ADVERTISEMENT

ಶುಂಠಿ ಬೆಳೆಗೆ ಸಾವಯವ ಪದ್ಧತಿ ರಕ್ಷಣೆ

ಕಳೆ ಕೀಳುವ ಕೂಲಿಗೆ ಲಭಿಸಿತು ಉಪ ಬೆಳೆಯ ಆದಾಯ

ಎಂ.ಪಿ.ಹರೀಶ್
Published 12 ಸೆಪ್ಟೆಂಬರ್ 2020, 2:04 IST
Last Updated 12 ಸೆಪ್ಟೆಂಬರ್ 2020, 2:04 IST
ಸಾವಯವ ಕೃಷಿಯಲ್ಲಿ ತೊಡಗಿರುವ ವಕೀಲ ಎಂ.ಪಿ.ಹರೀಶ್, ದಿವ್ಯಾ ಹರೀಶ್
ಸಾವಯವ ಕೃಷಿಯಲ್ಲಿ ತೊಡಗಿರುವ ವಕೀಲ ಎಂ.ಪಿ.ಹರೀಶ್, ದಿವ್ಯಾ ಹರೀಶ್   

ಆಲೂರು: ವಾಣಿಜ್ಯ ಬೆಳೆಯಾಗಿರುವ ಶುಂಠಿಯನ್ನು ಬಿತ್ತನೆಯಿಂದಲೇ ಕಳೆನಾಶಕ, ಕ್ರಿಮಿನಾಶಕ ಬಳಸಿ ಬೆಳೆಯುಲಾಗುತ್ತದೆ. ಆದರೆ, ಪಾಳ್ಯ ಹೋಬಳಿ ಮೇಗಟವಳ್ಳಿ ಗ್ರಾಮದ ವಕೀಲ, ಕೃಷಿಕ ಎಂ.ಪಿ.ಹರೀಶ್ ಮತ್ತು ವಿದ್ಯಾಹರೀಶ್ ಅವರು ಸಾವಯವ ಪದ್ಧತಿ ಮೂಲಕ ಬೆಳೆ ಬೆಳೆದು ಹೆಚ್ಚು ಇಳಿವರಿ ಪಡೆಯುತ್ತಿದ್ದಾರೆ.

‘ಶುಂಠಿ ಬೆಳೆ ಲಾಟರಿ ಇದ್ದಂತೆ. ರೋಗ ಬಾಧೆ ಅಥವಾ ಮಾರುಕಟ್ಟೆಯಲ್ಲಿ ಬೆಲೆ ಸಿಗದೆ ಬಹುತೇಕ ರೈತರು ಕೈ ಸುಟ್ಟುಕೊಳ್ಳುತ್ತಾರೆ’ ಎಂಬ ಮಾತು ಬೆಳೆಗಾರರ ವಲಯದಲ್ಲಿದೆ.

ಕಾಫಿ ಬೆಳೆಗಾರರಾಗಿರುವ ಎಂ.ಪಿ.ಹರೀಶ್ ದಂಪತಿ, ಗುಣಮಟ್ಟದ ಶುಂಠಿ ಬೆಳೆಯಬೇಕೆಂಬ ನಿಲುವಿನಿಂದ ಎರಡು ಎಕರೆ ಕಾಫಿ ತೋಟದಲ್ಲಿ ಶುಂಠಿ ಬೆಳೆಯಲು ನಿರ್ಧರಿಸಿದರು. ಜಮೀನಿನಲ್ಲಿದ್ದ ಮರ, ಗಿಡಗಳನ್ನು ತೆರವುಗೊಳಿಸುವ ಸಂದರ್ಭ ಸೊಪ್ಪನ್ನು ಮಣ್ಣಿನಲ್ಲಿ ಬೆರೆಸಿ ಭೂಮಿ ಹದ ಮಾಡಿ ಮಣ್ಣಿನ ಆರೋಗ್ಯ ವೃದ್ಧಿಸಿದರು. ಕೊಳವೆ ಬಾವಿ ಬಳಸಿ ಸ್ಪ್ರಿಂಕ್ಲರ್‌ ವ್ಯವಸ್ಥೆ ಮಾಡಿಕೊಂಡರು.

ADVERTISEMENT

ಶುಂಠಿಗೆ ಮಡಿ ಮಾಡಿದ ಕೂಡಲೇ ಕಳೆನಾಶಕ ಸಿಂಪಡಿಸುವುದು ವಾಡಿಕೆ. ಆದರೆ, ಹರೀಶ್‌ ಅವರು ಎರಡು ಎಕರೆ ಮಡಿಯಲ್ಲಿ ಕೊತ್ತಂಬರಿ ಬೀಜ ಬಿತ್ತಿದರು. ಸುಮಾರು 60 ಸಾವಿರ ಕೊತ್ತಂಬರಿ ಸೊಪ್ಪು ಕಟ್ಟು ಮಾರಾಟ ಮಾಡಿ ಬಂದ ಹಣವನ್ನು ಕಳೆ ಕೀಳಲು ಬಳಸಿದರು. ಕೇವಲ ಸಾವಯವ ಗೊಬ್ಬರ ಬಳಸಿ 40 ಚೀಲ ಶುಂಠಿ ಬಿತ್ತನೆ ಮಾಡಿದ್ದಾರೆ. ಬೆಳೆ ಉತ್ತಮವಾಗಿ ಬಂದಿದೆ.

ಹಿಂದಿನ ಕಾಲದಲ್ಲಿ ಕೃಷಿಗೆ ಬಳಸುತ್ತಿದ್ದ ಸ್ಥಳೀಯ ಜಾನುವಾರು ಗೊಬ್ಬರ, ಮರಗಿಡಗಳ ಸೊಪ್ಪನ್ನು ಬಳಸಿಕೊಂಡರೆ ರೋಗರಹಿತ, ಗುಣಮಟ್ಟದ ಬೆಳೆ ಬೆಳೆಯಬಹುದು. ಈಗ ನಾವು ಬೆಳೆದಿರುವ ಶುಂಠಿ ಸುವಾಸನೆ, ಗುಣಮಟ್ಟದಿಂದ ಕೂಡಿದೆ. ಇದನ್ನು ಮುಂದಿನ ದಿನಗಳಲ್ಲಿ ಕೇವಲ ಬೀಜಕ್ಕಾಗಿ ಮಾರಾಟ ಮಾಡುವ ನಿರ್ಧಾರ ಮಾಡಿದ್ದೇನೆ ಎಂದು ಎಂ.ಪಿ.ಹರೀಶ್‌ ತಿಳಿಸಿದರು.

ರಾಸಾಯನಿಕ್ಕೆ ಮಾರು ಹೋಗದೆ, ಸ್ಥಳೀಯವಾಗಿ ದೊರಕುವ ಸೊಪ್ಪು, ಸದಕಲು, ದನಗಳ ಗೊಬ್ಬರ ಬಳಸಿ ಭೂಮಿಯನ್ನು ಫಲವತ್ತಾಗಿಸಿದರೆ ಗುಣಮಟ್ಟದ ಬಳೆ ಬೆಳೆಯಬಹುದು. ನಮ್ಮ ಬೆಳೆಗೆ ಇದುವರೆಗೂ ರೋಗ ಬಾಧಿಸಿಲ್ಲ. ಸುಮಾರು 1,000 ಮೂಟೆ ಇಳುವರಿ ಗಳಿಸುವ ನಂಬಿಕೆ ಇದೆ ಎಂದು ದಿವ್ಯಾ ಹರೀಶ್ ವಿಶ್ವಾಸ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.