ಹಾಸನ: ಇಲ್ಲಿನ ಹಾಸನ ನಗರಾಭಿವೃದ್ಧಿ ಪ್ರಾಧಿಕಾರ (ಹುಡಾ) ಅಧ್ಯಕ್ಷ ಸ್ಥಾನವನ್ನು ಮುಸ್ಲಿಂ ಸಮುದಾಯದ ಸೈಯದ್ ತಾಜೀಂ ಅವರಿಗೆ ನೀಡುವಂತೆ ಆಗ್ರಹಿಸಿ ಮುಸ್ಲಿಂ ಸಂಘಟನೆಗಳ ಮುಖಂಡರು ಹಾಗೂ ಸದಸ್ಯರು ಬುಧವಾರ ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ನಗರದ ಹೇಮಾವತಿ ಪ್ರತಿಮೆ ಬಳಿಯಿಂದ ಸೈಯ್ಯದ್ ಪರ ಘೋಷಣೆ ಕೂಗುತ್ತ ಮೆರವಣಿಗೆ ನಡೆಸಿದ ಅವರು, ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ನಡೆಸಿದರು.
ಸಂಘಟನೆಯ ಮುಖಂಡ ಶಬೀರ್ ಅಹಮ್ಮದ್ ಮಾತನಾಡಿ, ‘3–4 ದಶಕಗಳಿಂದ ಹಾಸನದ ನಗರ ಅಭಿವೃದ್ಧಿ ಪ್ರಾಧಿಕಾರಕ್ಕೆ ಮುಸ್ಲಿಮರರನ್ನು ನೇಮಿಸಿಲ್ಲ. ಈ ಬಾರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಮುಸ್ಲಿಮರಿಗೆ ಅಧ್ಯಕ್ಷ ಸ್ಥಾನ ನೀಡಬೇಕು’ ಎಂದು ಆಗ್ರಹಿಸಿದರು.
ಇದುವರೆಗೆ ಯಾವುದೇ ನಿಗಮ– ಮಂಡಳಿಗಳಿಗೆ ಮುಸ್ಲಿಂ ಸಮುದಾಯದವರನ್ನು ಅಧ್ಯಕ್ಷರನ್ನಾಗಿ ಮಾಡಿಲ್ಲ. ಇದೀಗ ಹಾಸನ ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಅಧ್ಯಕ್ಷರನ್ನು ನೇಮಕ ಮಾಡುವಂತೆ ಆರು ತಿಂಗಳ ಹಿಂದೆಯೇ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ, ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್. ರಾಜಣ್ಣ, ಸಚಿವ ಜಮೀರ್ ಅಹಮ್ಮದ್ ಖಾನ್ , ಹಲವು ಮುಖಂಡರಿಗೆ ಮನವಿ ನೀಡಲಾಗಿದೆ. ಜಿಲ್ಲೆಯ ಸುಮಾರು 57 ಧಾರ್ಮಿಕ ಸಂಘಟನೆಗಳ ಮುಖಂಡರು ಮನವಿ ಮಾಡಿದ್ದು, ಈ ಬಾರಿ ಅಧ್ಯಕ್ಷ ಸ್ಥಾನವನ್ನು ಮುಸ್ಲಿಂ ಸಮುದಾಯಕ್ಕೆ ನೀಡಬೇಕು ಎಂದು ಒತ್ತಾಯಿಸಲಾಗಿದೆ ಎಂದರು.
ಕಾಂಗ್ರೆಸ್ ಪಕ್ಷದಲ್ಲಿ ಹಲವು ವರ್ಷಗಳಿಂದ ಸಕ್ರಿಯ ಕಾರ್ಯಕರ್ತರಾಗಿ ಕೆಲಸ ಮಾಡಿರುವ ಸೈಯ್ಯದ್ ತಾಜೀಂ ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿದ್ದು, ಉತ್ತಮ ನಾಯಕತ್ವ ಗುಣ ಹೊಂದಿದ್ದಾರೆ. ಸಮುದಾಯದ ಅಭಿವೃದ್ಧಿ ಹಾಗೂ ಪ್ರಾಧಿಕಾರದ ಪ್ರಗತಿಗೆ ಉತ್ತಮ ಕೆಲಸ ಮಾಡಲಿದ್ದಾರೆ ಎಂದರು.
ಸೈಯದ್ ಇಲಿಯಾಸ್ ಮಾತನಾಡಿ, ‘ ಸಮುದಾಯವು ರಾಜಕೀಯ ಮತ್ತು ಆಡಳಿತ ಕ್ಷೇತ್ರದಲ್ಲಿ ಗಣನೀಯವಾಗಿ ಹಿಂದುಳಿದಿದೆ. ಆರ್ಥಿಕ, ಶೈಕ್ಷಣಿಕ ಏಳಿಗೆ ಸಾಧಿಸಲು ರಾಜಕೀಯ ಅಧಿಕಾರ ಅಗತ್ಯವಾಗಿದೆ. ನಿಗಮ ಮಂಡಳಿಯಲ್ಲಿ ನಮಗೆ ಸ್ಥಾನ ನೀಡಬೇಕು’ ಎಂದು ಒತ್ತಾಯಿಸಿದರು.
