ADVERTISEMENT

ಸರ್ಕಾರಿ ಪಾಲಿಟೆಕ್ನಿಕ್‌ನಲ್ಲಿ ‘ಮಿಯಾವಾಕಿ’ ಅರಣ್ಯ: ಡಾ. ಎಚ್.ಜಿ. ಮಂಜುನಾಥ್

ಪರಿಸರ ರಕ್ಷಣೆಗೆ ತಾಂತ್ರಿಕ ಶಿಕ್ಷಣದ ಗಟ್ಟಿ ಕೊಡುಗೆ

​ಪ್ರಜಾವಾಣಿ ವಾರ್ತೆ
Published 22 ಫೆಬ್ರುವರಿ 2026, 3:29 IST
Last Updated 22 ಫೆಬ್ರುವರಿ 2026, 3:29 IST
ಹಾಸನದ ಶ್ರೀಮತಿ ಎಲ್.ವಿ. ಸರ್ಕಾರಿ ಪಾಲಿಟೆಕ್ನಿಕ್ ಆವರಣದಲ್ಲಿ ಹಮ್ಮಿಕೊಳ್ಳಲಾಗಿದ್ದ ‘ಬದುಕು ಮತ್ತು ಪರಿಸರ – ನಮ್ಮ ಹಕ್ಕು, ನಮ್ಮ ಕರ್ತವ್ಯ’ ಸಂವಾದದಲ್ಲಿ ಡಾ.ಎಚ್‌.ಜಿ. ಮಂಜುನಾಥ್‌ ಅವರನ್ನು ಸ್ವಾಗತಿಸಲಾಯಿತು.
ಹಾಸನದ ಶ್ರೀಮತಿ ಎಲ್.ವಿ. ಸರ್ಕಾರಿ ಪಾಲಿಟೆಕ್ನಿಕ್ ಆವರಣದಲ್ಲಿ ಹಮ್ಮಿಕೊಳ್ಳಲಾಗಿದ್ದ ‘ಬದುಕು ಮತ್ತು ಪರಿಸರ – ನಮ್ಮ ಹಕ್ಕು, ನಮ್ಮ ಕರ್ತವ್ಯ’ ಸಂವಾದದಲ್ಲಿ ಡಾ.ಎಚ್‌.ಜಿ. ಮಂಜುನಾಥ್‌ ಅವರನ್ನು ಸ್ವಾಗತಿಸಲಾಯಿತು.   

ಹಾಸನ: ‘ಪರಿಸರ ಸಂರಕ್ಷಣೆ  ಮಾತಿಗಿಂತ ಕೃತಿಯಲ್ಲಿ ತೋರಬೇಕಾದ ಮಹತ್ಕಾರ್ಯ. ಹಾಸನದ ಎಲ್.ವಿ. ಪಾಲಿಟೆಕ್ನಿಕ್ ಈ ನಿಟ್ಟಿನಲ್ಲಿ ಮಾದರಿಯಾಗಿ ರೂಪುಗೊಂಡಿದೆ ’ ಎಂದು ಭಾರತ ಜ್ಞಾನ ವಿಜ್ಞಾನ ಸಮಿತಿಯ ತಾಲ್ಲೂಕು ಘಟಕದ ಅಧ್ಯಕ್ಷ ಡಾ. ಎಚ್.ಜಿ. ಮಂಜುನಾಥ್ ಅಭಿಪ್ರಾಯಪಟ್ಟರು.

ನಗರದ ಶ್ರೀಮತಿ ಎಲ್.ವಿ. ಸರ್ಕಾರಿ ಪಾಲಿಟೆಕ್ನಿಕ್ ಆವರಣದಲ್ಲಿ ಭಾರತ ಜ್ಞಾನ ವಿಜ್ಞಾನ ಸಮಿತಿ ಹಾಗೂ ಕಾಲೇಜಿನ ಸಹಯೋಗದೊಂದಿಗೆ ಹಮ್ಮಿಕೊಳ್ಳಲಾಗಿದ್ದ ‘ಬದುಕು ಮತ್ತು ಪರಿಸರ – ನಮ್ಮ ಹಕ್ಕು, ನಮ್ಮ ಕರ್ತವ್ಯ’ ಸಂವಾದದಲ್ಲಿ ಅವರು ಮಾತನಾಡಿದರು.

