ADVERTISEMENT

ಅರಸೀಕೆರೆ: ಹುಟ್ಟೂರಿನ ಸರ್ಕಾರಿ ಶಾಲೆಗೆ ಕಾಯಕಲ್ಪ ನೀಡಿದ ಉದ್ಯಮಿ

ಬಿ.ವಿ. ಹಟ್ಟಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಅಭಿವೃದ್ಧಿ ಶಿವಕುಮಾರ್ ಸಹಾಯಹಸ್ತ

​ಪ್ರಜಾವಾಣಿ ವಾರ್ತೆ
Published 17 ಅಕ್ಟೋಬರ್ 2025, 2:08 IST
Last Updated 17 ಅಕ್ಟೋಬರ್ 2025, 2:08 IST
ಬಿ.ವಿ. ಹಟ್ಟಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಕಾಂಪೌಂಡ್ ಮೇಲೆ ಚಿತ್ರಗಳನ್ನು ಬಿಡಿಸುತ್ತಿರುವುದು.
ಬಿ.ವಿ. ಹಟ್ಟಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಕಾಂಪೌಂಡ್ ಮೇಲೆ ಚಿತ್ರಗಳನ್ನು ಬಿಡಿಸುತ್ತಿರುವುದು.   

ಅರಸೀಕೆರೆ: ತಾಲ್ಲೂಕಿನ ಕಸಬಾ ಹೋಬಳಿ ಅಗ್ಗುಂದ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಬಿ.ವಿ. ಹಟ್ಟಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಕಟ್ಟಡಕ್ಕೆ ಉದ್ಯಮಿ ಜೆ.ಸಿ. ಶಿವಕುಮಾರ್, ಮೂಲ ಸೌಲಭ್ಯಗಳನ್ನು ಒದಗಿಸಿದ್ದು, ಹುಟ್ಟೂರಿನ ಶಾಲೆಯನ್ನು ಮಾದರಿ ಶಾಲೆಯಾಗಿ ರೂಪಿಸಿದ್ದಾರೆ.

ಸರ್ಕಾರಿ ಶಾಲೆ ಎಂದರೆ ಅಸಡ್ಡೆ ತೋರುವ ದಿನಗಳಲ್ಲಿ, ತಂದೆ ಚನ್ನಾ ಬೋವಿ ಮತ್ತು ತಾಯಿ ತಾಯಮ್ಮ ಅವರು ಬಾಳಿ ಬದುಕಿದ ಬಿ.ವಿ ಹಟ್ಟಿ ಗ್ರಾಮದ ಸರ್ಕಾರಿ ಶಾಲೆಯ ತರಗತಿ ಕೊಠಡಿಗಳು ಮತ್ತು ಕಾಂಪೌಂಡ್‌ಗೆ ಬಣ್ ಬಳಿದು, ಕರ್ನಾಟಕದ ಸಂಸ್ಕೃತಿ ಬಿಂಬಿಸುವ ಮತ್ತು ಶಿಕ್ಷಣಕ್ಕೆ ಸ್ಪೂರ್ತಿ ನೀಡುವ ಸಂದೇಶಗಳ ಬರೆಸಿದ್ದಾರೆ. ಇದೀಗ ಈ ಶಾಲೆ ವಿಶೇಷ ಮೆರುಗು ಪಡೆದಿದ್ದು, ಗ್ರಾಮಸ್ಥರ ಆಕರ್ಷಣೆಯ ಕೇಂದ್ರವಾಗಿದೆ.

ಪೂರ್ವಿಕರು ಮತ್ತು ತಂದೆ– ತಾಯಿ ಬಾಳಿರುವ ಬಿ.ವಿ ಹಟ್ಟಿಯಂತಹ ಗ್ರಾಮದಲ್ಲಿ ಸರ್ಕಾರಿ ಶಾಲೆ ಪ್ರಾರಂಭವಾಗಿ ಹತ್ತಾರು ವರ್ಷಗಳಾಗಿವೆ. ಆದರೆ ಸುಣ್ಣ ಬಣ್ಣವಿಲ್ಲದ ಈ ಶಾಲಾ ಕಟ್ಟಡಕ್ಕೆ ಹೊಸ ರೂಪ ನೀಡಲು ಸ್ಥಳಿಯ ಗ್ರಾಮಸ್ಥರು, ಜನಪ್ರತಿನಿಧಿಗಳು, ಶಿಕ್ಷಕರು ಹಾಗೂ ಹಳೇ ವಿದ್ಯಾರ್ಥಿಗಳ ಸಂಘದ ಸದಸ್ಯರು ಸಮಾಲೋಚನೆ ನಡೆಸಿದ್ದರು. ಪರಿಣಮಿಸಿದೆ.

