ADVERTISEMENT

ನಾಲ್ವರು ಸುಲಿಗೆಕೋರರ ಬಂಧನ

ಮೋಜಿಗಾಗಿ ಕೃತ್ಯ, ಕಾರು, ಚಿನ್ನಾಭರಣ ವಶ

​ಪ್ರಜಾವಾಣಿ ವಾರ್ತೆ
Published 5 ಜನವರಿ 2019, 14:31 IST
Last Updated 5 ಜನವರಿ 2019, 14:31 IST
ಹಾಸನ, ಮಂಡ್ಯ ಪೊಲೀಸರು ಬಂಧಿಸಿರುವ ಆರೋಪಿಗಳು.
ಹಾಸನ, ಮಂಡ್ಯ ಪೊಲೀಸರು ಬಂಧಿಸಿರುವ ಆರೋಪಿಗಳು.   

ಹಾಸನ: ಸಾರ್ವಜನಿಕರಿಗೆ ಚಾಕು ತೋರಿಸಿ ಹಣ, ಚಿನ್ನಾಭರಣ ಸುಲಿಗೆ ಮಾಡುತ್ತಿದ್ದ ನಾಲ್ವರು ಸುಲಿಗೆಕೋರರನ್ನು ಬಂಧಿಸಲಾಗಿದೆ.

ಹೊಳೆನರಸೀಪುರದ ಅಶ್ವಥ, ಚನ್ನರಾಯಪಟ್ಟಣ ತಾಲ್ಲೂಕಿನ ಮೇಘನಾಥ್‌, ಸೋಮಶೇಖರ್, ಚಂದ್ರಶೇಖರ್‌ ಅವರನ್ನು ಬಂಧಿಸಿ, ಕೃತ್ಯಕ್ಕೆ ಬಳಸಿದ್ದ ಕಾರು, ಚಾಕು, ₹ 4620 ನಗದು, ಎರಡು ಚಿನ್ನದ ಉಂಗುರ, ಮೂರು ಮೊಬೈಲ್‌ ಫೋನ್‌ ಸೇರಿ ₹3,01,600 ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳನ್ನು ಬಂಧಿಸಿದ ಹಾಸನ–ಮಂಡ್ಯ ಪೊಲೀಸ್‌ ಸಿಬ್ಬಂದಿಗೆ ₹ 10 ಸಾವಿರ ನಗದು ಘೋಷಿಸಲಾಗಿದೆ.

ಜ.2ರ ರಾತ್ರಿ 10 ಗಂಟೆ ಸಮಯದಲ್ಲಿ ಈ ನಾಲ್ವರು ಕಂದಲಿ ಗ್ರಾಮದ ಯಗಚಿ ಪ್ರೌಢಶಾಲೆ ಮುಂಭಾಗ ಕಾರಿನಲ್ಲಿ ಕುಳಿತಿದ್ದ ಬಾಗೆ ಗ್ರಾಮದ ರಾಜು, ಸುರೇಶ್‌ ಎಂಬುವರಿಗೆ ಚಾಕು ತೋರಿಸಿ ಬೆದರಿಸಿ, ಎರಡು ಚಿನ್ನದ ಉಂಗುರ, ₹ 3 ಸಾವಿರ ನಗದು, ಎರಡು ಮೊಬೈಲ್‌ ಫೋನ್‌ ಕಿತ್ತುಕೊಂಡು ಪರಾರಿಯಾಗಿದ್ದರು ಎಂದು ಪೊಲೀಸ್‌ ವರಿಷ್ಠಾಧಿಕಾರಿ ಎ.ಎನ್‌.ಪ್ರಕಾಶ್‌ಗೌಡ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ADVERTISEMENT

