ADVERTISEMENT

ಸಾಹಿತಿ ಎಸ್‌.ಎಲ್‌. ಭೈರಪ್ಪಗೆ ‘ಭಗೀರಥ ಸ್ವರೂಪಿ’ ಬಿರುದು

ಹುಟ್ಟೂರಿನ ಜನರ ಕನಸು ನನಸಾಗಿಸಿದ್ದೇನೆ ಎಂದ ಕಾದಂಬರಿಕಾರ

​ಪ್ರಜಾವಾಣಿ ವಾರ್ತೆ
Published 9 ಮಾರ್ಚ್ 2025, 14:13 IST
Last Updated 9 ಮಾರ್ಚ್ 2025, 14:13 IST
ಹಾಸನ ಜಿಲ್ಲೆಯ ಸಂತೇಶಿವರದಲ್ಲಿ ಭಾನುವಾರ ಕಾದಂಬರಿಕಾರ ಎಸ್‌.ಎಲ್‌.ಭೈರಪ್ಪ ಅವರಿಗೆ ‘ಭಗೀರಥ ಸ್ವರೂಪಿ’ ಬಿರುದು ನೀಡಿ ಗೌರವಿಸಲಾಯಿತು. ಪತ್ರಕರ್ತ ವಿಶ್ವೇಶ್ವರ ಭಟ್‌, ಶಾಸಕ ಸಿ.ಎನ್‌.ಬಾಲಕೃಷ್ಣ, ವಿಧಾನ ಪರಿಷತ್ ಮಾಜಿ ಸದಸ್ಯ ಎಂ.ಎ. ಗೋಪಾಲಸ್ವಾಮಿ, ಸಂಸದರಾದ ಬಸವರಾಜ ಬೊಮ್ಮಾಯಿ, ಯದುವೀರ್‌ ಕೃಷ್ಣದತ್ತ ಒಡೆಯರ್‌ ಭಾಗವಹಿಸಿದ್ದರು
ಹಾಸನ ಜಿಲ್ಲೆಯ ಸಂತೇಶಿವರದಲ್ಲಿ ಭಾನುವಾರ ಕಾದಂಬರಿಕಾರ ಎಸ್‌.ಎಲ್‌.ಭೈರಪ್ಪ ಅವರಿಗೆ ‘ಭಗೀರಥ ಸ್ವರೂಪಿ’ ಬಿರುದು ನೀಡಿ ಗೌರವಿಸಲಾಯಿತು. ಪತ್ರಕರ್ತ ವಿಶ್ವೇಶ್ವರ ಭಟ್‌, ಶಾಸಕ ಸಿ.ಎನ್‌.ಬಾಲಕೃಷ್ಣ, ವಿಧಾನ ಪರಿಷತ್ ಮಾಜಿ ಸದಸ್ಯ ಎಂ.ಎ. ಗೋಪಾಲಸ್ವಾಮಿ, ಸಂಸದರಾದ ಬಸವರಾಜ ಬೊಮ್ಮಾಯಿ, ಯದುವೀರ್‌ ಕೃಷ್ಣದತ್ತ ಒಡೆಯರ್‌ ಭಾಗವಹಿಸಿದ್ದರು   

ನುಗ್ಗೇಹಳ್ಳಿ (ಹಾಸನ ಜಿಲ್ಲೆ): ತಮ್ಮ ಹುಟ್ಟೂರಾದ ಹೋಬಳಿಯ ಸಂತೇಶಿವರ ಕೆರೆಗೆ ನೀರು ತುಂಬಿಸುವ ಯೋಜನೆಯನ್ನು ಕಾರ್ಯಗತಗೊಳಿಸಿದ ಕಾದಂಬರಿಕಾರ ಎಸ್‌.ಎಲ್‌. ಭೈರಪ್ಪ ಅವರಿಗೆ ಭಾನುವಾರ ‘ಭಗೀರಥ ಸ್ವರೂಪಿ’ ಬಿರುದು ನೀಡಿ ಗ್ರಾಮಸ್ಥರು ಸನ್ಮಾನಿಸಿದರು.

