ADVERTISEMENT

‘ಪಶ್ಚಿಮಘಟ್ಟ ಸಂರಕ್ಷಣೆಯತ್ತ ಸ್ಥಳೀಯರ ನಿರ್ಲಕ್ಷ್ಯ’

ಅಭಿವೃದ್ಧಿ ಯೋಜನೆಗಳೇ ಕಾಡಾನೆ-– ಮಾನವ ಸಂಘರ್ಷಕ್ಕೆ ಮೂಲ ಕಾರಣ

​ಪ್ರಜಾವಾಣಿ ವಾರ್ತೆ
Published 17 ಸೆಪ್ಟೆಂಬರ್ 2020, 5:31 IST
Last Updated 17 ಸೆಪ್ಟೆಂಬರ್ 2020, 5:31 IST
ಸಕಲೇಶಪುರದ ರೋಟರಿ ಸಂಸ್ಥೆ ವತಿಯಿಂದ ಕಾಡಾನೆ ಹಾಗೂ ಮಾನವ ಸಂಘರ್ಷ ಬಗ್ಗೆ ಹಮ್ಮಿಕೊಂಡಿದ್ದ ಸಂವಾದದಲ್ಲಿ ವಿನೋದ್‌ಕೃಷ್ಣ ಮಾತನಾಡಿದರು
ಸಕಲೇಶಪುರದ ರೋಟರಿ ಸಂಸ್ಥೆ ವತಿಯಿಂದ ಕಾಡಾನೆ ಹಾಗೂ ಮಾನವ ಸಂಘರ್ಷ ಬಗ್ಗೆ ಹಮ್ಮಿಕೊಂಡಿದ್ದ ಸಂವಾದದಲ್ಲಿ ವಿನೋದ್‌ಕೃಷ್ಣ ಮಾತನಾಡಿದರು   

ಸಕಲೇಶಪುರ: ಪಶ್ಚಿಮಘಟ್ಟದ ಮಳೆಕಾಡುಗಳಲ್ಲಿ ಜಲವಿದ್ಯುತ್‌, ಪೆಟ್ರೋಲಿಯಂ ಪೈಪ್‌ಲೈನ್‌, ಎತ್ತಿನಹೊಳೆಯಂತಹ ಬೃಹತ್‌ ಯೋಜನೆಗಳು ತಲೆಎತ್ತಿರುವ ಪರಿಣಾಮ ಕಾಡಾನೆಗಳೂ ಸೇರಿದಂತೆ ವನ್ಯಜೀವಿಗಳು ಗ್ರಾಮೀಣ ಪ್ರದೇಶಗಳತ್ತ ವಲಸೆ ಬಂದಿವೆ ಎಂದು ನೇಚರ್ ಕನ್ಸರ್ವೇಟಿವ್‌ ಫೌಂಡೇಷನ್‌ ಸಂಸ್ಥೆಯ ಪಶ್ಚಿಮಘಟ್ಟದ ಸಸ್ಯ ಹಾಗೂ ಜೀವ ಸಂಕುಲ ಸಂಶೋಧಕ ವಿನೋದ್‌ ಕೃಷ್ಣ ತಿಳಿಸಿದರು.

ಕಾಡಾನೆ ಹಾಗೂ ಮಾನವ ಸಂಘರ್ಷ ಬಗ್ಗೆ ಇಲ್ಲಿನ ರೋಟರಿ ಸಂಸ್ಥೆ ಮಂಗಳವಾರ ಹಮ್ಮಿಕೊಂಡಿದ್ದ ಸಂವಾದದಲ್ಲಿ ಅವರು ಮಾತನಾಡಿದರು.

ನಿಸರ್ಗದತ್ತವಾದ ಇಲ್ಲಿನ ಅರಣ್ಯ, ಬೆಟ್ಟಗುಡ್ಡ, ಹಳ್ಳ, ಕೊಳ್ಳ, ಝರಿ, ಜಲಪಾತಗಳನ್ನ ಸಂರಕ್ಷಿಸಲು ಈ ಭಾಗದ ಜನ ಉತ್ಸಾಹ ತೋರದೆ ಇರುವುದು ದುರಂತ. ಇಲ್ಲಿನ ವೈವಿಧ್ಯಮಯ ಪರಿಸರವನ್ನು ನಾಶ ಮಾಡುವ ಬೃಹತ್‌ ಯೋಜನೆಗಳನ್ನು ವಿರೋಧಿಸದೆ ಇರುವುದರಿಂದಲೇ ವನ್ಯ ಜೀವಿ ಮತ್ತು ಮಾನವ ಸಂಘರ್ಷ ಉಂಟಾಗುತ್ತಿದೆ ಎಂದರು.

