ADVERTISEMENT

ನೇಮಿನಾಥ ತೀರ್ಥಂಕರರ ಜಾತ್ರಾ ಮಹೋತ್ಸವ: ಧಾರ್ಮಿಕ ಕಾರ್ಯದಲ್ಲಿ ಮಿಂದೆದ್ದ ಭಕ್ತ ಗಣ

ಭಗವಾನ್ ನೇಮಿನಾಥ ತೀರ್ಥಂಕರರ ಜಾತ್ರಾ ಮಹೋತ್ಸವ ಸಂಪನ್ನ

ಬಿ.ಪಿ.ಜಯಕುಮಾರ್‌
Published 15 ಏಪ್ರಿಲ್ 2025, 4:56 IST
Last Updated 15 ಏಪ್ರಿಲ್ 2025, 4:56 IST
ಶ್ರವಣಬೆಳಗೊಳದಲ್ಲಿ ಸೋಮವಾರ ಅಭಿನವ ಚಾರುಕೀರ್ತಿ ಶ್ರೀಗಳು ಜನತೆಗೆ ಓಕುಳಿ ಹಾಕುವ ಮೂಲಕ ವಸಂತೋತ್ಸವಕ್ಕೆ ಚಾಲನೆ ನೀಡಿದರು
ಶ್ರವಣಬೆಳಗೊಳದಲ್ಲಿ ಸೋಮವಾರ ಅಭಿನವ ಚಾರುಕೀರ್ತಿ ಶ್ರೀಗಳು ಜನತೆಗೆ ಓಕುಳಿ ಹಾಕುವ ಮೂಲಕ ವಸಂತೋತ್ಸವಕ್ಕೆ ಚಾಲನೆ ನೀಡಿದರು   

ಶ್ರವಣಬೆಳಗೊಳ: ಭಗವಾನ್ ನೇಮಿನಾಥ ತೀರ್ಥಂಕರರ ವಾರ್ಷಿಕ ಪಂಚಕಲ್ಯಾಣ ಮಹಾರಥೋತ್ಸವದ ಪ್ರಯುಕ್ತ ಕ್ಷೇತ್ರದಲ್ಲಿ 14 ದಿನಗಳ ಕಾಲ ನಿರಂತರವಾಗಿ ನಡೆದ ಧಾರ್ಮಿಕ ಕಾರ್ಯಕ್ರಮಗಳು ಸೋಮವಾರ ಮುಕ್ತಾಯವಾದವು.

ಪೀಠಾಧಿಪತಿ ಸ್ವಸ್ತಿಶ್ರೀ ಅಭಿನವ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ನೇತೃತ್ವದಲ್ಲಿ ಸೋಮವಾರ ಧರ್ಮ ಧ್ವಜಾವರೋಹಣದೊಂದಿಗೆ ವಸಂತೋತ್ಸವ ಆಚರಣೆ ಮಾಡಿ, ಶಿಲ್ಪಿ ಗೌರವ ಆರ್ಪಿಸುವುದರೊಂದಿಗೆ ಸಂಪನ್ನಗೊಂಡವು.

ಕ್ಷೇತ್ರದ ಅಧಿದೇವತೆ ಕೂಷ್ಮಾಂಡಿನಿ ದೇವಿಯ ಜಕ್ಕಳಮ್ಮ ದೇವಿಯ ಮೂಲ ಸ್ಥಾನದಲ್ಲಿ ಮಹಾನೈವೇದ್ಯ ಸಮರ್ಪಣೆ, 42 ಜಿನ ಬಸದಿಗಳಲ್ಲಿ ವಿಶೇಷ ಅಭಿಷೇಕ, ಆರಾಧನೆ ನಡೆದವು. ವಿಂಧ್ಯಗಿರಿಯ ಭಗವಾನ್ ಬಾಹುಬಲಿ ಸ್ವಾಮಿಯ 1044ನೇ ಪ್ರತಿಷ್ಠಾಪನಾ ಮಹೋತ್ಸವ ಪಾದಪೂಜೆಯೊಂದಿಗೆ ನೆರವೇರಿತು.

