ADVERTISEMENT

ಯಾರೂ ಮುಖ್ಯರಲ್ಲ,ಅಮುಖ್ಯರಲ್ಲ: ದೀಪಾ ಭಾಸ್ತಿ

ಮಾಡಬೇಕಿರುವ ಕೆಲಸಗಳೇ ನನಗೆ ಮುಖ್ಯ: ದೀಪಾ ಭಾಸ್ತಿ

​ಪ್ರಜಾವಾಣಿ ವಾರ್ತೆ
Published 2 ಅಕ್ಟೋಬರ್ 2025, 23:31 IST
Last Updated 2 ಅಕ್ಟೋಬರ್ 2025, 23:31 IST
ಅರಕಲಗೂಡಿನಲ್ಲಿ ಗುರುವಾರ ರಾತ್ರಿ ನಡೆದ ದಸರಾ ಕಾರ್ಯಕ್ರಮದಲ್ಲಿ ಬುಕರ್‌ ಪ್ರಶಸ್ತಿ ಪುರಸ್ಕೃತ ಅನುವಾದಕಿ ದೀಪಾ ಭಾಸ್ತಿ ಅವರನ್ನು ಶಾಸಕ ಎ.ಮಂಜು ಹಾಗೂ ಜಿಲ್ಲಾಧಿಕಾರಿ ಲತಾಕುಮಾರಿ ಸನ್ಮಾನಿಸಿದರು. ತಹಶೀಲ್ದಾರ್ ಕೆ.ಸಿ. ಸೌಮ್ಯ, ಸಿ.ಸ್ವಾಮಿ ಭಾಗವಹಿಸಿದ್ದರು
ಅರಕಲಗೂಡಿನಲ್ಲಿ ಗುರುವಾರ ರಾತ್ರಿ ನಡೆದ ದಸರಾ ಕಾರ್ಯಕ್ರಮದಲ್ಲಿ ಬುಕರ್‌ ಪ್ರಶಸ್ತಿ ಪುರಸ್ಕೃತ ಅನುವಾದಕಿ ದೀಪಾ ಭಾಸ್ತಿ ಅವರನ್ನು ಶಾಸಕ ಎ.ಮಂಜು ಹಾಗೂ ಜಿಲ್ಲಾಧಿಕಾರಿ ಲತಾಕುಮಾರಿ ಸನ್ಮಾನಿಸಿದರು. ತಹಶೀಲ್ದಾರ್ ಕೆ.ಸಿ. ಸೌಮ್ಯ, ಸಿ.ಸ್ವಾಮಿ ಭಾಗವಹಿಸಿದ್ದರು   

ಅರಕಲಗೂಡು(ಹಾಸನ): ‘ಎದೆಯ ಹಣತೆ ಕೃತಿಯ ಮೂಲ ಲೇಖಕಿ ಬಾನು ಮುಷ್ತಾಕ್ ಅವರು. ಬುಕರ್ ಪ್ರಶಸ್ತಿಯನ್ನು ಅನುವಾದಿತ ಕೃತಿಗೇ ಕೊಡಬೇಕೆಂಬ ನಿಯಮವಿದೆ. ಲೇಖಕರು ಹಾಗು ಅನುವಾದಕರರಲ್ಲಿ ಯಾರೂ ಮುಖ್ಯರಲ್ಲ, ಯಾರೂ ಅಮುಖ್ಯರೂ ಅಲ್ಲ. ಪ್ರಶಸ್ತಿಗೆ ಕೃತಿಯನ್ನು ಆಯ್ಕೆ ಮಾಡುವ ಮಂಡಳಿಯು ತಾರತಮ್ಯ ಮಾಡದೆ ಪ್ರಶಸ್ತಿ ಹಣವನ್ನು ಸಮನಾಗಿ ಹಂಚಿಕೆ ಮಾಡುತ್ತದೆ’ ಎಂದು ಪ್ರಶಸ್ತಿ ಪುರಸ್ಕೃತ ಅನುವಾದಕಿ ದೀಪಾ ಭಾಸ್ತಿ ಹೇಳಿದರು.

