ನುಗ್ಗೇಹಳ್ಳಿ: ಹೋಬಳಿ ಕೇಂದ್ರದ ಶ್ರೀ ಪಂಚಲಿಂಗೇಶ್ವರ ಧರ್ಮಸ್ಥಳ ಪಾದಯಾತ್ರಿಗಳ ಸೇವಾ ಸಮಿತಿ ವತಿಯಿಂದ ಮಹಾಶಿವರಾತ್ರಿ ಅಂಗವಾಗಿ 12ನೇ ವರ್ಷದ ಪಾದಯಾತ್ರೆ ಕೈಗೊಳ್ಳಲಾಗಿದೆ.
ಗ್ರಾಮದ ಪುರಾಣ ಪ್ರಸಿದ್ಧ ಕಲ್ಯಾಣಿ ಆಂಜನೇಯ ಸ್ವಾಮಿ ದೇವಾಲಯದಲ್ಲಿ ಆಂಜನೇಯ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ಪಾದಯಾತ್ರೆ ಆರಂಭಿಸಲಾಯಿತು.
ಪಾದಯಾತ್ರೆ ಸೇವಾ ಸಮಿತಿ ಅಧ್ಯಕ್ಷ ಎನ್.ಸಿ. ರಾಮಕೃಷ್ಣ ( ಹೋಟೆಲ್ ರಾಜಣ್ಣ ) ಮಾತನಾಡಿ, ಕಳೆದ 12 ವರ್ಷಗಳಿಂದ ಸೇವಾ ಸಮಿತಿ ವತಿಯಿಂದ ಪಾದಯಾತ್ರೆ ಕೈಗೊಳ್ಳಲಾಗುತ್ತಿದ್ದು, ಈ ಬಾರಿಯ ಪಾದಯಾತ್ರೆಗೆ ಸುಮಾರು 150ಕ್ಕೂ ಹೆಚ್ಚು ಜನರು ಹೆಸರನ್ನು ನೋಂದಾಯಿಸಿದ್ದಾರೆ. ಸುಮಾರು ಆರು ದಿನಗಳ ಕಾಲ ಪಾದಯಾತ್ರೆಯನ್ನು ಕೈಗೊಂಡು ಶ್ರೀ ಕ್ಷೇತ್ರ ಧರ್ಮಸ್ಥಳ ತಲುಪಿ ಮಹಾಶಿವರಾತ್ರಿ ದಿನ ಮಹಾಪೂಜೆಯಲ್ಲಿ ಪಾಲ್ಗೊಳ್ಳಲಾಗುವುದು. ಸೇವಾ ಸಮಿತಿ ವತಿಯಿಂದ ಪಾದಯಾತ್ರಿಗಳ ಸುರಕ್ಷತೆಗೆ ಹೆಚ್ಚು ಗಮನಹರಿಸಲಾಗಿದೆ ಎಂದರು.
ಪಾದಯಾತ್ರೆಯಲ್ಲಿ ಪಾಲ್ಗೊಳ್ಳುವ ಭಕ್ತರಿಗೆ ಹೆಚ್ಚಿನ ಸಹಕಾರ ಸೇವೆ ನೀಡುತ್ತಿರುವ ಶಾಂತಿಗ್ರಾಮ ಸಮೀಪದ ಕಾರೇಕೆರೆ ಗೇಟ್ ನ ಶೇಖರ್ ದಂಪತಿಗಳನ್ನು ಸನ್ಮಾನಿಸಲಾಯಿತು. ಪಾದಯಾತ್ರೆಯ ಅನ್ನ ದಾಸೋಹ ಕಾರ್ಯಕ್ಕೆ ಅನುಕೂಲವಾಗಲೆಂದು ವಾಹನದ ವ್ಯವಸ್ಥೆಯನ್ನು ನುಗ್ಗೇಹಳ್ಳಿ ಗ್ರಾಮದ ವಿನಯ್ ಮಾಡಿದರು. ಭಕ್ತರಿಗೆ ಆರೋಗ್ಯದ ಸುರಕ್ಷತೆಗಾಗಿ ಚನ್ನರಾಯಪಟ್ಟಣ ಸಾರ್ವಜನಿಕ ಆಸ್ಪತ್ರೆ ವೈದ್ಯ ಡಾ. ರವಿ ಔಷಧಿ ನೀಡಿದ್ದಾರೆ.
ಪಾದಯಾತ್ರೆ ಸೇವಾ ಸಮಿತಿ ಉಪಾಧ್ಯಕ್ಷ ಮುದ್ದನಹಳ್ಳಿ ರಾಜಣ್ಣ, ಕಾರ್ಯದರ್ಶಿ ಬೆಳಗುಲಿ ದೊಡ್ಡೇಗೌಡ್ರು, ಖಜಾಂಚಿ ವಿಮಲ್ ಸೆಟ್, ಗೌರವ ಅಧ್ಯಕ್ಷರಾದ ಎನ್.ಎಸ್. ಗಿರೀಶ್, ರವಿಶಾಚಾರ್, ವಿಜಯಲಕ್ಷ್ಮಿ ಜಗದೀಶ್, ಸಮಿತಿಯ ಸದಸ್ಯರಾದ ಮೈಕ್ ಸೆಟ್ ಕೃಷ್ಣ, ಗಣೇಶ್ ಯಾದವ್, ಲೋಕೇಶ್, ಮಹೇಶ್, ಒಂಟಿ ಮಾವಿನಹಳ್ಳಿ ಮಂಜಣ್ಣ, ಸುನಿಲ್, ಸ್ವಾಮಿ ಸಂತೇ ಶಿವರ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.