ADVERTISEMENT

ಚಂದ್ರಗಿರಿಯ ಚಿಕ್ಕಬೆಟ್ಟದಲ್ಲಿರುವ ಅಂತಿಮ ಶ್ರುತ ಕೇವಲಿ ಭದ್ರಬಾಹು ಸ್ವಾಮಿ ಚರಣಗಳಿಗೆ ಅಭಿಷೇಕ, ಆರಾಧನೆ ನಡೆಸಲಾಯಿತು. 12 ಅಡಿಯ ಚಿಕ್ಕ ಬಾಹುಬಲಿಯ ನೂತನ ಮೂರ್ತಿಗೆ ಮಂಡಲಪೂಜೆ, ಸರ್ವದೋಷ ಪ್ರಾಯಶ್ಚಿತ, ಮಸ್ತಕಾಭಿಷೇಕ ಜರುಗಿದವು.

ಗರ್ಭಾವತರಣ ಕಲ್ಯಾಣ, ದೇವೇಂದ್ರವಾಹನೋತ್ಸವ, ತೀರ್ಥಂಕರರಿಗೆ ಜನ್ಮ ಕಲ್ಯಾಣ ಜನ್ಮಾಭಿಷೇಕ, ಬಾಲಲೀಲಾ ಮಹೋತ್ಸವ, ಮಹಾವೀರ ಸ್ವಾಮಿಯ 2,624ನೇ ಜನ್ಮಕಲ್ಯಾಣ ಕಾರ್ಯಕ್ರಮ, 125 ವಟುಗಳಿಗೆ ವ್ರತೋಪದೇಶ, ಕೇವಲಜ್ಞಾನ ಕಲ್ಯಾಣ, 24 ತೀರ್ಥಂಕರರ ಮತ್ತು 24 ಯಕ್ಷ ಯಕ್ಷಿಯರ ಭವ್ಯ ಮೆರವಣಿಗೆ ನಡೆಯಿತು.

14 ದಿನಗಳ ಕಾಲ ಕ್ಷೇತ್ರದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಿದ್ದು ಜಾತ್ರಾ ಮಹೋತ್ಸವ ಅದ್ಧೂರಿಯಾಗಿ ಜರುಗಿದೆ. ಭಕ್ತಾದಿಗಳು ಸಂಭ್ರಮದಿಂದ ಪಾಲ್ಗೊಂಡಿದ್ದಾರೆ.
ಸ್ವಸ್ತಿಶ್ರೀ ಅಭಿನವ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ, ಜೈನ ಮಠದ ಪೀಠಾಧ್ಯಕ್ಷ

ಮಹಾರಥೋತ್ಸವ, ಮೋಕ್ಷ ಕಲ್ಯಾಣ, ಬಾಹುಬಲಿಗೆ ಪಾದಪೂಜೆ, ಚಿಕ್ಕ ದೇವರಾಜ ಒಡೆಯರ ಕಲ್ಯಾಣಿಯಲ್ಲಿ ಹಂಸ ವಾಹನದಲ್ಲಿ ಭಗವಾನ್ ನೇಮಿನಾಥ ಸ್ವಾಮಿಯ ತೆಪ್ಪೋತ್ಸವಗಳು ಮನಸೂರೆಗೊಂಡವು.

‘ಭಕ್ತರಿಗೆ, ಪಟ್ಟಣ ಮತ್ತು ಸುತ್ತಲಿನ ಜನತೆಗೆ ಉಪಾಹಾರ, ಭೋಜನ, ತಂಪು ಪಾನೀಯ, ಮಜ್ಜಿಗೆ ವ್ಯವಸ್ಥೆ ಮಾಡಲಾಗಿತ್ತು. ವಿಶುದ್ಧ ಮತ್ತು ಶ್ರಾವಕ ಸತ್ಕಾರ ಭೋಜನಾಲಯಗಳಲ್ಲಿ 65 ಸಾವಿರಕ್ಕೂ ಅಧಿಕ ಜನ ಪ್ರಸಾದ ಸ್ವೀಕರಿಸಿದ್ದಾರೆ’ ಎಂದು ಮೇಲ್ವಿಚಾರಕ ಜ್ವಾಲಾನಯ್ಯ ತಿಳಿಸಿದರು.