ಬಳಿಕ ಮಾತನಾಡಿದ ಭೈರಪ್ಪ, ‘ನನ್ನ ಹುಟ್ಟೂರು ಸಂತೇಶಿವರ ಹಾಗೂ ಅಗ್ರಹಾರ ಬೆಳಗುಲಿ ಗ್ರಾಮಗಳ ಕೆರೆಗಳಿಗೆ ನೀರು ಹರಿಸುವ ಯೋಜನೆಯನ್ನು ಸರ್ಕಾರದ ನೆರವಿನಿಂದ ಅನುಷ್ಠಾನಗೊಳಿಸುವ ಮೂಲಕ ಈ ಭಾಗದ ರೈತರ ದಶಕದ ಕನಸನ್ನು ನನಸು ಮಾಡಿದ್ದೇನೆ’ ಎಂದು ತಿಳಿಸಿದರು.

ಸಂಸದ ಬಸವರಾಜ ಬೊಮ್ಮಾಯಿ ಮಾತನಾಡಿ, ‘ಭೈರಪ್ಪನವರು ತಮ್ಮ ಕುಟುಂಬಕ್ಕಾಗಿ ಏನನ್ನೂ ಕೇಳಲಿಲ್ಲ. ಬದಲಿಗೆ ಗ್ರಾಮದ ಜನರಿಗೆ ಅನುಕೂಲ ಆಗಲೆಂದು ಕೆರೆ ತುಂಬಿಸುವ ಯೋಜನೆಗೆ ಹಣ ನೀಡಿ ಎಂದು ಕೋರಿಕೊಂಡಿದ್ದಾರೆ. ಇದರಿಂದಲೇ ಅವರ ವ್ಯಕ್ತಿತ್ವ ತಿಳಿಯುತ್ತದೆ’ ಎಂದರು.

ADVERTISEMENT

ಸಂಸದರಾದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್‌, ಶ್ರೇಯಸ್ ಪಟೇಲ್‌, ಶಾಸಕ ಸಿ.ಎನ್‌.ಬಾಲಕೃಷ್ಣ ಸೇರಿದಂತೆ ಹಲವು ಗಣ್ಯರು ಭಾಗವಹಿಸಿದ್ದರು. ಇದಕ್ಕೂ ಮುನ್ನ ಭೈರಪ್ಪ ದಂಪತಿಯನ್ನು ತೆರೆದ ವಾಹನದಲ್ಲಿ ಮೆರವಣಿಗೆ ಮೂಲಕ ಗ್ರಾಮಕ್ಕೆ ಕರೆತರಲಾಯಿತು. ಭೈರಪ್ಪ ಅವರ ಪುಸ್ತಕಗಳ ಮಾರಾಟ ಮಳಿಗೆಯನ್ನು ತೆರೆಯಲಾಗಿತ್ತು.

ಬಿಜೆಪಿ ಸರ್ಕಾರದ ಅವಧಿಯಲ್ಲಿ ಮುಖ್ಯಮಂತ್ರಿಯಾಗಿದ್ದ ಬಿ.ಎಸ್. ಯಡಿಯೂರಪ್ಪ ಅವರಿಗೆ ಮನವಿ ಮಾಡಿದ್ದ ಭೈರಪ್ಪ ಅವರು, ಗ್ರಾಮದ ಕೆರೆ ತುಂಬಿಸುವ ಯೋಜನೆಗೆ ₹25 ಕೋಟಿ ಬಿಡುಗಡೆ ಮಾಡಿಸುವಲ್ಲಿ ಹೆಚ್ಚು ಪರಿಶ್ರಮಪಟ್ಟಿದ್ದರು. ಯೋಜನೆ ಪೂರ್ಣಗೊಂಡು ಈ ಹಂಗಾಮಿನಲ್ಲಿ ಸಂತೇಶಿವರ ಹಾಗೂ ಅಗ್ರಹಾರ ಬೆಳಗುಲಿ ಕೆರೆಗಳಿಗೆ ನೀರು ಹರಿಸಲಾಗಿದೆ. ಯೋಜನೆಯಿಂದ 20ಕ್ಕೂ ಹೆಚ್ಚು ಗ್ರಾಮಗಳಿಗೆ ಅನುಕೂಲವಾಗುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.