ಸಕಲೇಶಪುರ: ಪಾಕಿಸ್ತಾನ ಹಾಗೂ ಪಾಕ್ ಆಕ್ರಮಿತ ಕಾಶ್ಮೀರ್‌ನಲ್ಲಿ ಭಯೋತ್ಪಾದಕರ ನೆಲೆಗಳ ಮೇಲೆ ಭಾರತೀಯ ಸೇನೆಯ ‘ಆಪರೇಷನ್ ಸಿಂಧೂರ್’ ಯಶಸ್ವಿ ಕಾರ್ಯಾಚರಣೆಗೆ ಪಟ್ಟಣದಲ್ಲಿ ಗುರುವಾರ ಕಾಂಗ್ರೆಸ್ ವತಿಯಿಂದ ವಿಜಯೋತ್ಸವ ಆಚರಿಸಲಾಯಿತು.
ಹಳೆ ಬಸ್ ನಿಲ್ದಾಣ ಮುಂಭಾಗ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಕೆಲವು ಸಾರ್ವಜನಿಕರು ವಿಜಯೋತ್ಸವದಲ್ಲಿ ಭಾಗವಹಿಸಿ ಭಾರತೀಯ ಯೋಧರಿಗೆ ಜೈಕಾರ ಹಾಕಿದರು.
ಇದೇ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡ ಹಾಗೂ ತಾಲ್ಲೂಕು ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ಮುರಳಿ ಮೋಹನ್ ಮಾತನಾಡಿ, ‘ಭಾರತದ ವೀರ ಸೈನಿಕರು ದೇಶದ ಗಡಿ ರಕ್ಷಿಸಲು ತ್ಯಾಗಮಯ ಸೇವೆ ಸಲ್ಲಿಸುತ್ತಿದ್ದಾರೆ. ‘ಆಪರೇಷನ್ ಸಿಂಧೂರ್’ ಒಂದು ಗೌರವದ ಸಂಕೇತವಾಗಿದೆ. ನಾವು ಈ ಸಂಭ್ರಮದಲ್ಲಿ ಪಾಲ್ಗೊಳ್ಳುವುದು ಸೈನಿಕರ ಶೌರ್ಯಕ್ಕೆ ನಮಸ್ಕಾರ ಹೇಳುವುದು ಹಾಗೂ ಅವರ ದೇಶದ ನಾಗರಿಕರಾಗಿ ಬೆಂಬಲ ಸೂಚಿಸಬೇಕು’ ಎಂದರು.
ಕೆಪಿಸಿಸಿ ಸದಸ್ಯ ಕೊಲ್ಲಹಳ್ಳಿ ಸಲೀಂ, ಪಕ್ಷದ ಮುಖಂಡರಾದ ಎಚ್.ಎಚ್. ಉದಯ್, ಗೊದ್ದು ಲೋಕೇಶ್, ಬ್ಯಾಕರವಳ್ಳಿ ವಿಜಯ್‌ಕುಮಾರ್, ಪುರಸಭೆ ಮಾಜಿ ಅಧ್ಯಕ್ಷ ಸೈಯದ್ ಮುಫೀಜ್, ಕಾಂಗ್ರೆಸ್ ಮಹಿಳಾ ಘಟಕದ ತಾಲ್ಲೂಕು ಅಧ್ಯಕ್ಷೆ ಅನ್ನಪೂರ್ಣ, ಅಲ್ಪಸಂಖ್ಯಾತರ ತಾಲ್ಲೂಕು ಘಟಕದ ಅಧ್ಯಕ್ಷ ಮೊಹಮ್ಮದ್ ಹನೀಫ್, ಬೈಕೆರೆ ದೇವರಾಜ್, ಗ್ಯಾರಂಟಿ ಸಮಿತಿಯ ಮಮತಾ, ಹಸೀನಾ ಹುರುಡಿ, ವೆಂಕಟೇಶ್, ಕಡಗರವಳ್ಳಿ ಅಶೋಕ್, ಕೌಸಲ್ಯ ಲಕ್ಷ್ಮಣ್ ಗೌಡ, ಪುರಸಭೆ ನಾಮನಿರ್ದೇಶಿತ ಸದಸ್ಯೆ ಬಿಲ್ಕೀಸ್ ರಾಣಿ, ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ರಮೇಶ್ ಹಾಗೂ ಇತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.