ಆಯೋಜಿಸಿದ್ದ ಜಿಲ್ಲಾ ಮಟ್ಟದ ನೌಕರರ ಸಮ್ಮಿಲನ ಸಮಾವೇಶ ಹಾಗು ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಅಂಬೇಡ್ಕರ್ ಅವರು ಒಮ್ಮೆ ನೌಕರರ ಸಮಾವೇಶ ಉದ್ದೇಶಿಸಿ ಮಾತನಾಡುತ್ತಿದ್ದ ಸಂದರ್ಭದಲ್ಲಿ ‘ನಿಮ್ಮನ್ನು ನಂಬಿ, ನಾನು ಕೋಟ್ಯಂತರ ಮುಗ್ದ ದಲಿತರಿಗೆ ಅನ್ಯಾನ ಮಾಡಿದೆ’ ಎಂದು ನೊಂದುಕೊಂಡಿದ್ದರು. ಏನು ಅನ್ಯಾಯವೆಂದರೆ, ‘ನೀವು ದಲಿತರ ಉನ್ನತಿಯ ಜವಾಬ್ದಾರಿಯನ್ನ ಕಾರ್ಯಾಂಗದ ಮೂಲಕ ನಿರ್ವಹಿಸದೆ ಸ್ವಾರ್ಥಿಗಳಾಗಿ ಬಿಟ್ಟಿರಿ’ ಎಂದು ಬೇಸರ ವ್ಯಕ್ತಪಡಿಸಿದ್ದರು. ಅಂಬೇಡ್ಕರ್ ಅವರ ಆಶಯದಂತೆ ದಲಿತರೆಲ್ಲರು ಮುಖ್ಯವಾಹಿನಿಗೆ ಬರಬೇಕು, ಬೆಳೆಯಬೇಕು ಎಂದರು.
40 ವರ್ಷಗಳ ಹಿಂದೆ ಹಾಸನದ ಡಿಎಸ್‍ಎಸ್‍ನ ಚಂದ್ರಪ್ರಸಾದ್ ತ್ಯಾಗಿ, ರೈತ ಹೋರಾಟಗಾರ ಮಂಜುನಾಥ್ ದತ್ತ ಅವರ ಜೊತೆಗೆ ಪತ್ರಕರ್ತ ಆರ್.ಪಿ. ವೆಂಕಟೇಶ್‍ಮೂರ್ತಿ ಅವರು ಪ್ರಜಾಪ್ರಭುತ್ವದ ಆಶಯಗಳಿಗಾಗಿ ಹೋರಾಟ ಮಾಡಿ ಮಾರ್ಗದರ್ಶನ ನೀಡಿದ್ದರು ಎಂದು ನೆನಪಿಸಿಕೊಂಡರು.
ಲೇಖಕ ಎನ್.ಆರ್.ಶಿವರಾಂ ಅವರು ರಚಿಸಿದ ಬುದ್ಧನ ಅನುಯಾಯಿಗಳು ಕೃತಿಯನ್ನು ಇದೇ ಸಂದರ್ಭದಲ್ಲಿ ಬಿಡುಗಡೆ ಮಾಡಿದರು.
ಸಮಾಜ ಕಲ್ಯಾಣ ಇಲಾಖೆಯ ಹೆಚ್ಚುವರಿ ನಿರ್ದೇಶಕರಾದ ಜಿ.ಪಿ.ದೇವರಾಜು ಅಧ್ಯಕ್ಷೀಯ ಭಾಷಣ ಮಾಡಿದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಸಂಸದ ಶ್ರೇಯಸ್ ಎಂ.ಪಟೇಲ್, ಶಾಸಕರಾದ ಹೆಚ್.ಡಿ.ರೇವಣ್ಣ, ಎ.ಮಂಜು, ಸಿಮೆಂಟ್ ಮಂಜು ಹಾಗೂ ಶಿವಲಿಂಗೇಗೌಡ, ಎಂಎಲ್‍ಸಿ ಶಿವಕುಮಾರ್ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.
ಕಳೆದ ವರ್ಷ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿಯಲ್ಲಿ ಶೇ 90 ಮತ್ತು ಅದಕ್ಕಿಂತ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಿದರು. ಕುಂದಾಪುರ ಡಿವೈಎಸ್‍ಪಿ ಎಚ್.ಡಿ.ಕುಲಕರ್ಣಿ, ಬೆಂಗಳೂರು ಜಿಲ್ಲಾ ಸರ್ಕಾರಿ ಅಭಿಯೋಜಕಿ ಎಚ್.ಆರ್.ಸತ್ಯವತಿ, ಮಡಿಕೇರಿ ಕಾರ್ಯಪಾಲಕ ಎಂಜಿನಿಯರ್ ಜಿ.ಹೆಚ್.ಗಿರೀಶ್, ಮಂಗಳೂರು ದಕ್ಷಿಣ ಕ್ಷೇತ್ರಶಿಕ್ಷಣಾಧಿಕಾರಿ ಎಚ್.ಆರ್.ಈಶ್ವರ್, ಸಂಘಟನೆಯ ತಾಲ್ಲೂಕು ಅಧ್ಯಕ್ಷ ವೆಂಕಟೇಶ್, ಪ್ರಧಾನ ಕಾರ್ಯದರ್ಶಿ ಎನ್.ಎಸ್.ಯತೀಶ್, ಯೋಗಮೂರ್ತಿ, ಎಸ್‍ಸಿ–ಎಸ್‍ಟಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಎಸ್ ಉಮೇಶ್, ಕೃಷ್ಣಮೂರ್ತಿ, ನಂದ, ಕಾಂತರಾಜು, ಸುರೇಶ್ ಭಾಗವಹಿಸಿದ್ದರು.
ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೋಳಿ ಮಾತನಾಡಿ ಸುಮಾರು ವರ್ಷಗಳಿಂದ ನಮ್ಮ ಸಮಸ್ಯೆಗಳು ಹಾಗೇ ಇದ್ದು ಇನ್ನೂ ಇತ್ಯರ್ಥವಾಗಿಲ್ಲ ನಮ್ಮ ಸರ್ಕಾರವಿದ್ದರೂ ಇತ್ಯರ್ಥವಾಗಿಲ್ಲ. ಆದರೆ ಸಿದ್ದರಾಮಯ್ಯ ಸರ್ಕಾರದಲ್ಲಿ ಎಸ್‍ಸಿ ಎಸ್‍ಟಿ ಸಮುದಾಯದ ಅಭಿವೃದ್ಧಿಗೆ ನಿರಂತರ ಸಹಕಾರ ಸಿಗುತ್ತಿದೆ ಎಂದರು. ಸಮುದಾಯಕ್ಕೆ ಮೀಸಲಿಟ್ಟ ಹಣವನ್ನು ಲೋಕೋಪಯೋಗಿ ಇಲಾಖೆಗೆ ಕೊಡಿಸಿದರೆ ಅದರಿಂದ ಭೂಮಿಯನ್ನು ಖರೀದಿಸಿ ಎಸ್‍ಸಿ ಎಸ್‍ಟಿ ಸಮುದಾಯಕ್ಕೆ ನಿವೇಶನವನ್ನು ವಿತರಿಸುವ ವ್ಯವಸ್ಥೆ ಮಾಡುತ್ತೇವೆ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.