ADVERTISEMENT

ನೆಲ ಕಚ್ಚಿದ ಭತ್ತ, ಕೈ ಕೊಟ್ಟ ಕಾಫಿ; ಅಕಾಲಿಕ ಮಳೆಯಿಂದ ಬೆಳೆಗಾರರಿಗೆ ಸಂಕಷ್ಟ

ಕೆ.ಎಸ್.ಸುನಿಲ್
Published 11 ಜನವರಿ 2021, 19:30 IST
Last Updated 11 ಜನವರಿ 2021, 19:30 IST
ಕೊಯ್ಲು ನಡೆಸಿ ಕಣದಲ್ಲಿ ಹಾಕಿದ್ದ ಕಾಫಿ ನೀರಿನಲ್ಲಿ ತೊಯ್ದು ಹಾಳಾಗಿರುವುದು.
ಕೊಯ್ಲು ನಡೆಸಿ ಕಣದಲ್ಲಿ ಹಾಕಿದ್ದ ಕಾಫಿ ನೀರಿನಲ್ಲಿ ತೊಯ್ದು ಹಾಳಾಗಿರುವುದು.   

ಹಾಸನ: ಕಷ್ಟಪಟ್ಟು ಬೆಳೆದಿದ್ದ ಫಸಲು ಇನ್ನೇನು ಕೈಗೆ ಬರುವ ವೇಳೆಗೆ ಅಕಾಲಿಕ ಮಳೆ ರೈತರನ್ನು
ಕಂಗಾಲಾಗಿಸಿದೆ.

ಮೂರು ದಿನಗಳ ಹಿಂದೆ ಸುರಿದ ಮಳೆಗೆ ಅರಕಲಗೂಡು, ಬೇಲೂರು, ಸಕಲೇಶಪುರ ತಾಲ್ಲೂಕಿನಲ್ಲಿ ಕಾಫಿ, ಭತ್ತ, ರಾಗಿ ನೀರಿನಲ್ಲಿ ಮುಳುಗಿ, ಅಪಾರ ಪ್ರಮಾಣದಲ್ಲಿ ಹಾನಿಯಾಗಿದೆ. ‌ರೋಗಬಾಧೆ, ಬೆಲೆ ಕುಸಿತ, ಕಾರ್ಮಿಕರ ಕೊರತೆ, ಕಾಡು ಪ್ರಾಣಿಗಳ ಹಾವಳಿಯಿಂದ ಸಂಕಷ್ಟದಲ್ಲಿದ್ದ ಬೆಳೆಗಾರರನ್ನು ಅಕಾಲಿಕ ಮಳೆ ನಷ್ಟದ ದವಡೆಗೆ ನೂಕಿದೆ.

ಜಿಲ್ಲೆಯಲ್ಲಿ 42,693 ಹೆಕ್ಟೇರ್‌ ಪ್ರದೇಶದಲ್ಲಿ ಭತ್ತ ಬೆಳೆಯಲಾಗಿದ್ದು, ಈಗಾಗಲೇ 38,853 ಹೆಕ್ಟೇರ್ ಬೆಳೆ‌ ಕಟಾವು ಮಾಡಲಾಗಿದೆ. 610 ಹೆಕ್ಟೇರ್‌ಭತ್ತ ಹಾಳಾಗಿದೆ ಎಂದು ಕೃಷಿ ಇಲಾಖೆ ಅಂದಾಜು ಮಾಡಿದೆ.

ADVERTISEMENT

ಹೇಮಾವತಿ, ಕಾವೇರಿ, ಹಾರಂಗಿ ನಾಲಾ ಅಚ್ಚುಕಟ್ಟು ಪ್ರದೇಶಗಳ ಸಾವಿರಾರು ಎಕರೆ ಪ್ರದೇಶದಲ್ಲಿ ಬೆಳೆದ ಭತ್ತದ ಬೆಳೆ ಹಾಳಾಗಿದೆ. ಅಲ್ಲದೇ ರಾಗಿ, ಮುಸುಕಿನ ಜೋಳ, ಕಾಫಿ ಬೆಳೆಗೂ ಹಾನಿಯಾಗಿದೆ.

ಕಟಾವು ಮಾಡಿ ಗದ್ದೆಗಳಲ್ಲಿ ಅರಿ ಹಾಕಿದ್ದ ಭತ್ತದ ಹುಲ್ಲು ಫಸಲು ಸಹಿತ ಜಲಾವೃತಗೊಂಡಿದೆ. ಗದ್ದೆಗಳಲ್ಲಿ ಕೊಯ್ಲು ಮಾಡಿದ ಮತ್ತು ಕಣಕ್ಕೆ ಸಾಗಿಸಲಾದ ಭತ್ತ ಕೂಡ ಸಾಕಷ್ಟು ಹಾನಿಯಾಗಿದೆ. ಭತ್ತದ ಬಣವೆಗಳು ತೊಯ್ದಿರುವ ಕಾರಣ ಭತ್ತದ ಗುಣಮಟ್ಟ ಹಾಳಾಗುವ ಸಂಭವಿದೆ ಎಂದು ರೈತರು ಆತಂಕಗೊಂಡಿದ್ದಾರೆ.

