ADVERTISEMENT

ಎಎಪಿಯಿಂದ ಕರ್ನಾಟಕದಲ್ಲಿ ಹೊಸ ಪರ್ವ: ಶಿವರಾಯಪ್ಪ ಜೋಗಿನ

ವಿಧಾನಸಭೆ ಚುನಾವಣೆಯಲ್ಲಿ ಉತ್ತಮ ಫಲಿತಾಂಶ: ಶಿವರಾಯಪ್ಪ

​ಪ್ರಜಾವಾಣಿ ವಾರ್ತೆ
Published 30 ನವೆಂಬರ್ 2022, 3:54 IST
Last Updated 30 ನವೆಂಬರ್ 2022, 3:54 IST
   

ಹಾಸನ: ಎಎಪಿಯಿಂದ ರಾಜ್ಯದಲ್ಲಿ ಹೊಸ ರಾಜಕೀಯ ಪರ್ವ ಆರಂಭವಾಗಿದ್ದು, ವಿಧಾನಸಭೆ ಚುನಾವಣೆಯಲ್ಲಿ ಉತ್ತಮ ಫಲಿತಾಂಶ ಪಡೆಯಲಿದೆ ಎಂದು ಎಎಪಿ ರಾಜ್ಯ ಘಟಕದ ಕಾರ್ಯದರ್ಶಿ ಶಿವರಾಯಪ್ಪ ಜೋಗಿನ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶದಲ್ಲಿ ಇದುವರೆಗೂ ಯಾವ ರಾಜಕೀಯ ಪಕ್ಷಗಳು ನೀಡದ ಜನಪರ ಆಡಳಿತ ನೀಡಲು ಆಮ್ ಆದ್ಮಿ ಪಕ್ಷ ಮುಂದಾಗಿದೆ. ಚುನಾವಣೆಯಲ್ಲಿ ಹೆಚ್ಚಿನ ಸ್ಥಾನಗಳನ್ನು ಗೆಲ್ಲುವ ಮೂಲಕ ದಕ್ಷಿಣ ಭಾರತದ ಹೆಬ್ಬಾಗಿಲು ಕರ್ನಾಟಕದಲ್ಲಿ ಪಕ್ಷ ಹೊಸ ದಾಖಲೆ ಮಾಡಲಿದೆ ಎಂದರು.

ರಾಜ್ಯದ ಜನರು ಕಾಂಗ್ರೆಸ್, ಜೆಡಿಎಸ್ ಹಾಗೂ ಬಿಜೆಪಿ ಆಡಳಿತದಿಂದ ಬೇಸತ್ತು ಹೊಸ ರಾಜಕೀಯ ಪಕ್ಷಕ್ಕೆ ಮಣೆ ಹಾಕಲಿದ್ದಾರೆ. ಈ ನಿಟ್ಟಿನಲ್ಲಿ ಆಮ್ ಆದ್ಮಿ ಪಕ್ಷದ ಬೆಗ್ಗೆ ಜನರ ಒಲವಿದ್ದು, ಮುಂದಿನ ಚುನಾವಣೆಯಲ್ಲಿ ಅಧಿಕಾರ ಹಿಡಿಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ADVERTISEMENT

ಹಾಸನ ಜಿಲ್ಲೆಯ ಏಳು ವಿಧಾನಸಭೆ ಕ್ಷೇತ್ರಗಳ ಆಕಾಂಕ್ಷಿಗಳ ಪಟ್ಟಿ ಮಾಡಲಾಗಿದ್ದು, ಡಿಸೆಂಬರ್ 31 ರ ಒಳಗಾಗಿ ಅಭ್ಯರ್ಥಿಗಳನ್ನು ಘೋಷಣೆ ಮಾಡಲಾಗುವುದು, ಯಾವುದೇ ಪಕ್ಷದ ಸಹಕಾರ ಇಲ್ಲದೆ ಸ್ವತಂತ್ರವಾಗಿ ಚುನಾವಣೆ ಎದುರಿಸಲಿದ್ದು, ಅಧಿಕಾರಕ್ಕೆ ಬರಲಿದ್ದೇವೆ ಎಂದರು.

ಹಾಸನ ವಿಧಾನಸಭಾ ಕ್ಷೇತ್ರದಲ್ಲಿ ಅಗಿಲೆ ಯೋಗೀಶ್ ಅವರ ಸ್ಪರ್ಧೆ ಸೇರಿದಂತೆ ಜಿಲ್ಲೆಯ ಏಳು ಕ್ಷೇತ್ರದ ಅಭ್ಯರ್ಥಿಗಳನ್ನು ರಾಜ್ಯದ ಎಎಪಿ ಮುಖಂಡರು ಸೇರಿ ಅರ್ಹರನ್ನು ಆಯ್ಕೆ ಮಾಡಲಿದ್ದಾರೆ. ಯಾರು ಪ್ರಾಮಾಣಿಕ, ಜನಾನುರಾಗಿಯಾಗಿ ದುಡಿಯುತ್ತಾರೋ ಅವರ ರಾಜಕೀಯ ಹಿನ್ನೆಲೆಯನ್ನು ಪರಿಗಣಿಸಿ ಪಕ್ಷದ ಅಭ್ಯರ್ಥಿಯಾಗಿ ಅಂತಿಮಗೊಳಿಸಲಿದ್ದಾರೆ ಎಂದು ತಿಳಿಸಿದರು.

ಆಮ್ ಆದ್ಮಿ ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಶಿವಕುಮಾರ್, ಪ್ರೇಮ್ ಕುಮಾರ್, ಮಂಜೇಗೌಡ, ವಿನೋದ್ ರಾಜ್, ಡಾ.ದೇವರಾಜ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.