ADVERTISEMENT

ಹೊಳೆನರಸೀಪುರ | ಪುರಸಭೆ ಮಳಿಗೆ ಹರಾಜು ಕೂಗುವವರಿಲ್ಲ: 90ಕ್ಕೂ ಹೆಚ್ಚು ಮಳಿಗೆ ಖಾಲಿ

ಪುರಸಭೆ ಸಾಮಾನ್ಯ ಸಭೆಯಲ್ಲಿ ಚರ್ಚೆ

​ಪ್ರಜಾವಾಣಿ ವಾರ್ತೆ
Published 5 ಆಗಸ್ಟ್ 2025, 1:49 IST
Last Updated 5 ಆಗಸ್ಟ್ 2025, 1:49 IST
ಹೊಳೆನರಸೀಪುರ ಪುರಸಭೆಯಲ್ಲಿ ಸೋಮವಾರ ಎಚ್.ಕೆ. ಪ್ರಸನ್ನ ಅವರ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಜೆಡಿಎಸ್ ಪಕ್ಷದ ಸದಸ್ಯೆ ಜಿ.ಕೆ ಸುಧಾನಳಿನಿ ಹಾಗೂ ಕಾಂಗ್ರೆಸ್ ನಾಮನಿರ್ದೇಶನ ಸದಸ್ಯ ಉಮೇಶ್ ನಡುವೆ ವಾಗ್ವಾದ ನಡೆಯಿತು
ಹೊಳೆನರಸೀಪುರ ಪುರಸಭೆಯಲ್ಲಿ ಸೋಮವಾರ ಎಚ್.ಕೆ. ಪ್ರಸನ್ನ ಅವರ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಜೆಡಿಎಸ್ ಪಕ್ಷದ ಸದಸ್ಯೆ ಜಿ.ಕೆ ಸುಧಾನಳಿನಿ ಹಾಗೂ ಕಾಂಗ್ರೆಸ್ ನಾಮನಿರ್ದೇಶನ ಸದಸ್ಯ ಉಮೇಶ್ ನಡುವೆ ವಾಗ್ವಾದ ನಡೆಯಿತು   

ಹೊಳೆನರಸೀಪುರ: ಪುರಸಭೆ ಅಧ್ಯಕ್ಷ ಎಚ್.ಕೆ. ಪ್ರಸನ್ನ ಅವರ ಅಧ್ಯಕ್ಷತೆಯಲ್ಲಿ ಸೋಮವಾರ ನಡೆದ ಸಾಮಾನ್ಯ ಸಭೆಯಲ್ಲಿ ಮಳಿಗೆ ಹರಾಜಿನ ವಿಷಯದ ಬಗ್ಗೆ ಚರ್ಚೆ ನಡೆಯಿತು. 

ಪುರಸಭೆಯ ಅನೇಕ ಮಳಿಗೆಗಳನ್ನು ಹರಾಜಿಗೆ ಇಟ್ಟಿದ್ದರೂ ಹರಾಜು ಕೂಗಲು ಯಾರೂ ಮುಂದೆ ಬರುತ್ತಿಲ್ಲ. ಇತ್ತೀಚೆಗೆ 17 ಮಳಿಗೆಗಳನ್ನು ಹಾರಾಜಿಗೆ ಇಟ್ಟಿದ್ದೆವು. ಅದರಲ್ಲಿ 6 ಮಳಿಗೆಗಳನ್ನು ಮಾತ್ರ ತೆಗೆದುಕೊಂಡಿದ್ದಾರೆ ಎಂದು ಸದಸ್ಯ ಶ್ರೀಧರ್‌ ಗಮನ ಸೆಳೆದರು.

ಪುರಸಭೆಯ 90ಕ್ಕೂ ಹೆಚ್ಚು ಮಳಿಗೆಗಳು ಕೆಲ ವರ್ಷಗಳಿಂದ ಖಾಲಿ ಇದೆ ಎಂದು ಸಂಬಂಧಪಟ್ಟ ಸಿಬ್ಬಂದಿ ವಿವರಿಸಿದಾಗ, ಕಾಂಗ್ರೆಸ್ ಸದಸ್ಯ ಉದಯಕುಮಾರ್, ಹೊಳೆನರಸೀಪುರಕ್ಕೆ ಮಳಿಗೆಪುರ ಎಂದು ಮರುನಾಮಕಾರಣ ಮಾಡಿ ಎಂದು ವ್ಯಂಗ್ಯವಾಡಿದರು.

