ADVERTISEMENT

ಯುವಕನ ಕೊಲೆ: ಐವರ ಬಂಧನ

​ಪ್ರಜಾವಾಣಿ ವಾರ್ತೆ
Published 10 ಡಿಸೆಂಬರ್ 2020, 5:08 IST
Last Updated 10 ಡಿಸೆಂಬರ್ 2020, 5:08 IST
ಬಂಧಿತ ಐವರು ಆರೋಪಿಗಳು
ಬಂಧಿತ ಐವರು ಆರೋಪಿಗಳು   

ಹಾಸನ: ನಗರದ ಅರಳಿಕಟ್ಟೆ ವೃತ್ತದಲ್ಲಿ ಶನಿವಾರ ರಾತ್ರಿ ರಂಗೋಲಿಹಳ್ಳದ ರಘು ಗೌಡ (26) ಎಂಬ ಯುವಕನನ್ನು ಅಟ್ಟಾಡಿಸಿ ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿದ್ದ ಐವರು ಆರೋಪಿಗಳನ್ನು ಹಾಸನ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಫೈನಾನ್ಸ್‌ನಲ್ಲಿ ಕಲೆಕ್ಷನ್‌ ಕೆಲಸ ಮಾಡುತ್ತಿದ್ದ ರಂಗೋಲಿಹಳ್ಳ ನಿವಾಸಿ ಭವಿತ್ (19), ಶಾಂತಿನಗರದ ತರಕಾರಿ ವ್ಯಾಪಾರಿ ತೇಜಸ್ (19), ಜಯನಗರ ನಿವಾಸಿ ಎಪಿಎಂಸಿ ತರಕಾರಿ ವ್ಯಾಪಾರಿ ಪುನೀತ್ (21), ಚನ್ನಪಟ್ಟಣ ಹೌಸಿಂಗ್ ಬೋರ್ಡ್‍ನ ನವೀನ್‍ಕುಮಾರ್ (21) ಹಾಗೂ ಶಾಂತಿನಗರದ ವಿವೇಕ್ (24) ಬಂಧಿತರು.

ಕೊಲೆಯಾದ ರಘು ಗೌಡ,ಐಟಿಐ ವಿದ್ಯಾರ್ಥಿ ನವೀನ್‍ಕುಮಾರ್‌ನ ಆಪ್ತ ಸ್ನೇಹಿತನಾಗಿದ್ದ. ಆರೋಪಿಗಳು ಇತ್ತೀಚೆಗೆ ಕಾಲೇಜು ವ್ಯಾಸಂಗ ಮುಗಿಸಿ ಕೂಲಿ ಕೆಲಸ ಮಾಡಿಕೊಂಡಿದ್ದರು. ಹಣಕಾಸಿನ ವಿಚಾರಕ್ಕೆ ಜಗಳ ಉಂಟಾಗಿ ರಘು ಗೌಡನನ್ನು ಕೊಲೆ ಮಾಡಲಾಗಿತ್ತು ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಆರ್.ಶ್ರೀನಿವಾಸ್ ಗೌಡ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ADVERTISEMENT

ರಘು ಗೌಡ ಸ್ನೇಹಿತ ತೇಜಸ್‍ನಿಂದ ಒಂದು ವರ್ಷದ ಹಿಂದೆ ₹ 1.5 ಲಕ್ಷ ಸಾಲ ಪಡೆದಿದ್ದ. ಹಣ ನೀಡಿ ತುಂಬಾ ದಿನಗಳಾಗಿದ್ದು ಅಕ್ಕನ ಮದುವೆಗೆ ದುಡ್ಡು ವಾಪಸ್ ಕೊಡು ಎಂದು ತೇಜಸ್ ಕೇಳಿದ್ದ. ಆಗ ರಘು ₹ 50 ಸಾವಿರ ಮರಳಿಸಿ ಒಂದು ಲಕ್ಷ ಉಳಿಸಿಕೊಂಡಿದ್ದ. ಈ ಸಂಬಂಧ ಇಬ್ಬರ ನಡುವೆ ವಾಗ್ವಾದ ನಡೆದಿತ್ತು. ಸ್ನೇಹಿತರೆಲ್ಲರೂ ಒಂದು ದಿನ ಒಟ್ಟಿಗೆ ಸೇರಿದಾಗ ರಘು ಗೌಡನನ್ನು ಎಲ್ಲರೂ ಏಕವಚನದಲ್ಲಿ ಬೈಯ್ದಿದ್ದರು. ಇದರಿಂದ ಸಿಟ್ಟಿಗೆದ್ದ ರಘು ಭವಿತ್‍ನ ಕೆನ್ನೆಗೆ ಹೊಡೆದಿದ್ದನು. ಈ ಘಟನೆ ಅವರ ನಡುವೆ ಸಿಟ್ಟು ಹೆಚ್ಚಾಗಲು ಕಾರಣವಾಗಿತ್ತು ಎಂದು ಹೇಳಿದರು.

