ನುಗ್ಗೇಹಳ್ಳಿ: ‘ಹೋಬಳಿ ಕೇಂದ್ರದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ವೈದ್ಯರು ಹಾಗೂ ಸಿಬ್ಬಂದಿಗೆ ತೊಂದರೆ ಕೊಡುತ್ತಿರುವ ಹಾಗೂ ಅನಧಿಕೃತವಾಗಿ ಆಸ್ಪತ್ರೆಯ ವಿಡಿಯೊ ಚಿತ್ರೀಕರಣ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುತ್ತಿರುವವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಸೂಚನೆ ನೀಡಲಾಗಿದೆ’ ಎಂದು ಶಾಸಕ ಸಿ.ಎನ್.ಬಾಲಕೃಷ್ಣ ಹೇಳಿದರು.
ಹೋಬಳಿ ಕೇಂದ್ರದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಸೋಮವಾರ ವೈದ್ಯರು, ಸಿಬ್ಬಂದಿ ಮತ್ತು ಸಾರ್ವಜನಿಕರ ಸಭೆ ನಡೆಸಿ ಮಾತನಾಡಿದರು.
‘ನಮ್ಮ ಜೀವ ಉಳಿಸುವ ವೈದ್ಯರನ್ನು ದೇವರಂತೆ ಕಾಣಬೇಕು, ಆದರೆ ನುಗ್ಗೇಹಳ್ಳಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಉತ್ತಮವಾಗಿ ಸೇವೆ ಸಲ್ಲಿಸುತ್ತಿರುವ ವೈದ್ಯರು ಹಾಗೂ ಸಿಬ್ಬಂದಿ ವಿರುದ್ಧ ಕುಚೇಷ್ಟೆಗಾಗಿ ಕೆಲವರು ಸೋಷಿಯಲ್ ಮೀಡಿಯಾ ಹೆಸರು ಹೇಳಿಕೊಂಡು ಆಸ್ಪತ್ರೆ ವಿಡಿಯೊ ಮಾಡಿ ತೊಂದರೆ ಕೊಡುತ್ತಿದ್ದಾರೆ. ಇವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಈಗಾಗಲೇ ಹೆಚ್ಚುವರಿ ಜಿಲ್ಲಾಧಿಕಾರಿ, ಜಿಲ್ಲಾ ಆರೋಗ್ಯ ಅಧಿಕಾರಿಗೆ ಹಾಗೂ ಎಸ್‌ಪಿಗೆ ಆಸ್ಪತ್ರೆ ಪರವಾಗಿ ದೂರು ನೀಡಿದ್ದೇನೆ’ ಎಂದರು.
‘ಆಸ್ಪತ್ರೆ ಭದ್ರತಾ ವ್ಯವಸ್ಥೆಗಾಗಿ ಪೊಲೀಸರನ್ನು ನಿಯೋಜಿಸಲಾಗುತ್ತಿದೆ, ನಾನೇ ಸ್ವಂತ ಹಣ ನೀಡಿ ಸಿ.ಸಿ ಕ್ಯಾಮೆರಾ ಅಳವಡಿಕೆ ಮಾಡಿಸುತ್ತೇನೆ’ ಎಂದು ತಿಳಿಸಿದರು. ಆಸ್ಪತ್ರೆ ವೈದ್ಯಾಧಿಕಾರಿ ಡಾ. ಪ್ರವೀಣ್ ಮಾತನಾಡಿದರು.
ಸಾರ್ವಜನಿಕರ ಪರವಾಗಿ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷೆ ಮಹಾದೇವಮ್ಮ ಶಂಕರ್, ತಾಲ್ಲೂಕು ಪಂಚಾಯಿತಿ ಮಾಜಿ ಉಪಾಧ್ಯಕ್ಷ ಎಚ್.ಜೆ. ಕಿರಣ್, ಕೆಡಿಪಿ ಸದಸ್ಯ ಸಮಿವುಲ್ಲಾ ಖಾನ್, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಎನ್.ಎಸ್. ಲಕ್ಷ್ಮಣ್, ಸಾರ್ವಜನಿಕರಾದ ಜೆಸಿಪಿ ಶೇಖರ್, ಹೊನ್ನಮರನಹಳ್ಳಿ ದಿನೇಶ್ ತಪ್ಪಿಸಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಶಾಸಕರಿಗೆ ಮನವಿ ಮಾಡಿದರು.
ಸಭೆಯಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಎನ್ಎಸ್ ಮಂಜುನಾಥ್, ವೈದ್ಯರಾದ ಡಾ. ಸುಹಾಸ್, ಡಾ. ರಾಘವೇಂದ್ರ, ಕನ್ನಡ ಸಾಹಿತ್ಯ ಪರಿಷತ್ ಹೋಬಳಿ ಘಟಕದ ಅಧ್ಯಕ್ಷ ದೊರೆಸ್ವಾಮಿ, ರೈತ ಸಂಘದ ಮುಖಂಡರಾದ ಅರಳಾಪುರ ಮಂಜೇಗೌಡ, ಸಮುದ್ರಹಳ್ಳಿ ರಾಮಚಂದ್ರು, ಮುಖಂಡರಾದ ಮೊಹಮ್ಮದ್ ಜಾವಿದ್, ಗೌಡಕಿ ಮಂಜು, ರೇಣುಕಮ್ಮ, ಬಸವನಪುರ ಯೋಗಾನಂದ್, ಹುಲಿಕೆರೆ ಸಂಪತ್ ಕುಮಾರ್ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.