ADVERTISEMENT

ಪಟ್ಟಣದ ಅಂಗಡಿ, ಹೋಟೆಲ್‍ಗಳ ಟ್ರೇಡ್ ಲೈಸೆನ್ಸ್‌ಗಳ ಶುಲ್ಕ ಹೆಚ್ಚಳ ವಿಷಯ ಬಂದಾಗ ಆನ್‍ಲೈನ್ ವ್ಯವಹಾರಗಳಿಂದ ಪಟ್ಟಣದ ವರ್ತಕರಿಗೆ ವ್ಯಾಪಾರ ಕಡಿಮೆ ಆಗಿದೆ. ಟ್ರೇಡ್ ಲೈಸೆನ್ಸ್ ಶುಲ್ಕ ಹೆಚ್ಚು ಮಾಡಬಾರದು ಎಂದು ಸದಸ್ಯ ಶ್ರೀಧರ್ ಸಲಹೆ ನೀಡಿದರು.

ಪಟ್ಟಣದ 2 ಕಡೆ ₹24 ಲಕ್ಷ ವೆಚ್ಚದಲ್ಲಿ ಡಿಜಿಟಲ್ ಬೋರ್ಡ್‍ಗಳನ್ನು ಅಳವಡಿಸಿದ್ದೀರಿ ಅವುಗಳು ಕೆಟ್ಟು ವರ್ಷಗಳೇ ಆದರೂ ರಿಪೇರಿ ಮಾಡಿಸಿಲ್ಲ ಎಂದು ಕಾಂಗ್ರೆಸ್ ಸದಸ್ಯ ಉದಯಕುಮಾರ್ ಆಕ್ಷೇಪಿಸಿದರು. ಮುಖ್ಯಾಧಿಕಾರಿ ಶಿವಶಂಕರ್ ಮಾತನಾಡಿ,  ರಿಪೇರಿ ಮಾಡಿಸುತ್ತೇವೆ ಎಂದರು.

ಸದಸ್ಯ ಬೈರಶೆಟ್ಟಿ ಮಾತನಾಡಿ, ಕಾಳಿಕಾಂಬ ದೇವಾಲಯ ರಸ್ತೆ ಸಂಪೂರ್ಣ ಹಾಳಾಗಿದ್ದು ತಕ್ಷಣ ಡಾಂಬರೀಕರಣಕ್ಕೆ ಕ್ರಮ ತೆಗೆದುಕೊಳ್ಳಿ ಎಂದು ಆಗ್ರಹಿಸಿದರು.

ಪುರಸಭೆಯಲ್ಲಿ ಕೆಟ್ಟುನಿಂತ ವಾಹನಗಳ ರಿಪೇರಿ, ಜಮೀನಿನ ಪರಿವರ್ತನೆ, ಸುಪ್ರೀಂ ಕೋರ್ಟ್‍ನಲ್ಲಿ ಪುರಸಭೆ ಪರವಾಗಿ ಕೇಸ್ ನಡೆಸುತ್ತಿರುವ ವಕೀಲರಿಗೆ ಶುಲ್ಕ ಪಾವತಿಸಲು ಸಭೆ ಅನುಮತಿ ನೀಡಿತು. 