ಸಾಲದ ವಿಚಾರವಾಗಿ ರಘು ಮತ್ತು ಬಂಧಿತರ ನಡುವೆ ಉಂಟಾದ ವೈಷಮ್ಯ ಹೆಚ್ಚುತ್ತಲೇ ಇತ್ತು. ತೇಜಸ್ ಅವರ ಅಕ್ಕನ ಮದುವೆಯ ಬೀಗರ ಊಟಕ್ಕೆ ಡಿ. 3ರಂದು ರಘು ಹೋಗಿದ್ದ. ಮದುವೆ ಕಾರ್ಯ ಮುಗಿದರೂ ಒಂದು ಲಕ್ಷ ಹಣ ನೀಡಿಲ್ಲ. ಅಲ್ಲದೆ ನಮ್ಮ ಕೆನ್ನೆಗೆ ಹೊಡೆದಿದ್ದಾನೆ ಎಂದು ಆಕ್ರೋಶಗೊಂಡ ಅವರು ಪ್ರತಿಕಾರ ತೀರಿಸಿಕೊಳ್ಳಲು ನಿರ್ಧಾರ ಮಾಡಿದ್ದರು ಎಂದರು.

ಡಿ. 5ರಂದು ರಾತ್ರಿ 8.30ರ ಸಮಯದಲ್ಲಿ ರಘುಗೌಡ ಅರಳಿಕಟ್ಟೆ ವೃತ್ತದಲ್ಲಿರುವ ಟೀ ಅಂಗಡಿಗೆ ಬಂದಿರುವುದನ್ನು ಖಚಿತಪಡಿಸಿಕೊಂಡು ನುಗ್ಗಿದ್ದಾರೆ. ಕಣ್ಣಿಗೆ ಖಾರದ ಪುಡಿ ಎರಚಿ ಮಚ್ಚಿನಿಂದ ಮನಬಂದಂತೆ ಹಲ್ಲೆ ನಡೆಸಿ ನಾಪತ್ತೆಯಾಗಿದ್ದರು. ತಕ್ಷಣವೇ ಸಾರ್ವಜನಿಕರು ಗಾಯಗೊಂಡ ರಘುನನ್ನು ಜಿಲ್ಲಾಸ್ಪತ್ರೆಗೆ ಕರೆತಂದರು. ಆದರೆ ತೀವ್ರ ರಕ್ತಸ್ರಾವವಾದ್ದರಿಂದ ರಘುಗೌಡ ಮೃತಪಟ್ಟಿದ್ದನು.

ರಘು ಗೌಡ ಕೊಲೆ ಪ್ರಕರಣದಲ್ಲಿ ತೊಡಗಿರುವ ಐವರು ಆ ದಿನ ಮದ್ಯ ಸೇವನೆ ಮಾಡಿರಲಿಲ್ಲ. ಪುನೀತ್, ತೇಜಸ್ ಹಾಗೂ ವಿವೇಕ್ ವಿರುದ್ಧ ರೈಲ್ವೆ ಪೊಲೀಸ್‌ ಠಾಣೆಯಲ್ಲಿ ತಂತಿ ಕಳವು ಪ್ರಕರಣ ದಾಖಲಾಗಿದೆ. ಹಣಕಾಸಿನ ವ್ಯವಹಾರ ಕೊಲೆಗೆ ಕಾರಣವಾಗಿದೆ ಎಂದು ತಿಳಿಸಿದರು.

ಕೊಲೆ ಪ್ರಕರಣ ಭೇದಿಸುವಲ್ಲಿ ಶ್ರಮಿಸಿದ ಡಿವೈಎಸ್ಪಿ ಪುಟ್ಟಸ್ವಾಮಿಗೌಡ, ನಗರ ಸಿಪಿಐ ಜಿ.ಕೃಷ್ಣರಾಜು, ನಗರ ಠಾಣೆ ಪಿಎಸ್‍ಐ ಅಭಿಜಿತ್, ಸಿಬ್ಬಂದಿ ಹರೀಶ್, ಪ್ರವೀಣ್, ಲತೇಶ್, ರವಿಕುಮಾರ, ವೇಣುಗೋಪಾಲ್, ದಿಲೀಪ್, ಜಮೀಲ್ ಅಹಮದ್‌ ಅವರನ್ನು ಪ್ರಶಂಸಿಸಿದ ಎಸ್ಪಿ ವಿಶೇಷ ಬಹುಮಾನ ಘೋಷಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.