ಸಂಭ್ರಮದ ವಸಂತೋತ್ಸವ

ನೇಮಿನಾಥ ತೀರ್ಥಂಕರರ ವಾರ್ಷಿಕ ಜಾತ್ರಾ ಮಹೋತ್ಸವದ ಮುಕ್ತಾಯದ ಭಾಗವಾಗಿ ಸೋಮವಾರ ವಸಂತೋತ್ಸವವನ್ನು ಕ್ಷೇತ್ರದ ಪೀಠಾಧಿಪತಿಗಳಾದ ಸ್ವಸ್ತಿಶ್ರೀ ಅಭಿನವ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ನೇತೃತ್ವದಲ್ಲಿ ಆಚರಿಸಲಾಯಿತು.

ಭಂಡಾರ ಬಸದಿಯ ಮುಂಭಾಗದ ಧಾರ್ಮಿಕ ಧ್ವಜ ಸ್ತಂಭಕ್ಕೆ ಪೂಜೆ ಸಲ್ಲಿಸಿ ಮಂಗಲಾಕ್ಷತೆ ಹಾಕುವುದರೊಂದಿಗೆ ಅಭಿನವ ಶ್ರೀಗಳು ಧರ್ಮ ಧ್ವಜಾವರೋಹಣ ನೆರವೇರಿಸಿದರು. ಪಂಚಕಲ್ಯಾಣದ ಧಾರ್ಮಿಕ ವಿಧಿಗೆ ಮೃತ್ತಿಕಾ ಸಂಗ್ರಹಿಸಿ ನವಧಾನ್ಯಗಳಿಂದ ಬೆಳೆಸಿದ ಜಾಗವನ್ನು ಮೆರವಣಿಗೆಯ ಮೂಲಕ ಶ್ರಾವಕಿಯರು ಕಲ್ಯಾಣಿಗೆ ತೆರಳಿ ಪೂಜೆಯೊಂದಿಗೆ ವಿಸರ್ಜಿಸಿದರು.

ಶ್ರೀಗಳು ಅರಿಸಿನ– ಕುಂಕುಮದಿಂದ ತಯಾರಿಸಿದ ಓಕುಳಿಯನ್ನು ಜನತೆಗೆ ಸಿಂಪಡಿಸಿ ಅರಿಸಿನ ಪುಡಿ ಹಾಕುತ್ತಿದ್ದಂತೆ ಭಕ್ತರು ಜಯಕಾರ ಹಾಕಿ ಸಂಭ್ರಮಿಸಿದರು. ಯುವಕ– ಯುವತಿಯರು  ಪರಸ್ಪರ ಓಕುಳಿ ಹಾಕಿಕೊಂಡು ಸಂಭ್ರಮಿಸಿದರು. ಪೂಜೆಯ ನೇತೃತ್ವವನ್ನು ನಂದಕುಮಾರ್ ಶಾಸ್ತ್ರಿ ಎಸ್.ಪಿ.ಜಿನೇಶ್ ತಂಡದವರು ವಹಿಸಿದ್ದರು.

ಶ್ರವಣಬೆಳಗೊಳದಲ್ಲಿ ಜರುಗಿದ ನೇಮಿನಾಥ ತೀರ್ಥಂಕರರ ವಾರ್ಷಿಕ ಜಾತ್ರಾ ಮಹೋತ್ಸವದಲ್ಲಿ ನವಧಾನ್ಯಗಳಿಂದ ಬೆಳೆಸಿದ ಜಾಗರವನ್ನು ಮೆರವಣಿಗೆಯ ಮೂಲಕ ಶ್ರಾವಕಿಯರು ಕಲ್ಯಾಣಿಗೆ ತೆರಳಿ ವಿಸರ್ಜಿಸಿದರು
ಶ್ರವಣಬೆಳಗೊಳದಲ್ಲಿ ನಡೆದ ಜಾತ್ರಾ ಮಹೋತ್ಸವದಲ್ಲಿ ಅಕ್ಷಯ ಶ್ರಾವಕ ಭೋಜನಾಲಯದಲ್ಲಿ ಚಾರುಕೀರ್ತಿ ಶ್ರೀಗಳು ಮತ್ತು ಸಿಂಹನಗದ್ದೆ ಲಕ್ಷ್ಮಿಸೇನ ಭಟ್ಟಾರಕ ಸ್ವಾಮೀಜಿ ಭಕ್ತಾದಿಗಳಿಗೆ ಆಹಾರ ಬಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.