ADVERTISEMENT

20ರಿಂದ 30 ಕಾಡಾನೆಗಳು ತೊಟವೊಂದಕ್ಕೆ ನುಗ್ಗಿದರೆ ಭಾರೀ ಪ್ರಮಾಣದ ಬೆಳೆ ಹಾನಿ ಉಂಟಾಗುತ್ತದೆ. ಭತ್ತದ ಗದ್ದೆಗಳಿಗೆ ಇಳಿದರೂ ನಷ್ಟ ಉಂಟುಮಾಡುತ್ತವೆ. ಆಲೂರು, ಸಕಲೇಶಪುರ ಭಾಗದ ರೈತರು ಹಾಗೂ ಕಾಫಿ ಬೆಳೆಗಾರರಿಗೆ ಕಾಡಾನೆ ಸಮಸ್ಯೆಯಿಂದ ಒಂದೆಡೆ ಜೀವ ಭಯ ಹಾಗೂ ಮತ್ತೊಂದೆಡೆ ಬೆಳೆ ಹಾನಿಯ ಭಯವೂ ಇದೆ ಎಂದರು.

ಸರ್ಕಾರ ಈ ಸಮಸ್ಯೆಗೆ ಶಾಶ್ವತ ಪರಿಹಾರ ರೂಪಿಸುವವರೆಗೂ ಜನರು ಜಾಗೃತೆಯಿಂದ ಇರಬೇಕಾಗಿದೆ. ಆನೆಗಳು ಯಾವ ಪ್ರದೇಶಗಳಲ್ಲಿ ಇವೆ ಎಂದು ಎಸ್‌ಎಂಎಸ್‌ ಮೂಲಕ, ಎಲ್‌ಇಡಿ ಬೋರ್ಡ್‌ಗಳ ಮೂಲಕ ಆ ಭಾಗದ ಜನರಿಗೆ ಅರಣ್ಯ ಇಲಾಖೆ ಹಾಗೂ ಸಂಸ್ಥೆಯಿಂದ ಎಚ್ಚರಿಕೆ ಸಂದೇಶಗಳನ್ನು ಕಳುಹಿಸಲಾಗುತ್ತಿದೆ ಎಂದರು.

ಆನೆಗಳನ್ನು ಗಾಬರಿಗೊಳಿಸುವುದು, ಅವುಗಳತ್ತ ಕಲ್ಲುತೂರುವುದು, ಪಟಾಕಿ ಸಿಡಿಸಿ ಚದುರಿಸುವುದರಿಂದ ಅವುಗಳಿಗೂ ಸಹ ಸಿಟ್ಟು ಬರುತ್ತದೆ. ಸಿಟ್ಟು ಬಂದಾಗ ದಾಳಿ ಮಾಡುತ್ತವೆ. ಬೆಳೆ ಹಾನಿ ತಡೆಯುವುದು ಕಷ್ಟ. ಜೀವ ಹಾನಿ ತಡೆಯಬಹುದು. ಈ ನಿಟ್ಟಿನಲ್ಲಿ ಅರಣ್ಯ ಇಲಾಖೆಯ ಕ್ಷಿಪ್ರ ಕಾರ್ಯಪಡೆ, ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ 24X7 ಕೆಲಸ ಮಾಡುತ್ತಿದ್ದಾರೆ ಎಂದರು.

ರೋಟರಿ ಸಂಸ್ಥೆಯ ಅಧ್ಯಕ್ಷ ಡಾ.ಎಂ.ಕೆ.ಹರೀಶ್‌, ಕಾರ್ಯದರ್ಶಿ ಕೆ.ಜಿ.ಚಂದ್ರಶೇಖರ್‌, ಸಂಸ್ಥೆಯ ಹಿರಿಯರಾದ ಎನ್‌.ಎಂ. ಶಿವಪ್ರಸಾದ್‌, ಕಾಫಿ ಬೆಳೆಗಾರ ಬಾಳ್ಳು ರೋಹಿತ್‌, ಎಚ್‌.ಎಸ್‌.ಚೇತನ್‌, ವಿಜೀತ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.