ಪಟ್ಟಣದಲ್ಲಿ ದಸರಾ ಮೆರವಣಿಗೆ ಉದ್ಘಾಟನೆಗೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಅಂತರರಾಷ್ಟ್ರೀಯ ಬುಕರ್ ಪ್ರಶಸ್ತಿ ಬಂದಿರುವುದು ನಮ್ಮ ರಾಜ್ಯಕ್ಕೆ, ದೇಶಕ್ಕೆ ಹೆಮ್ಮೆಯ ವಿಷಯ. ವೈಯುಕ್ತಿಕವಾಗಿಯೂ ಹೆಮ್ಮೆ ಮೂಡಿಸಿದೆ. ಇದು ಮೊದಲ ಬಾರಿಗೆ ಮೂಲ ಕನ್ನಡ ಕೃತಿಗೆ ಬಂದಿರುವ ಪ್ರಶಸ್ತಿ. ಭಾರತದ ಮೊದಲ ಅನುವಾದಕಿಗೆ, ಅಂದರೆ ನನಗೆ ಬಂದಿರುವ ಪ್ರಶಸ್ತಿ’ ಎಂದರು.

‘ಮೈಸೂರು ದಸರಾ ಉದ್ಘಾಟನೆಗೆ ಬಾನು ಮುಷ್ತಾಕ್‌ ಅವರನ್ನು ಆಯ್ಕೆ ಮಾಡಿದ್ದು ರಾಜ್ಯ ಸರ್ಕಾರ. ಅದನ್ನು ವೈಯುಕ್ತಿಕ ದೃಷ್ಟಿಯಲ್ಲಿ ಚರ್ಚಿಸುವ ಆಸಕ್ತಿ ಯಾವತ್ತೂ ಇಲ್ಲ. ಸಾಹಿತ್ಯದಲ್ಲಿ ಇದುವರೆಗೆ ಮಾಡಿರುವ ಹಾಗೂ ಮಾಡಬೇಕಿರುವ ಕೆಲಸಗಳಷ್ಟೇ ನನಗೆ ಮುಖ್ಯ. ಯಾರು ಏನು ಹೇಳಿದರು? ಹೇಳಲಿಲ್ಲ? ಎಂಬುದಕ್ಕಿಂತಲೂ ಸಾಹಿತ್ಯದಲ್ಲಿ ಮುಂದೇನಾಗಬಹುದು? ಅದರ ಪ್ರಭಾವದಿಂದ ಮುಂದೆ ಇನ್ನೇನಾಗಬಹುದೆಂಬುದೇ ಮುಖ್ಯ’ ಎಂದರು.

ADVERTISEMENT

‘ತಮಿಳು, ತೆಲುಗು, ಹಿಂದೆ, ಬಂಗಾಳಿ, ಮಲೆಯಾಳಂ, ಉರ್ದು ಭಾಷೆಗೆ ಹೋಲಿಸಿದರೆ, ಕನ್ನಡ ಕೃತಿಗಳು ಇಂಗ್ಲಿಷ್‌ಗೆ ಅನುವಾದವಾಗುವುದು ತುಂಬಾ ಕಡಿಮೆ. ನಮ್ಮಲ್ಲಿ ಅದ್ಭುತವಾದ ಕೃತಿಗಳಿವೆ. ಎಸ್.ಎಲ್.ಭೈರಪ್ಪ ಅವರದ್ದೂ ಸೇರಿ ಹಲವು ಕೃತಿಗಳು ಅನುವಾದಗೊಂಡಿವೆ. ಕುವೆಂಪು, ಕಾರಂತರಿದ್ದಾರೆ. ಅವುಗಳನ್ನು ಕನ್ನಡೇತರರು ಹೇಗೆ ಓದುವಂತೆ ಮಾಡಬಹುದೆಂಬ ಚರ್ಚೆ ಹೆಚ್ಚು ಸೂಕ್ತ’ ಎಂದರು.

‘ಕನ್ನಡ ಸಾಹಿತ್ಯಕ್ಕೆ ಒಂದೂವರೆ ಸಾವಿರ ವರ್ಷಗಳ ಇತಿಹಾಸವಿದೆ. ನಮ್ಮ ನಂತರವೂ ಕನ್ನಡ ಉಳಿದಿರುತ್ತದೆ. ನಮ್ಮಿಂದ ಕನ್ನಡವಲ್ಲ, ನಾವಿರುವುದು ಕನ್ನಡಕ್ಕಾಗಿ. ನಾನು ಕೆಲಸ ಮಾಡುವುದು ಕನ್ನಡಕ್ಕಾಗಿ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.