
ಹಾಸನ: ಅರಸೀಕೆರೆ ಶಾಸಕ ಕೆ.ಎಂ.ಶಿವಲಿಂಗೇಗೌಡರಿಗೆ ಮುಂದಿನ ದಿನಗಳಲ್ಲೂ ಕಾಂಗ್ರೆಸ್ ಪಕ್ಷದಲ್ಲಿ ಸಚಿವ ಸ್ಥಾನ ಸಿಗುವುದು ಅನುಮಾನ ಎಂದು ಶಾಸಕ ಸ್ವರೂಪ್ ಪ್ರಕಾಶ್ ಹೇಳಿದರು.
ಜೆಡಿಎಸ್‌ನಲ್ಲಿ ಇದ್ದಿದ್ದರೆ ಸಾಯುವವರೆಗೂ ಮಂತ್ರಿಯಾಗುತ್ತಿರಲಿಲ್ಲ ಎಂಬ ಶಿವಲಿಂಗೇಗೌಡರ ಹೇಳಿಕೆಗೆ ಬುಧವಾರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಅವರು ಪ್ರತ್ಯುತ್ತರ ನೀಡಿದರು.
‘ಬಿಳಿ ಚೌಡಯ್ಯ ಅವರಿಗೆ ವಿಧಾನ ಪರಿಷತ್ ಸದಸ್ಯ ಸ್ಥಾನ ಕೊಡದ್ದಿದ್ದಕ್ಕೆ ಪಕ್ಷಾಂತರ ಮಾಡಿದೆ ಎಂದು ಹೇಳುತ್ತಾರೆ. ನಿಮಗೆ ಸ್ವಾಭಿಮಾನ ಇದ್ದಲ್ಲಿ ಗೃಹ ಮಂಡಳಿ ಅಧ್ಯಕ್ಷ ಸ್ಥಾನವನ್ನು ಕುರುಬ ಸಮಾಜದ ಬಿಳಿ ಚೌಡಯ್ಯ ಅವರಿಗೆ ಬಿಟ್ಟುಕೊಡಿ ನೋಡೊಣ’ ಎಂದು ಸವಾಲು ಹಾಕಿದರು.
‘ವಿಧಾನ ಪರಿಷತ್ ಮಾಜಿ ಸದಸ್ಯ ಗೋಪಾಲಸ್ವಾಮಿ ಅವರು ಕಳೆದ ಬಾರಿಯ ವಿಧಾನ ಪರಿಷತ್ ಚುನಾವಣೆಯಲ್ಲಿ ತಾವು ನಿಲ್ಲದೇ ಶಂಕರ್ ಎಂಬುವವರನ್ನು ಕಣಕ್ಕೆ ಇಳಿಸಿದರು. ಜಿಲ್ಲೆಗೆ ಮುಖ್ಯಮಂತ್ರಿ ಉಪ ಮುಖ್ಯಮಂತ್ರಿ ಬಂದಾಗ ಮಾತ್ರ ಕಾಣಿಸಿಕೊಳ್ಳುವ ಇವರು, ಜಿಲ್ಲೆಗೆ ಯಾವ ಕೆಲಸ ಮಾಡಿದ್ದಾರೆ ಎಂಬುದನ್ನು ಸ್ಪಷ್ಟಪಡಿಸಲಿ. ಅನವಶ್ಯಕವಾಗಿ ನಮ್ಮ ಪಕ್ಷದ ಬಗ್ಗೆ ಮಾತನಾಡುವ ಯಾವುದೇ ನೈತಿಕತೆ ನಿಮಗೆ ಇಲ್ಲ’ ಎಂದರು.
‘ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣ ಬೈರೇಗೌಡರು 3–4 ತಿಂಗಳಿನಿಂದ ಹಾಸನಕ್ಕೆ ಬಂದಿಲ್ಲ. ಜಿಲ್ಲೆಯ ಅಭಿವೃದ್ಧಿ ಕಡೆ ಗಮನ ಹರಿಸಿಲ್ಲ. ತಾಲ್ಲೂಕು ಕಚೇರಿಯಲ್ಲಿ ರೈತರು, ಸಾಮಾನ್ಯ ಜನರ ಕೆಲಸವೇ ಆಗುತ್ತಿಲ್ಲ. ಪ್ರತಿಯೊಂದುಕ್ಕೂ ಲಂಚ ಕೊಡಬೇಕಾದ ಪರಿಸ್ಥಿತಿ ಇದೆ. ಈ ಎಲ್ಲ ವಿಚಾರ ಕಂದಾಯ ಸಚಿವರ ಗಮನಕ್ಕೆ ಇದಿಯೋ ಇಲ್ಲವೋ ಗೊತ್ತಿಲ್ಲ. ಈ ಕುರಿತು ಮುಂದಿನ ದಿನಗಳಲ್ಲಿ ಹೋರಾಟ ನಡೆಸಲಾಗುವುದು’ ಎಂದು ಹೇಳಿದರು.
ಕೇವಲ ಸಾಮಾಜಿಕ ಜಾಲತಾಣದಲ್ಲಿ ಕಾಣಿಸಿಕೊಳ್ಳುವ ಸಚಿವರು, ಕಾಮಗಾರಿ ವೀಕ್ಷಣೆ ವೇಳೆ ಎಂಜಿನಿಯರ್‌ಗಳನ್ನು ತರಾಟೆಗೆ ತೆಗೆದುಕೊಳ್ಳುವ ವಿಚಾರದಲ್ಲಷ್ಟೇ ಮುಂದಿದ್ದಾರೆ ಎಂದು ಟೀಕಿಸಿದರು.
ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಎಸ್.ಲಿಂಗೇಶ್ ಮಾತನಾಡಿ, ‘ಗೋಪಾಲಸ್ವಾಮಿ ಅವರು ತಮ್ಮ ಪಕ್ಷದ ನಾಯಕರು ಬಂದಾಗ ಅವರ ಬಾಲ ಹಿಡಿದು ತಿರುಗಾಡುವುದನ್ನು ಬಿಟ್ಟರೆ, ಜಿಲ್ಲೆಯ ಅಭಿವೃದ್ಧಿ ಕಡೆ ಗಮನಹರಿಸಿಲ್ಲ. ಬದಲಿಗೆ ನಮ್ಮ ಪಕ್ಷದಿಂದ ಆಯೋಜಿಸಿದ್ದ ಸಮಾವೇಶದ ಕುರಿತು ಇಲ್ಲಸಲ್ಲದ ಹೇಳಿಕೆ ನೀಡುತ್ತಿದ್ದಾರೆ’ ಎಂದು ಟೀಕಿಸಿದರು.
‘ನಾವೇನು ಶಿವಲಿಂಗೇಗೌಡರಿಗಾಗಿ ಸಮಾವೇಶ ಮಾಡಿಲ್ಲ. ಬದಲಿಗೆ ಅವರೇ ಸರ್ಕಾರದ ಅಧಿಕಾರ ದುರುಪಯೋಗ ಪಡಿಸಿಕೊಂಡು ಎರಡು ಸಮಾವೇಶ ಮಾಡಿ, ನಮ್ಮ ವಿರುದ್ಧ ಮಾತನಾಡಿದ್ದಾರೆ. ಮುಂದಿನ ದಿನಗಳಲ್ಲಿ ಮೈಸೂರು ಸೇರಿದಂತೆ ರಾಜ್ಯದ ನಾಲ್ಕು ಕಡೆ ಜೆಡಿಎಸ್ ಬೃಹತ್ ಸಮಾವೇಶ ಮಾಡಲಾಗುವುದು’ ಎಂದು ಹೇಳಿದರು.
ಜೆಡಿಎಸ್ ತಾಲ್ಲೂಕು ಘಟಕದ ಅಧ್ಯಕ್ಷ ಎಸ್. ದ್ಯಾವೇಗೌಡ, ವಾಸುದೇವ್, ಇತರರು ಇದ್ದರು.
ಸಮಾವೇಶ ಯಶಸ್ವಿ
ನಗರದ ಭುವನಹಳ್ಳಿಯ ನೂತನ ಲೇಔಟ್‌ನಲ್ಲಿ ನಡೆದ ಜೆಡಿಎಸ್ ಸಮಾವೇಶ ರಾಜ್ಯದ ಎಲ್ಲ ಕಾರ್ಯಕರ್ತರು ಶಾಸಕರು ಮುಖಂಡರು ಹಾಗೂ ಎಲ್ಲರ ಸಹಕಾರದೊಂದಿಗೆ ಯಶಸ್ವಿಯಾಗಿದೆ ಎಂದು ಜಿಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಎಸ್. ಲಿಂಗೇಶ್ ತಿಳಿಸಿದರು. ಸಮಾವೇಶದಲ್ಲಿ ನಿರೀಕ್ಷೆಗೂ ಮೀರಿ 2.50 ಲಕ್ಷಕ್ಕೂ ಹೆಚ್ಚು ಜನರು ಬಂದಿದ್ದರು. ಇದರ ಹಿಂದೆ ಯುವ ನಾಯಕರಾದ ನಿಖಿಲ್ ಕುಮಾರಸ್ವಾಮಿ ಮತ್ತು ಡಾ.ಸೂರಜ್ ರೇವಣ್ಣ ಅವರ ಶ್ರಮವೂ ಇದೆ. ಸಮಾವೇಶದಲ್ಲಿ ಯಾವುದೇ ತೊಂದರೆ ಆಗದೇ ಅಚ್ಚುಕಟ್ಟಾಗಿ ನಡೆಯಲು ಎಚ್.ಡಿ.ದೇವೇಗೌಡರ ಮಾರ್ಗದರ್ಶನ ಹಾಗೂ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಶಾಸಕ ಎಚ್.ಡಿ.ರೇವಣ್ಣ ಅವರ ಸಂಘಟನೆ ಪ್ರಯತ್ನ ಮತ್ತು ಸ್ಥಳೀಯ ಶಾಸಕ ಸ್ವರೂಪ್ ಪ್ರಕಾಶ್ ಅವರ ಅವಿರತ ಶ್ರಮವಿದೆ ಎಂದು ಹೇಳಿದರು. ಜಿಲ್ಲಾ ಪೊಲೀಸ್ ಇಲಾಖೆಯು ಸೂಕ್ತ ಬಂದೋಬಸ್ತ್ ಮತ್ತು ಸಂಚಾರ ನಿಯಂತ್ರಣ ಮಾಡುವಲ್ಲಿ ಸಹಕಾರ ನೀಡಿದ್ದು ಎಲ್ಲರಿಗೂ ಜೆಡಿಎಸ್ ಪಕ್ಷದ ಪರವಾಗಿ ಕೃತಜ್ಞತೆ ತಿಳಿಸುವುದಾಗಿ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.