ADVERTISEMENT

ಇಬ್ಬರ ಹತ್ಯೆ: ನ್ಯಾಯಾಂಗ ತನಿಖೆಗೆ ಒತ್ತಾಯ

ದೋಲ್‌ಪುರದ ಗುಡಿಸಲು ನಿವಾಸಿಗಳ ಮೇಲೆ ಗೋಲಿಬಾರ್‌

​ಪ್ರಜಾವಾಣಿ ವಾರ್ತೆ
Published 30 ಸೆಪ್ಟೆಂಬರ್ 2021, 16:10 IST
Last Updated 30 ಸೆಪ್ಟೆಂಬರ್ 2021, 16:10 IST
ಹಾಸನ ಜಿಲ್ಲಾಧಿಕಾರಿ ಕಚೇರಿ ಎದುರು ಡಿವೈಎಫ್‌ಐ ಮತ್ತು ಸಾಲಿಡಾರಿಟಿ ಯೂತ್‌ ಮೂವ್‌ಮೆಂಟ್‌ ವತಿಯಿಂದ ಗುರುವಾರ ಪ್ರತಿಭಟನೆ ನಡೆಸಲಾಯಿತು
ಹಾಸನ ಜಿಲ್ಲಾಧಿಕಾರಿ ಕಚೇರಿ ಎದುರು ಡಿವೈಎಫ್‌ಐ ಮತ್ತು ಸಾಲಿಡಾರಿಟಿ ಯೂತ್‌ ಮೂವ್‌ಮೆಂಟ್‌ ವತಿಯಿಂದ ಗುರುವಾರ ಪ್ರತಿಭಟನೆ ನಡೆಸಲಾಯಿತು   

ಹಾಸನ: ಅಸ್ಸಾಂನ ದೋಲ್‌ಪುರದ ಗುಡಿಸಲು ನಿವಾಸಿಗಳ ಮೇಲೆ ಪೊಲೀಸರು ಗೋಲಿಬಾರ್ ನಡೆಸಿ ಇಬ್ಬರು ಹತ್ಯೆ ಮಾಡಿದ ಘಟನೆಯನ್ನು ಖಂಡಿಸಿ ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಷನ್(ಡಿವೈಎಫ್ಐ) ಮತ್ತು ಸಾಲಿಡಾರಿಟಿ ಯೂತ್‌ ಮೂವ್‌ಮೆಂಟ್‌ ವತಿಯಿಂದ ಗುರುವಾರ ಪ್ರತಿಭಟನೆನಡೆಸಲಾಯಿತು.

ನಗರದ ಹೇಮಾವತಿ ಪ್ರತಿಮೆಯಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಮೆರವಣಿಗೆ ನಡೆಸಿ, ಅಸ್ಸಾಂಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಗ್ರಾಮಸ್ಥರ ಹತ್ಯೆ ಘಟನೆಯನ್ನು ನ್ಯಾಯಾಂಗ ತನಿಖೆಗೆ ವಹಿಸಬೇಕು ಎಂದು ಆಗ್ರಹಿಸಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.

‘ಭೂಮಿ ಹಕ್ಕಿಗಾಗಿ ಶಾಂತಿಯುತ ಹೋರಾಟ ನಡೆಸುತ್ತಿದ್ದ ಗುಡಿಸಲು ನಿವಾಸಿಗಳ ಮೇಲೆ ಪೊಲೀಸರು ಗೋಲಿಬಾರ್ ನಡೆಸಿ, ಇಬ್ಬರನ್ನು ಹತ್ಯೆ ಮಾಡಿದ್ದಾರೆ. ಈ ಘಟನೆ ಅತ್ಯಂತ ಖಂಡನೀಯ ಮತ್ತುಸಂವಿಧಾನ ವಿರೋಧಿಯಾಗಿದೆ. ಹಿತ ಕಾಯಬೇಕಾದ ಸರ್ಕಾರವೇ ಬಂದೂಕು ಹಿಡಿದು ಜನರಬೇಟೆಗೆ ಹೊರಟಿದೆ. ಹಿಮಂತ್ ಬಿಸ್ವಾಸ್ ಶರ್ಮ ಸರ್ಕಾರ ದಶಕಗಳಿಂದ ವಾಸ ಮಾಡುತ್ತಿರುವರೈತರನ್ನು ಬಾಂಗ್ಲಾದೇಶದಿಂದ ಬಂದಿರುವ ಅಕ್ರಮ ಮುಸ್ಲಿಂ ವಲಸೆಕೋರರು ಎಂದುಆರೋಪಿಸಿ ಪೊಲೀಸರನ್ನು ಬಳಸಿ ಎತ್ತಂಗಡಿ ಮಾಡುತ್ತಿದೆ’ ಎಂದು ಆರೋಪಿಸಿದರು.

ADVERTISEMENT

‘ಕಳೆದ ಕೆಲ ದಿನಗಳ ಹಿಂದೆ ಅಸ್ಸಾಂ ಸರ್ಕಾರ ಸುಮಾರು 900ಕ್ಕೂ ಅಧಿಕ ಕುಟುಂಬಗಳನ್ನುತೆರವುಗೊಳಿಸಿದ್ದು, ಕನಿಷ್ಠ 20 ಸಾವಿರ ಜನರ ಬದುಕು ಬೀದಿಗೆ ಬಿದ್ದಿದೆ. ಈ ತೆರವುಕಾರ್ಯಾಚರಣೆಯನ್ನು ಕೂಡಲೇ ನಿಲ್ಲಿಸಬೇಕು’ ಎಂದರು. ‌

‘ಗೋಲಿಬಾರ್‌ನಲ್ಲಿ ಮೃತಪಟ್ಟವರ ಕುಟುಂಬಗಳಿಗೆ ಕೂಡಲೇ ಪರಿಹಾರ ಕೊಡಬೇಕು. ಘಟನೆಯನ್ನು ಸುಪ್ರೀಂ ಕೋರ್ಟ್ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಡಿವೈಎಫ್ಐ ಜಿಲ್ಲಾ ಕಾರ್ಯದರ್ಶಿ ಪೃಥ್ವಿ ಎಂ.ಜಿ., ಶಶಿ, ಸುನಿಲ್, ಸಾಲಿಡಾರಿಟಿ ಯೂತ್ ಮೂವ್‌ಮೆಂಟ್‌ಅಧ್ಯಕ್ಷ ಫರೀದ್ ಖಾನ್, ಎಜಾಜ್ ಸ್ಯಾಮ್, ಕರ್ನಾಟಕ ಪ್ರಾಂತ‌ ರೈತಸಂಘದ ಜಿಲ್ಲಾಧ್ಯಕ್ಷ ಎಚ್.ಆರ್. ನವೀನ್ ಕುಮಾರ್, ಆಜಾದ್‌ ಟಿಪ್ಪು ಸಂಘರ್ಷ ಸಮಿತಿ ಜಿಲ್ಲಾಧ್ಯಕ್ಷಮುಬಷೀರ್ ಅಹಮದ್, ಸಿಐಟಿಯು ಅರವಿಂದ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.