ಅಲ್ಲದೇ ಅದೇ ದಿನ ರಾತ್ರಿ 11.30ರಲ್ಲಿ ನಾಲ್ವರು ಆರೋಪಿಗಳು ಹಾಸನ–ಮೈಸೂರು ರಸ್ತೆಯ ಸಿ.ಹಿಂದಲಹಳ್ಳಿ ಸಮೀಪ ಬೈಕ್‌ನಲ್ಲಿ ಹೋಗುತ್ತಿದ್ದ ಹಾಸನದ ಹರೀಶ್‌ ಎಂಬುವರಿಗೂ ಚಾಕು ತೋರಿಸಿ ₹ 1120 ನಗದು, ಮೊಬೈಲ್‌ ಫೋನ್‌ ಕಿತ್ತುಕೊಂಡು ಹೋಗಿದ್ದರು. ತಕ್ಷಣ ಕಾರ್ಯಪ್ರವೃತ್ತರಾದ ಹೊಳೆನರಸೀಪುರ ಡಿವೈಎಸ್‌ಪಿ ಬಿ.ಬಿ.ಲಕ್ಷ್ಮೇಗೌಡ, ನಗರ ಸಿಪಿಐ ಸತ್ಯನಾರಾಯಣ ಅವರು ಆರೋಪಿಗಳ ಬಗ್ಗೆ ಮಂಡ್ಯ ಪೊಲೀಸರಿಗೆ ಮಾಹಿತಿ ನೀಡಿದರು.

ಕೃಷ್ಣರಾಜಪೇಟೆ ಸಿಪಿಐ ಕೆ.ಎನ್‌.ಸುಧಾಕರ್‌, ಪಿಎಸ್‌ಐ ಚಂದ್ರಶೇಖರ್‌ ಅವರು ಕಿಕ್ಕೇರಿ ಜಂಕ್ಷನ್‌ನಲ್ಲಿ ವಾಹನ ತಪಾಸಣೆ ಮಾಡುತ್ತಿದ್ದಾಗ ಆರೋಪಿಗಳು ಸಿಕ್ಕಿಬಿದ್ದರು ಎಂದು ವಿವರಿಸಿದರು.

ವಿಚಾರಣೆಗೊಳಪಡಿಸಿದಾಗ ಆರೋಪಿಗಳು, ನ.2ರಂದು ಬೆಂಗಳೂರು ನಗರದ ಕಲ್ಯಾಣ ನಗರದಲ್ಲಿ ಬೈಕ್‌ನಲ್ಲಿ ಹೋಗುತ್ತಿದ್ದ ನಿಶಾಂತ್‌ಶೆಟ್ಟಿ ಎಂಬುವರಿಂದ ಹಣ ಕಿತ್ತುಕೊಳ್ಳುವ ವೇಳೆ ಅವರಿಗೆ ಚಾಕುವಿನಿಂದ ಕೆನ್ನೆ ಮತ್ತು ಕುತ್ತಿಗೆ ಬಳಿ ಕೊಯ್ದು ಕೊಲೆಗೆ ಯತ್ನಿಸಿದ್ದಾರೆ. ಕೃತ್ಯಕ್ಕೆ ಬಳಸಿದ್ದ ಬೈಕ್‌ ವಶಪಡಿಸಿಕೊಳ್ಳಲಾಗಿದೆ. ಕೊಲೆ ಮಾಡುವ ಉದ್ದೇಶದಿಂದಲೇ ಈ ರೀತಿ ಮಾಡಿದ್ದಾರೆಯೇ ಎಂಬುದರ ಬಗ್ಗೆ ವಿಚಾರಣೆ ನಡೆಯುತ್ತಿದೆ. ವಿಲಾಸಿ ಜೀವನ ನಡೆಸುವ ಸಲುವಾಗಿ ಇಂತಹ ಕೆಲಸಕ್ಕೆ ಕೈ ಹಾಕಿದ್ದರು ಎಂದು ಎಸ್‌ಪಿ ತಿಳಿಸಿದರು.

ಗೋಷ್ಠಿಯಲ್ಲಿ ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ಬಿ.ಎನ್‌.ನಂದಿನಿ, ಡಿಎಸ್‌ಪಿ ಬಿ.ಬಿ.ಲಕ್ಷ್ಮೇಗೌಡ, ಸಿಪಿಐ ಕಾಂತರಾಜು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.