ಪಟ್ಟಣದ ಅಂಬೇಡ್ಕರ್ ಬಡಾವಣೆಯ 500ಕ್ಕೂ ಹೆಚ್ಚು ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಸೇರಿದ ಬಡಕುಟುಂಬಗಳಿಗೆ ನಿವೇಶನ ನೀಡಲು ಸರ್ವೆ ನಂ 175/1 ರಿಂದ 184/8 ರವರೆಗಿನ ಜಮೀನುಗಳ ಭೂಸ್ವಾದೀನ ಪ್ರಕ್ರಿಯೆ ಕೈಗೊಳ್ಳಲು ಪ್ರಸ್ತಾವ ಸಲ್ಲಿಸಲು ನಿರ್ಧರಿಸಿದರು. ಒಟ್ಟು 32 ವಿಷಯಗಳು ಸಭೆಯಲ್ಲಿ ಯಾವುದೇ ಚರ್ಚೆ ಇಲ್ಲದೆ ಅನುಮೋದನೆ ಪಡೆದು ಒಂದೂವರೆ ಗಂಟೆಯಲ್ಲಿ ಸಭೆ ಮುಕ್ತಾಯವಾಯಿತು. ಪುರಸಭೆಗೆ ಹೊಸದಾಗಿ ಬಂದ ನಾಮ ನಿರ್ದೇಶನ ಸದಸ್ಯರಾದ ಉಮೇಶ್, ಉದಯಕುಮಾರ್, ಚಂದ್ರು, ಮುಭಾರಕ್, ಎಸ್.ಎನ್. ಸುನಿತಾ ಅವರನ್ನು ಹಾಗೂ ವ್ಯವಸ್ಥಾಪಕಿ ಜಯಲಕ್ಷ್ಮೀ, ಎಸ್‌ಡಿಎ ರಾಮಸ್ವಾಮಿ, ಮಂಜುಳಾ ಅವರನ್ನು ಸ್ವಾಗತಿಸಿದರು.

ಕಾಂಗ್ರೆಸ್– ಜೆಡಿಎಸ್ ಸದಸ್ಯರ ವಾಗ್ವಾದ:

ಸಭೆಯಲ್ಲಿ ಜೆಡಿಎಸ್ ಸದಸ್ಯೆ ಜಿ.ಕೆ. ಸುಧಾ ನಳಿನಿ ಕಾಂಗ್ರೆಸ್ ಪಕ್ಷದ ನೂತನ ನಾಮನಿರ್ದೇಶನ ಸದಸ್ಯ ಉಮೇಶ್ ನಡುವೆ ತೀವ್ರ ವಾಗ್ವಾದ ನಡೆಯಿತು. ವಿಷಯವೊಂದರ ಬಗ್ಗೆ ಕಾಂಗ್ರೆಸ್ ಸದಸ್ಯ ಉಮೇಶ್ ವಿವರ ಕೇಳಿದಾಗ ಸುಧಾ ನಳಿನಿ ಉತ್ತರ ಹೇಳಿ ‘ನೀವು ಕುಳಿತುಕೊಳ್ಳಿ’ ಎಂದಿದ್ದಕ್ಕೆ ತೀವ್ರ ಅಸಮಾಧಾನಗೊಂಡ ಉಮೇಶ್ ‘ನನ್ನ ಪ್ರಶ್ನೆಗೆ ಅಧ್ಯಕ್ಷರು ಉತ್ತರ ಕೊಡುತ್ತಾರೆ. ನನ್ನನ್ನು ಕುಳಿತುಕೊಳ್ಳಿ ಎನ್ನಲು ನೀವ್ಯಾರು’ ಎಂದು ಏರುದನಿಯಲ್ಲಿ ಪ್ರಶ್ನಿಸಿದಾಗ ಕೆಲಕಾಲ ವಾಗ್ವಾದ ನಡೆಯಿತು. ಸುಧಾನಳಿನಿ ‘ನಾನು ನಿನ್ನ ಹಾಗೆ ಹಿಂಬಾಗಿಲಿನಿಂದ ಬಂದು ಸದಸ್ಯೆ ಆಗಿಲ್ಲ’ ಎಂದಿದಕ್ಕೆ ಉತ್ತರಿಸಿದ ಉಮೇಶ್ ‘ನಾನೂ ಕೂಡ ನಿಮ್ಮ ಗೆಲುವಿಗೆ ಶ್ರಮಿಸಿದ್ದೇನೆ. ನಾನು ನಿಮ್ಮ ಪರವಾಗಿ ಓಡಾಡಿದ್ದರಿಂದ ನೀವು ಸದಸ್ಯರಾಗಿದ್ದು’ ಎಂದರು. ಜೆಡಿಎಸ್ ಸದಸ್ಯರಾದ ಶ್ರೀಧರ್ ಮಧು ಇಬ್ಬರನ್ನೂ ಸಮಾಧಾನ ಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.