ಎರಡು ದಿನಗಳಿಂದ ಮಳೆ ಬಿಡುವು ನೀಡಿದ್ದರೂ ಗದ್ದೆಗಳಲ್ಲಿ ಒಣಗಿಸಲು ಹಾಕಿದ್ದ ಭತ್ತ ಹುಲ್ಲು ತೊಯ್ದಿದ್ದು ಬಣವೆ ಒಟ್ಟಲು ಸಾಧ್ಯವಾಗದೆ ರೈತರನ್ನು ಹೈರಾಣಾಗಿಸಿದೆ. ಗದ್ದೆಗಳಲ್ಲಿ ಜಲಾವೃತವಾಗಿದ್ದ ಭತ್ತದ ಹುಲ್ಲನ್ನು ಕಣಕ್ಕೆ ಸಾಗಿಸಿ ಒಣಗಿಸಲು ಹರಸಾಸಹ ಪಡುತ್ತಿದ್ದಾರೆ.

ಸಕಲೇಶಪುರ ತಾಲ್ಲೂಕಿನ ಹೆತ್ತೂರು ಹೋಬಳಿ ವನಗೂರು, ಉಚ್ಚಂಗಿ ವ್ಯಾಪ್ತಿಯಲ್ಲಿ ಹೆಚ್ಚು ಹಾನಿ ಸಂಭವಿಸಿದೆ. ರೋಬಾಸ್ಟ್ ಕಾಫಿ ಗಿಡದಲ್ಲಿನ ಸಂಫೂರ್ಣ ಹಣ್ಣು ನೆಲ ಸೇರಿದ್ದರೆ, ಕೊಯ್ಲು ನಡೆಸಿ ಕಣದಲ್ಲಿ ಹಾಕಿದ್ದ ಕಾಫಿ ಕೊಚ್ಚಿ ಹೋಗಿರುವುದರಿಂದ ಭಾರಿ ನಷ್ಟವಾಗಿದೆ.

ಮಳೆ, ಮೋಡ ಮುಸುಕಿದ ವಾತಾವರಣದಿಂದ ಕಾಫಿ ಒಣಗಿಸಲು ಸಾಧ್ಯವಾಗದೆ ಬೆಳೆಗಾರರು ಪರದಾಡುತ್ತಿದ್ದಾರೆ. ಅಕಾಲಿಕ ಮಳೆಯಿಂದ ಕಾಫಿ ಗಿಡಗಳಲ್ಲಿ ಹೂವು ಅರಳುವ ಸಾಧ್ಯತೆ ಇದೆ. ಮತ್ತೊಂದೆಡೆ ಕಾಫಿ ಗಿಡಗಳಿಂದ ಅಪಾರ ಪ್ರಮಾಣದ ಹಣ್ಣುಗಳು ಉದುರಿ ಬಿದ್ದಿರುವುದು ಬೆಳೆಗಾರರನ್ನು ಚಿಂತೆಗೀಡು ಮಾಡಿದೆ.

‘ಒಂದೂವರೆ ಎಕರೆಯಲ್ಲಿ ಬೆಳೆದಿದ್ದ ಭತ್ತ ಅಕಾಲಿಕ ಮಳೆಯಿಂದ ಹಾನಿಯಾಗಿದೆ. ಗದ್ದೆಯಲ್ಲಿ ನೀರು ತುಂಬಿಕೊಂಡು ಹುಲ್ಲು ಮತ್ತು ಭತ್ತವೂ ಹಾಳಾಗಿದೆ. ಬಿಸಿಲು ಇಲ್ಲದೇ ಹುಲ್ಲು ಒಣಗಿಸಲು ಆಗುತ್ತಿಲ್ಲ. ಅಳಿದುಳಿದಿರುವ ಭತ್ತ ಮೊಳಕೆ ಬರಲು ಆರಂಭಿಸಿದ್ದು, ಮನೆಗೆ ಬಳಸಲು ಆಗುವುದಿಲ್ಲ. ಹುಲ್ಲು ಕಪ್ಪಾಗಿ ದನಗಳು ತಿನ್ನಲು ಆಗುವುದಿಲ್ಲ. ಕಾಡಾನೆ ಸಮಸ್ಯೆಯಿಂದ ಬೆಳೆ ಉಳಿಸುಕೊಳ್ಳುವುದೇ ಕಷ್ಟ. ಇಂತಹ ಸಂದರ್ಭದಲ್ಲಿ ಮಳೆಯಿಂದ ಬೆಳೆ ಹಾನಿಯಾಗಿದೆ. ಸರ್ಕಾರ ಪರಿಹಾರ ನೀಡಬೇಕು’ ಎಂದು ಆಲೂರು ತಾಲ್ಲೂಕಿನ ಹೈದೂರು ಗ್ರಾಮದ ರೈತ ಜಯಣ್ಣ ಮನವಿ ಮಾಡಿದರು.

‘ಮಳೆಯಿಂದ ಹಾನಿಗೀಡಾಗಿರುವ ಭತ್ತದ ಬೆಳೆ ಬಗ್ಗೆ ಒಂದು ಅಂದಾಜು ಮಾಡಲಾಗಿದೆ. ನಿಖರ ಸಮೀಕ್ಷೆ ನಡೆಸಿಲ್ಲ. ಪರಿಹಾರ ನೀಡುವ ಬಗ್ಗೆ ಸರ್ಕಾರ ನಿರ್ಧಾರ ಕೈಗೊಳ್ಳಲಿದೆ. ಹೊಳೆನರಸೀಪುರ, ಅರಕಲಗೂಡು, ಸಕಲೇಶಪುರ ಭಾಗದಲ್ಲಿ ಭತ್ತದ ಬೆಳೆ ಹಾನಿಯಾಗಿದೆ’ ಎಂದುಕೃಷಿ ಜಂಟಿ ನಿರ್ದೇಶಕ ರವಿ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.