ADVERTISEMENT

ಉದ್ಯಮಿ ಜೆ.ಸಿ ಶಿವಕುಮಾರ್ ಅವರು ಚನ್ನರಾಯಪಟ್ಟಣ ತಾಲ್ಲೂಕಿನ ಹಿರೀಸಾವೆ ಹೋಬಳಿ ಜಿನ್ನೇನಹಳ್ಳಿ ಗ್ರಾಮದವನಾಗಿದ್ದರೂ, ಹುಟ್ಟೂರಿಗೆ ಸೇವೆ ಸಲ್ಲಿಸುವ ಕಾರ್ಯಕ್ಕೆ ಮುಂದಾಗಿರುವುದು ಶ್ಲಾಘನೀಯ ಎನ್ನುತ್ತಾರೆ ಗ್ರಾಮಸ್ಥರು.

ಸಮರ್ಪಣಾ ತಂಡ ಯುವಕ– ಯುವತಿಯರು ಮತ್ತು ತುಮಕೂರಿನ ವಿದ್ಯೋದಯ ಕಾನೂನು ಕಾಲೇಜಿನ‌ ರಾಷ್ಟ್ರೀಯ ಸೇವಾ ಯೋಜನೆ ಕಾರ್ಯಕರ್ತರು 4 ದಿನಗಳ ಕಾಲ ಹಗಲು ರಾತ್ರಿ ಈ ಕಾರ್ಯ ಮಾಡಿದ್ದಾರೆ. ಇಂತಹ ಪ್ರಯತ್ನಗಳಿಂದ ಇತರೇ ಸರ್ಕಾರಿ ಶಾಲೆಗಳಿಗೆ ಪ್ರೇರಣೆಯಾಗಿ, ಅರ್ಥಿಕವಾಗಿ ಸದೃಡರಾಗಿರುವರು ಇಂತಹ ಸೇವೆ ಮಾಡಲಿ ಎಂಬುದು ನಮ್ಮ ಅಭಿಲಾಷೆಯಾಗಿದೆ ಎನ್ನುತ್ತಾರೆ ಸಮರ್ಪಣಾ ತಂಡದವರು.

ಕುಗ್ರಾಮಗಳಲ್ಲಿರುವ ಸರ್ಕಾರಿ ಶಾಲೆಗಳಲ್ಲಿ ಓದಿದ ಹಲವರು, ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿ ಆದರ್ಶ ವ್ಯಕ್ತಿಗಳಾಗಿದ್ದಾರೆ. ಈ ಗ್ರಾಮದ ಮಕ್ಕಳು ಶಿಕ್ಷಣವನ್ನು ತಮ್ಮದಾಗಿಸಿಕೊಂಡರೆ, ಮುಂದಿನ ದಿನಗಳಲ್ಲಿ ಸಮಾಜ ಗುರುತಿಸುವ ನಾಗರಿಕರಾಗುತ್ತಾರೆ ಎನ್ನುತ್ತಾರೆ ಗ್ರಾಮದ ಮುಖಂಡರು.

ಬಣ್ಣ ಹಾಗೂ ಸುಂದರ ಕಲಾಕೃತಿಗಳೊಂದಿಗೆ ಕಂಗೊಳಿಸುತ್ತಿರುವ ಶಾಲೆಯ ಗೋಡೆಗಳು 
ಇದೇ ಊರಿನವರಾದ ಶಿವಕುಮಾರ್ ನಮ್ಮೂರಿನ ಸರ್ಕಾರಿ ಶಾಲೆಗೆ ವಿಶೇಷ ಮೆರಗನ್ನು ನೀಡಿ ಯಾವ ಖಾಸಗಿ ಶಾಲೆಗೂ ಕಡಿಮೆ ಇಲ್ಲದಂತೆ ಕಾಯಕಲ್ಪ ನೀಡಿದ್ದಾರೆ
ಬಿ.ನಾಗರಾಜು ಶಾಲಾ ಮುಖ್ಯ ಶಿಕ್ಷಕ
ಶಿವಕುಮಾರ್‌ ಅವರು ಶಾಲೆಯ ಜೊತೆಗೆ ದೇಗುಲ ಜೀರ್ಣೋದ್ದಾರಕ್ಕೂ ಕೊಡುಗೆ ನೀಡಿದ್ದಾರೆ. ಹುಟ್ಟೂರಿನ ಸ್ಮರಣೆಗೆ ಇದೊಂದು ಮಾದರಿ ಕಾರ್ಯ.
ರೇವಣ್ಣ ಅಗ್ಗುಂದ ಗ್ರಾ.ಪಂ ಸದಸ್ಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.