ADVERTISEMENT

ಮೀಸಲು ಟೆಂಡರ್‌ನಲ್ಲಿ ನಿಯಮ ಉಲ್ಲಂಘನೆ: ಬಿ.ಶಿವರಾಂ ಆರೋಪ

ಜೆಡಿಎಸ್‌ ವಿರುದ್ಧ ಕೆಪಿಸಿಸಿ ಉಪಾಧ್ಯಕ್ಷ ಆರೋಪ

​ಪ್ರಜಾವಾಣಿ ವಾರ್ತೆ
Published 24 ಜನವರಿ 2019, 14:30 IST
Last Updated 24 ಜನವರಿ 2019, 14:30 IST
ಬಿ.ಶಿವರಾಂ
ಬಿ.ಶಿವರಾಂ   

ಹಾಸನ : ‘ ಸರ್ಕಾರಿ ಕಾಮಗಾರಿಗಳ ಗುತ್ತಿಗೆ ವಿಚಾರದಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡದ ಮೀಸಲಾತಿ ಉಲ್ಲಂಘನೆ ಮಾಡಲಾಗುತ್ತಿದೆ’ ಎಂದು ಕೆಪಿಸಿಸಿ ಉಪಾಧ್ಯಕ್ಷ ಬಿ.ಶಿವರಾಂ ಆರೋಪಿಸಿದರು.

‘ಪರಿಶಿಷ್ಟ ಜಾತಿ ಮತ್ತು ಪಂಗಡದ ಗುತ್ತಿಗೆದಾರರಿಗೆ ₹ 50 ಲಕ್ಷಕ್ಕೆ ಮೀರದ ಸರ್ಕಾರಿ ಕಾಮಗಾರಿಗಳಲ್ಲಿ ಮೀಸಲಾತಿ ನೀಡಬೇಕು. ಆದರೆ, ಜಿಲ್ಲೆಯಲ್ಲಿ ಕಾನೂನು ಉಲ್ಲಂಘನೆ ಮಾಡಲಾಗುತ್ತಿದೆ’ ಲೋಕೋಪಯೋಗಿ ಸಚಿವ ಎಚ್‌.ಡಿ.ರೇವಣ್ಣ ವಿರುದ್ಧ ಸುದ್ದಿಗೋಷ್ಠಿಯಲ್ಲಿ ದೂರಿದರು.

"ಜಿಲ್ಲೆಯಲ್ಲಿ ₹ 50 ಲಕ್ಷದೊಳಗಿನ ಸರ್ಕಾರದ ಬಿಡಿ ಕಾಮಗಾರಿಗಳನ್ನು ಪ್ಯಾಕೇಜ್ ಮಾಡುವ ಮೂಲಕ ಪರಿಶಿಷ್ಟ ಜಾತಿ, ಪಂಗಡಕ್ಕೆ ಮೀಸಲಾತಿ ಸಿಗದಂತೆ ಮಾಡಲಾಗುತ್ತಿದೆ. ಕಾವೇರಿ ನೀರಾವರಿ ನಿಗಮ, ಬೇಲೂರಿನಲ್ಲಿ ಯಗಚಿ ಜಲಾಶಯಕ್ಕೆ ಸಂಬಂಧಿಸಿದ ಕಾಮಗಾರಿ, ಲೋಕೋಪಯೋಗಿ ಇಲಾಖೆ, ಅಲ್ಪಸಂಖ್ಯಾತರ ಇಲಾಖೆ, ಜಿಲ್ಲಾ ಪಂಚಾಯಿತಿ ಹೀಗೆ ವಿವಿಧ ಇಲಾಖೆಗಳಲ್ಲಿ ಕಾಮಗಾರಿಗಳನ್ನು ಪ್ಯಾಕೇಜ್ ಮಾಡುವ ಮೂಲಕ ಎಸ್‌ಸಿ, ಎಸ್‌ಟಿ ಗುತ್ತಿಗೆದಾರರನ್ನು ಬಲಿ ತೆಗೆದುಕೊಳ್ಳಲಾಗುತ್ತಿದೆ. ಇದರ ಉದ್ದೇಶ ದಲಿತ ಸಮುದಾಯಕ್ಕೆ ಮೀಸಲಾತಿ ದೊರಕದಂತೆ ಮಾಡುವ ತಂತ್ರಗಾರಿಕೆಯಾಗಿದೆ. ಜಿಲ್ಲೆಯಲ್ಲಿ ಈವರೆಗೆ ₹ 100 ಕೋಟಿ ಮೊತ್ತದ ಕಾಮಗಾರಿಗಳನ್ನು ಪ್ಯಾಕೇಜ್ ಟೆಂಡರ್ ಮಾಡುವ ಮೂಲಕ ತಮಗೆ ಬೇಕಾದವರಿಗೆ ನೀಡಲಾಗುತ್ತಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ADVERTISEMENT

‘₹ 5 ಲಕ್ಷದೊಳಗಿನ ಕಾಮಗಾರಿಗೆ ಆನ್ ಲೈನ್ ಟೆಂಡರ್ ಪ್ರಕ್ರಿಯೆ ನಡೆಸದೇ ತಮಗೆ ಬೇಕಾದವರಿಗೆ ಗುತ್ತಿಗೆ ನೀಡಲಾಗುತ್ತಿದೆ. ಇದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಸಂಸದ ಎಚ್.ಡಿ.ದೇವೇಗೌಡ ಹಾಗೂ ಸಚಿವ ಎಚ್.ಡಿ.ರೇವಣ್ಣ ಅವರ ಗಮನಕ್ಕೆ ಬಂದಿಲ್ಲವೇ’ ಎಂದು ಪ್ರಶ್ನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.