‘ 5-6 ತಿಂಗಳುಗಳಿಂದ ಎಲ್.ವಿ. ಪಾಲಿಟೆಕ್ನಿಕ್ ಆವರಣದಲ್ಲಿ ಬಿಜಿವಿಎಸ್ ಸಹಯೋಗದೊಂದಿಗೆ ಹಣ್ಣಿನ ವನ ಹಾಗೂ ಜಪಾನಿ ಮೂಲದ 'ಮಿಯಾವಾಕಿ' ಮಾದರಿ ಅರಣ್ಯವನ್ನು ನಿರ್ಮಿಸಲಾಗಿದೆ. ಇದಕ್ಕೆ ಹನಿ ನೀರಾವರಿ ವ್ಯವಸ್ಥೆಯನ್ನೂ ಕಲ್ಪಿಸಲಾಗಿದೆ. ಇನ್ನೆರಡು ವರ್ಷಗಳಲ್ಲಿ ಈ ಪುಟ್ಟ ಕಾಡು ನಗರದ ಮಧ್ಯಭಾಗದಲ್ಲಿ ಪರಿಸರ ಅಧ್ಯಯನದ ಜೀವಂತ ಮಾದರಿಯಾಗಿ ಹೊರಹೊಮ್ಮಲಿದೆ.  ಜನರಿಗೆ ಶುದ್ಧ ಆಮ್ಲಜನಕ ಪೂರೈಸುವ ಹಸಿರು ಉಗ್ರಾಣವಾಗಲಿದೆ. ಪರಿಸರ ಸಂರಕ್ಷಣೆ ನಿರಂತರ ಚಟುವಟಿಕೆಯಾಗಲು ಕಾಲೇಜಿನಲ್ಲಿ ತಕ್ಷಣವೇ ಇಕೋ ಕ್ಲಬ್ ಸ್ಥಾಪಿಸಬೇಕು’ ಎಂದು ಸಲಹೆ ನೀಡಿದರು.

ADVERTISEMENT

ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದ ಬಿಜಿವಿಎಸ್‌ ಜಿಲ್ಲಾ ಸಮಿತಿ ಸದಸ್ಯ ಅಹಮದ್ ಹಗರೆ, ಸಂವಿಧಾನದ ಪ್ರಕಾರ ಪರಿಸರ ರಕ್ಷಣೆ ಮತ್ತು ವೈಜ್ಞಾನಿಕ ಮನೋಭಾವ ಬೆಳೆಸಿಕೊಳ್ಳುವುದು ಪ್ರತಿಯೊಬ್ಬನ ಕರ್ತವ್ಯ. ನಮ್ಮ ದೇಶದಲ್ಲಿ ಅರಣ್ಯದ ಪ್ರಮಾಣ ಕೇವಲ ಶೇ 24 ರಷ್ಟಿದ್ದು, ರಾಷ್ಟ್ರೀಯ ಅರಣ್ಯ ನೀತಿಯಂತೆ  ಕನಿಷ್ಠ ಶೇ 33 ಇರಬೇಕು ಎಂದು ವಿವರಿಸಿದರು.

ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ಜಾಯ್ ವಿ.ಜೆ. ಮಾತನಾಡಿ, ‘ಡಾ. ಮಂಜುನಾಥ್ ಅವರ ಸೇವಾ ಮನೋಭಾವದಿಂದಾಗಿ ಕಾಲೇಜು ಆವರಣದಲ್ಲಿ ಪರಿಸರ ಪ್ರಜ್ಞೆ ಮೂಡಿಸಲು ಸಾಧ್ಯವಾಗಿದೆ. ಇಲಾಖೆ ಹಾಗೂ ಸರ್ಕಾರಕ್ಕೆ ತಾಂತ್ರಿಕ ಶಿಕ್ಷಣ ಸಂಸ್ಥೆಯು ನೀಡುತ್ತಿರುವ ಪರಿಸರ ಪೂರಕ ಕೊಡುಗೆ ಇದಾಗಿದೆ ಎಂದು ಶ್ಲಾಘಿಸಿದರು.

ಭರತ್ ಜೆ. ನಿರೂಪಿಸಿದರು, ಉಪನ್ಯಾಸಕ ದಿನೇಶ್ ವಿ.ಸಿ. ಸ್ವಾಗತಿಸಿದರು. ಉಪನ್ಯಾಸಕಿ ದಿವ್ಯಾ ವಂದಿಸಿದರು. ಸಂವಾದದ ನಂತರ ಕಾಲೇಜಿನ ನೂರಾರು ವಿದ್ಯಾರ್ಥಿಗಳು ಮಿಯಾವಾಕಿ ಅರಣ್ಯಕ್ಕೆ ಭೇಟಿ ನೀಡಿ, ಗಿಡಗಳಿಗೆ ನೀರುಣಿಸಿದರು. ವರ್ಷಕ್ಕೆ ಕನಿಷ್ಠ 2 ಮರಗಳನ್ನು ನೆಟ್ಟು ಪೋಷಿಸುವುದು, ಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡುವುದು ಮತ್ತು ನೀರಿನ ಮಿತ ಬಳಕೆ ಮಾಡುವುದು, ವೈಜ್ಞಾನಿಕ ಮನೋಭಾವ ಬೆಳೆಸಿಕೊಳ್ಳುವುದು ಹಾಗೂ ಮಹಿಳೆಯರ ಗೌರವ ಕಾಪಾಡುವುದು ಎಂಬ ಅಂಶಗಳನ್ನೊಳಗೊಂಡ ಪ್ರತಿಜ್ಞಾ ವಿಧಿ ಸ್ವೀಕರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.