ADVERTISEMENT

ಮಹಿಳೆಯರಿಂದ ರಸ್ತೆಯಲ್ಲಿ ಮದ್ಯ ಸುರಿದು ಬೆಂಕಿ ಹಚ್ಚಿ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 8 ನವೆಂಬರ್ 2021, 4:36 IST
Last Updated 8 ನವೆಂಬರ್ 2021, 4:36 IST
ಅಕ್ರಮ ಮದ್ಯವನ್ನು ಗ್ರಾಮಸ್ಥರು ನಾಶ ಮಾಡಿದರು
ಅಕ್ರಮ ಮದ್ಯವನ್ನು ಗ್ರಾಮಸ್ಥರು ನಾಶ ಮಾಡಿದರು   

ಹಾಸನ: ಅಕ್ರಮ ಮದ್ಯ ಮಾರಾಟ ತಡೆಯಲು ದೂರು ನೀಡಿದರೂ, ಪ್ರಯೋಜನವಾಗದ್ದರಿಂದ ಸಿಟ್ಟಿಗೆದ್ದ ಮಹಿಳೆಯರು, ಗ್ರಾಮಕ್ಕೆ ಪೂರೈಕೆ ಮಾಡಲು ತರುತ್ತಿದ್ದ ಸುಮಾರು ₹ 80 ಸಾವಿರ ಮೌಲ್ಯದ ಮದ್ಯವನ್ನು ಭಾನುವಾರ ರಸ್ತೆಗೆ ಸುರಿದು, ಬೆಂಕಿ ಹಚ್ಚಿದ್ದಾರೆ.

ಹೊಳೆನರಸೀಪುರ ತಾಲ್ಲೂಕು ಹಳೇಕೋಟೆ ಹೋಬಳಿಯ ಮಳಲಿ ಗ್ರಾಮದಲ್ಲಿ ಘಟನೆ ನಡೆದಿದೆ. ಸುಮಾರು 500 ಮನೆಗಳಿದ್ದು, 2 ಸಾವಿರ ಜನಸಂಖ್ಯೆ ಇದೆ.

ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿದ್ದ ಗೌಡೇಗೌಡ ಅವರು ಪಂಚಾಯಿತಿ ಮಾಡಿ, ಅಕ್ರಮವಾಗಿ ಮದ್ಯ ಮಾರಿದರೆ ₹ 10 ಸಾವಿರ ದಂಡ ವಿಧಿಸಲಾಗುವುದು ಎಂದು ನಿರ್ಣಯ ಮಾಡಿದ್ದರು. ಹೀಗಾಗಿ, ಗ್ರಾಮದಲ್ಲಿ ಮದ್ಯ ಮಾರಾಟ ಮಾಡುತ್ತಿರಲಿಲ್ಲ. ಆದರೆ, ಅವರ ನಿಧನ ನಂತರ ಗ್ರಾಮದ 30ರಿಂದ 40 ಮನೆಗಳಲ್ಲಿ ನಾಲ್ಕು ತಿಂಗಳಿನಿಂದ ಮದ್ಯ ಮಾರಾಟ ಮಾಡುತ್ತಿದ್ದರು.

ADVERTISEMENT

ಭಾನುವಾರ ಮತ್ತು ಮಂಗಳವಾರ ಇಲ್ಲಿನ ಶಕ್ತಿದೇವತೆ ಲಕ್ಷ್ಮೀದೇವಿ ದೇವಾಲಯಕ್ಕೆ ವಿವಿಧೆಡೆಯಿಂದ ಹೆಚ್ಚು ಜನರು ಬರುತ್ತಿದ್ದುದರಿಂದ ಇದನ್ನೇ ಲಾಭ ಮಾಡಿಕೊಂಡ ಕೆಲವರು ರಸ್ತೆ ಬದಿಯಲ್ಲೇ ಮದ್ಯ ಮಾರಾಟಕ್ಕೆ ಮುಂದಾಗಿದ್ದರು. ಕೆಲವರು ಮನೆಯಲ್ಲಿದ್ದ ಧಾನ್ಯ, ಇತರೆ ವಸ್ತುಗಳನ್ನು ಮಾರಾಟ ಮಾಡಿ ಮದ್ಯ ಸೇವಿಸುತ್ತಿದ್ದರು.

ಅಕ್ರಮ ಮದ್ಯ ಮಾರಾಟಕ್ಕೆ ಕಡಿವಾಣ ಹಾಕಲೇಬೇಕೆಂದು ಭಾನುವಾರ ಪಂಚಾಯಿತಿ ಕರೆಯಲಾಗಿತ್ತು. ಇದೇ ವೇಳೆ ವ್ಯಕ್ತಿಯೊಬ್ಬ ಗ್ರಾಮಕ್ಕೆ ಕದ್ದು ಮದ್ಯ ಪೂರೈಕೆ ಮಾಡುತ್ತಿದ್ದ. ಮಹಿಳೆಯರು ತಡೆಯಲು ಹೋದಾಗ ಮದ್ಯ ಬಿಟ್ಟು ಆತ ಅಲ್ಲಿಂದ ಪರಾರಿಯಾದ. ಕೂಡಲೇ ಅಷ್ಟೂ ಮದ್ಯದ ಪೊಟ್ಟಣಗಳನ್ನು ರಸ್ತೆಗೆ ಸುರಿದು ನಾಶಪಡಿಸಿದರು.

₹ 50 ಸಾವಿರ ದಂಡ

ಪಂಚಾಯಿತಿಯಲ್ಲಿ ಮಹತ್ವದ ನಿರ್ಧಾರ ಕೈಗೊಂಡಿದ್ದು, ಗ್ರಾಮದಲ್ಲಿ ಯಾರಾದರೂ ಅಕ್ರಮವಾಗಿ ಮದ್ಯ ಮಾರಾಟ ಮಾಡಿದರೆ ₹ 50 ಸಾವಿರ ದಂಡ ವಿಧಿಸಲಾಗುತ್ತದೆ. ಜತೆಗೆ ಅಂಥವರ ಮನೆಯಲ್ಲಿ ಯಾವುದೇ ಶುಭ ಕಾರ್ಯ ನಡೆದರೆ ಯಾರೂ ಹೋಗಕೂಡದು ಎಂಬ ನಿರ್ಣಯಕೈಗೊಳ್ಳಲಾಗಿದೆ. ಈ ಸಂಬಂಧ ಆಣೆ, ಪ್ರಮಾಣವನ್ನೂ ಮಾಡಿಸಿಕೊಳ್ಳಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.