ಬೇಲೂರು: ‘ಪುರಸಭೆ ಅಧ್ಯಕ್ಷ ಎ.ಆರ್.ಅಶೋಕ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿ, ಹೇಳಿದ ಮಾತಿನಂತೆ ನಡೆದುಕೊಳ್ಳಬೇಕು. ಇಲ್ಲವಾದಲ್ಲಿ ಪಕ್ಷ ಶಿಸ್ತು ಕ್ರಮ ತೆಗೆದುಕೊಳ್ಳುತ್ತದೆ’ ಎಂದು ಕಾಂಗ್ರೆಸ್ ತಾಲ್ಲೂಕು ಘಟಕದ ಅಧ್ಯಕ್ಷ ಎಂ.ಜೆ.ನಿಶಾಂತ್ ಎಚ್ಚರಿಸಿದರು.
ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಎಐಸಿಸಿ ಸದಸ್ಯ ಬಿ.ಶಿವರಾಂ, ಬಡವರ ಪರವಾಗಿ ಕೆಲಸ ಮಾಡುತ್ತಿರುವ ನಾಯಕರಾಗಿದ್ದು, ಅಂಥವರ ಬಗ್ಗೆ ಪುರಸಭೆ ಅಧ್ಯಕ್ಷ ಎ.ಆರ್.ಅಶೋಕ್ ಮಾತನಾಡಿರುವುದು ಖಂಡನೀಯ. ಅಶೋಕ್ ಅವರು ಶಿವರಾಂ ಬಳಿ ಕ್ಷಮೆಯಾಚಿಸಬೇಕು’ ಎಂದು ಆಗ್ರಹಿಸಿದರು.
‘ಇವರು ಚುನಾವಣೆಯಲ್ಲಿ ಗೆಲ್ಲಬೇಕಾದರೆ ಬಿ.ಶಿವರಾಂ ಅವರ ಶ್ರಮವಿದ್ದು, ಚುನಾವಣೆ ಖರ್ಚಿಗಾಗಿ ಶಿವರಾಂ ಸಹ ಹಣ ಕೊಟ್ಟಿದ್ದನ್ನು ಮರೆಯಬಾರದು’ ಎಂದರು.
‘ಬಿ.ಶಿವರಾಂ ವಿರುದ್ಧ ಅಶೋಕ್ ಮಾಡಿರುವ ಆರೋಪಗಳು ಸತ್ಯಕ್ಕೆ ದೂರವಾಗಿದ್ದು, ವರ್ಗಾವಣೆ ದಂಧೆಯಲ್ಲಿ ತೊಡಗಿರುವ ಬಗ್ಗೆ ದಾಖಲಾತಿಗಳು ಇದ್ದರೆ, ಬಹಿರಂಗ ಪಡಿಸಲಿ. ತಾಕತ್ತಿದ್ದರೆ ಪುರಸಭೆ ಸದಸ್ಯತ್ವ ಸ್ಥಾನಕ್ಕೆ ರಾಜೀನಾಮೆ ನೀಡಿ, ಕಾಂಗ್ರೆಸ್ ಪಕ್ಷದ ಚಿಹ್ನೆಯನ್ನು ಬಿಟ್ಟು ಗೆದ್ದು ಬರಲಿ’ ಎಂದು ಸವಾಲು ಹಾಕಿದರು.
‘ಅಧಿಕಾರದ ದುರಾಸೆಗಾಗಿ, ವಿರೋಧ ಪಕ್ಷದ ಸದಸ್ಯರ ಮಾತು ಕೇಳಿ ಅಶೋಕ್ ಹಾಳಾಗುತ್ತಿದ್ದಾರೆ. ಶನಿದೇವರ ದೇವಸ್ಥಾನದಲ್ಲಿ ಕೊಟ್ಟ ಮಾತಿನಂತೆ ಐದುವರೆ ತಿಂಗಳ ಅವಧಿ ಮುಗಿದ ಬಳಿಕ ರಾಜೀನಾಮೆ ನೀಡಬೇಕಿತ್ತು. ನಂತರ ಚನ್ನಕೇಶವನ ಜಾತ್ರೆ ಮುಗಿದ ತಕ್ಷಣ ಕೊಡುತ್ತೇನೆ ಎಂದು ಹೇಳಿ ಈಗ ವರಸೆ ಬದಲಾಯಿಸುತ್ತಿರುವುದು ಶೋಭೆ ತರುವುದಿಲ್ಲ’ ಎಂದು ಹೇಳಿದರು.
‘ಪಕ್ಷ ತಾಯಿಗೆ ಸಮಾನ. ಪಕ್ಷಕ್ಕೆ ಗೌರವ ನೀಡಿ. ನಿಮಗೆ ಸಾಕಷ್ಟು ಬಾರಿ ಬುದ್ಧಿ ಹೇಳಿದರೂ ನಿಮ್ಮ ಬದಲಾಗಲಿಲ್ಲ. ಅಧಿಕಾರ ಉಳಿಸಿಕೊಳ್ಳಲು ಕೆಲವರನ್ನು ಹೊಗಳುವುದು, ತೆಗಳುವುದು ಸರಿಯಲ್ಲ. ನಡೆದಿರುವ ವಿದ್ಯಮಾನಗಳ ಬಗ್ಗೆ ಸಂಸದ ಶ್ರೇಯಸ್ ಪಟೇಲ್ ಹಾಗೂ ಹೈಕಮಾಂಡ್‌ಗೆ ದೂರು ನೀಡಲಾಗಿದ್ದು, ಸದ್ಯಕ್ಕೆ ನಗರ ಘಟಕದ ಅಧ್ಯಕ್ಷ ಸ್ಥಾನದಿಂದ ವಜಾ ಮಾಡಲಾಗಿದೆ’ ಎಂದು ತಿಳಿಸಿದರು.
ಕಾಂಗ್ರೆಸ್ ಬಿಕ್ಕೋಡು ಹೋಬಳಿ ಘಟಕದ ಅಧ್ಯಕ್ಷ ಮಲ್ಲೇಶ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.