ADVERTISEMENT

ಸಂತೋಷ ಸಾಂಕ್ರಾಮಿಕ: ಬಾನು ಮುಷ್ತಾಕ್‌

ದಸರಾ ಉತ್ಸವ ಉದ್ಘಾಟಿಸಲು ಮೈಸೂರು ಜಿಲ್ಲಾಡಳಿತದಿಂದ ಅಧಿಕೃತ ಆಹ್ವಾನ

​ಪ್ರಜಾವಾಣಿ ವಾರ್ತೆ
Published 3 ಸೆಪ್ಟೆಂಬರ್ 2025, 23:30 IST
Last Updated 3 ಸೆಪ್ಟೆಂಬರ್ 2025, 23:30 IST
ಮೈಸೂರು ದಸರಾ ಉದ್ಘಾಟಿಸಬೇಕೆಂದು ಲೇಖಕಿ ಬಾನು ಮುಷ್ತಾಕ್‌ ಅವರಿಗೆ ಹಾಸನದಲ್ಲಿ ಬುಧವಾರ ಮೈಸೂರು ಜಿಲ್ಲಾಧಿಕಾರಿ ಲಕ್ಷ್ಮಿಕಾಂತ್‌ ರೆಡ್ಡಿ ಅಧಿಕೃತ ಆಹ್ವಾನ ನೀಡಿದರು
ಮೈಸೂರು ದಸರಾ ಉದ್ಘಾಟಿಸಬೇಕೆಂದು ಲೇಖಕಿ ಬಾನು ಮುಷ್ತಾಕ್‌ ಅವರಿಗೆ ಹಾಸನದಲ್ಲಿ ಬುಧವಾರ ಮೈಸೂರು ಜಿಲ್ಲಾಧಿಕಾರಿ ಲಕ್ಷ್ಮಿಕಾಂತ್‌ ರೆಡ್ಡಿ ಅಧಿಕೃತ ಆಹ್ವಾನ ನೀಡಿದರು   

ಹಾಸ‌ನ: ಲೇಖಕಿ ಬಾನು ಮುಷ್ತಾಕ್‌ ಅವರಿಗೆ ನಗರದ ಅವರ ನಿವಾಸದಲ್ಲಿ ಬುಧವಾರ ಶಾಲು ಹೊದಿಸಿ, ಮೈಸೂರು ಪೇಟ ತೊಡಿಸಿ ಸನ್ಮಾನಿಸಿದ ಮೈಸೂರು ಜಿಲ್ಲಾಡಳಿತ, ನಾಡಹಬ್ಬ ದಸರಾ ಉತ್ಸವವನ್ನು ಉದ್ಘಾಟಿಸಲು ಅಧಿಕೃತವಾಗಿ ಆಹ್ವಾನಿಸಿತು.

ದಸರಾ ವಿಶೇಷಾಧಿಕಾರಿಯೂ ಆದ ಮೈಸೂರು ಜಿಲ್ಲಾಧಿಕಾರಿ ಲಕ್ಷ್ಮಿಕಾಂತ್ ರೆಡ್ಡಿ ದಸರಾ ಉತ್ಸವದ ಆಹ್ವಾನ ಪತ್ರಿಕೆಯನ್ನು ನೀಡಿದರು.

ಈ ವೇಳೆ ಮಾತನಾಡಿದ ಲೇಖಕಿ, ‘ಇದೊಂದು ರೀತಿ ಸಾಂಕ್ರಾಮಿಕ ಸಂತೋಷ. ಎಲ್ಲೆಡೆ ಸಂಭ್ರಮವಿದೆ. ಆಹ್ವಾನವನ್ನು ನೀಡಿದ ನಾಡಿನ ಸಮಸ್ತ ಕನ್ನಡಿಗರಿಗೆ, ರಾಜ್ಯ ಸರ್ಕಾರ, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಮೈಸೂರು ಜಿಲ್ಲಾಡಳಿತಕ್ಕೆ ಧನ್ಯವಾದ ಸಲ್ಲಿಸುತ್ತೇನೆ’ ಎಂದರು.

ADVERTISEMENT

‘ಸೆ.22ಕ್ಕೂ ಮೊದಲು ಮೈಸೂರಿಗೆ ತೆರಳುವ ಕುರಿತು ಚಿಂತಿಸಿಲ್ಲ. ದಸರಾ ಉದ್ಘಾಟನೆಗೆ ಮುನ್ನ ವಿದೇಶ ಪ್ರವಾಸಕ್ಕೆ ತೆರಳಬೇಕು. ಬಳಿಕ ಮೈಸೂರು ಜಿಲ್ಲಾಡಳಿತದೊಂದಿಗೆ ಮಾತನಾಡಿ ತಿಳಿಸುವೆ’ ಎಂದರು.

ಲಕ್ಷ್ಮಿಕಾಂತ್‌ ರೆಡ್ಡಿ ಮಾತನಾಡಿ, ‘ಮುಖ್ಯಮಂತ್ರಿ ಅವರ ನಿರ್ದೇಶನದಂತೆ ಸ್ವಾಗತ ಸಮಿತಿ ಸದಸ್ಯರೊಂದಿಗೆ ಬಂದು ಆಹ್ವಾನಿಸಲಾಗಿದೆ. ದಸರಾ ಉದ್ಘಾಟಿಸಲು ಸಂತಸದಿಂದ ಒಪ್ಪಿದ್ದಾರೆ. ಮೈಸೂರಿಗೆ ಬರುವಾಗಲೂ ಜಿಲ್ಲಾಡಳಿತ ಗೌರವಪೂರ್ವಕವಾಗಿ ಸ್ವಾಗತಿಸಲಿದೆ’ ಎಂದರು.

ಹೆಚ್ಚುವರಿ ಜಿಲ್ಲಾಧಿಕಾರಿ ಶಿವರಾಜ್, ಚಾಮುಂಡೇಶ್ವರಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಎಂ.ಜೆ.ರೂಪಾ, ಮೈಸೂರು ಜಿಲ್ಲಾ ಪಂಚಾಯಿತಿ ಸಿಇಒ ಯುಕೇಶ್ ಕುಮಾರ್, ಪಾಲಿಕೆ ಆಯುಕ್ತ ತನ್ವಿರ್ ಆಸಿಫ್‌, ಬಾನು ಮುಷ್ತಾಕ್‌ ಅವರ ಪತಿ ಮೊಹಿಯುದ್ದೀನ್‌ ಮುಷ್ತಾಕ್‌ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.