ಅಧಿಕಾರವಿಲ್ಲದ ಸಮುದಾಯಕ್ಕೆ ಧ್ವನಿಯನ್ನು ಪರಿಣಾಮಕಾರಿಯಾಗಿ ತೋರ್ಪಡಿಸಲು ಸಾಧ್ಯವಾಗುವುದಿಲ್ಲ. ನಾಯಕತ್ವದ ಕೊರತೆಯಿಂದ ಹಲವು ಸವಾಲು ಎದುರಿಸಬೇಕಾಗುತ್ತದೆ. ಅಧಿಕಾರ ವಿಕೇಂದ್ರೀಕರಣ, ಮೀಸಲಾತಿ ವ್ಯವಸ್ಥೆಯನ್ನು ಸಮರ್ಪಕವಾಗಿ ಜಾರಿಗೆ ತರುವ ನಿಟ್ಟಿನಲ್ಲಿ ನಿಗಮ ಮಂಡಳಿಯಲ್ಲಿ ಸ್ಥಾನ ದೊರಕಿಸುವ ಮೂಲಕ ಸಮುದಾಯದ ಅಭಿವೃದ್ಧಿಗೆ ಸಹಕರಿಸಬೇಕು ಎಂದು ಮನವಿ ಮಾಡಿದರು.
ಫೈರೋಜ್, ಸೈಯ್ಯದ್ ಪಾಷಾ, ಅನ್ಶದ್ ಪಾಳ್ಯ, ಸೈಯ್ಯದ್ ಅಹ್ಮದ್, ಪಾಷಾ, ರಂಗಯ್ಯ, ಮಲ್ಲೇಶ್, ಶಬೀರ್ ಅಹ್ಮದ್, ರಘು, ಚಾಂದ್ ಪಾಷಾ ಸೇರಿದಂತೆ ನೂರಾರು ಮಹಿಳಾ ಕಾರ್ಯಕರ್ತೆಯರು ಭಾಗವಹಿಸಿದ್ದರು.
ಸಾಮಾಜಿಕ ನ್ಯಾಯದಡಿ ಮುಸ್ಲಿಂ ಸಮುದಾಯಕ್ಕೆ ಈ ಬಾರಿ ಅಧ್ಯಕ್ಷ ಸ್ಥಾನ ನೀಡಬೇಕು ಎಂದು ಆಗ್ರಹಿಸಿ ಜಿಲ್ಲೆಯ 1.30 ಲಕ್ಷ ಸಮುದಾಯದ ಮತದಾರರು ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದ್ದೇವೆ.ಅಕ್ಮಲ್ ಜಾವೀದ್ ಮುಸ್ಲಿಂ ಸಂಘಟನೆ ಮುಖಂಡ
‘ಹುಡಾ ಅಧ್ಯಕ್ಷ ಸ್ಥಾನವನ್ನು ಮುಸ್ಲಿಂ ಮುಖಂಡರಿಗೆ ಕೊಡಬೇಕು ಎಂದು ಹೋರಾಟ ನಡೆಸಲಾಗಿದೆ. ಆದರೆ ಪಕ್ಷಕ್ಕಾಗಿ ಕೆಲಸ ಮಾಡಿದವರು ವಿಧಾನಸಭೆ ಲೋಕಸಭೆ ಚುನಾವಣೆಯಲ್ಲಿ ಕಷ್ಟಪಟ್ಟು ಕೆಲಸ ಮಾಡಿದ ಬಹಳ ಜನ ಮುಖಂಡರು ನಾಯಕರಿದ್ದಾರೆ’ ಎಂದು ಹಾಸನ ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಬ್ದುಲ್ ಖಯ್ಯುಂ ಒತ್ತಾಯಿಸಿದ್ದಾರೆ.
‘ಪ್ರತಿಭಟನೆ ನಡೆಸಿದ ಯಾರೂ ಒಂದು ದಿನವೂ ಕಾಂಗ್ರೆಸ್ ಪಕ್ಷದ ಬಾವುಟ ಹಿಡಿದಿಲ್ಲ. ಚುನಾವಣೆಗಳಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಪರ ಮತವನ್ನೂ ಕೇಳಿಲ್ಲ. ಕಾಂಗ್ರೆಸ್ ಕಚೇರಿಗೆ ಬಂದಿಲ್ಲ. ಹಾಗಿದ್ದರೆ ಪ್ರತಿಭಟನೆ ಮಾಡಿದ ಇವರು ಯಾರು ಎನ್ನುವ ಪ್ರಶ್ನೆ ನಿಷ್ಠಾವಂತ ಕಾಂಗ್ರೆಸ್ ಕಾರ್ಯಕರ್ತರದ್ದಾಗಿದೆ’ ಎಂದು ಪರೋಕ್ಷವಾಗಿ ಸೈಯ್ಯದ್ ತಾಜೀಂ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
‘ಪಕ್ಷದಲ್ಲಿ ಇವರ ಸ್ಥಾನ ಇವರ ಅಸ್ತಿತ್ವ ಪಕ್ಷಕ್ಕೆ ಇವರ ಕೊಡುಗೆ ಏನು? ಎಷ್ಟು ವರ್ಷದಿಂದ ಕಾಂಗ್ರೆಸ್‌ನಲ್ಲಿದ್ದಾರೆ ಎನ್ನುವುದು ಯಕ್ಷಪ್ರಶ್ನೆಯಾಗಿದೆ. ಪಕ್ಷದಲ್ಲಿ ದುಡಿದ ಹಿರಿಯರಿಗೆ ಅವಕಾಶ ಮಾಡಿಕೊಡಬೇಕು’ ಎಂದು ಮನವಿ ಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.