ADVERTISEMENT

ನಿರಂತರ ಭೂ ಕುಸಿತ: ಪ್ರಯಾಣಿಕರ ಪರದಾಟ

ಅವೈಜ್ಞಾನಿಕ ಹಾಸನ–ಹೆಗ್ಗದ್ದೆ ಕಾಮಗಾರಿಯಿಂದ ಶುರುವಾದ ಸಮಸ್ಯೆಗಳ ಸರಣಿ

ಜಾನೆಕೆರೆ ಆರ್‌.ಪರಮೇಶ್‌
Published 23 ಜುಲೈ 2022, 19:30 IST
Last Updated 23 ಜುಲೈ 2022, 19:30 IST
   

ಸಕಲೇಶಪುರ: ಬೆಂಗಳೂರು–ಮಂಗಳೂರು ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ–75 ರಲ್ಲಿ ವಾಹನಗಳು ಸರಿಯಾಗಿಯೇ ಸಂಚರಿಸುತ್ತಿದ್ದವು. ಐದು ವರ್ಷಗಳ ಹಿಂದೆ ಯಾವುದೇ ಸಮಸ್ಯೆಗಳೂ ಉದ್ಭವಿಸಿರಲಿಲ್ಲ. ಆದರೆ, ಯಾವಾಗ ಚತುಷ್ಟಥ ಹೆದ್ದಾರಿ ಕಾಮಗಾರಿ ಶುರುವಾಯಿತೋ, ಭೂಕುಸಿತ, ಹೊಂಡಗುಂಡಿಗಳ ಸಮಸ್ಯೆಗಳು ಶುರುವಾದವು ಎನ್ನುವ ಆರೋಪ ಜನರಿಂದ ಕೇಳಿ ಬರುತ್ತಿದೆ.

ಹಾಸನದಿಂದ– ಹೆಗ್ಗದ್ದೆ ವರೆಗೆ 45 ಕಿ.ಮೀ. ಬೆಂಗಳೂರು–ಮಂಗಳೂರು ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ಕಾಮಗಾರಿ ಪ್ರಾರಂಭವಾಗುವ ಮೊದಲು, ರಸ್ತೆ ಅಲ್ಲಲ್ಲಿ ಗುಂಡಿ ಹೊರತುಪಡಿಸಿದರೆ, ಭೂ ಕುಸಿತ, ರಸ್ತೆ ಬಂದ್‌ನಂತಹ ಸಮಸ್ಯೆಗಳು ಉದ್ಭವಿಸಿರಲಿಲ್ಲ. 2017 ರಲ್ಲಿ ಚತುಷ್ಪಥ ಕಾಮಗಾರಿ ಶುರುವಾದ ವರ್ಷದಿಂದ ಈ ಹೆದ್ದಾರಿಗೆ ಒಂದಿಲ್ಲೊಂದು ಸಮಸ್ಯೆಗಳು ಎದುರಾಗುತ್ತಲೇ ಇವೆ.

ಹಾಸನದಿಂದ ಹೆಗ್ಗದ್ದೆವರೆಗೆ ರಸ್ತೆ ಬದಿ ಇದ್ದ ಸಾಲು ಮರಗಳನ್ನು ಕತ್ತರಿಲಾಯಿತು. 2018 ರಿಂದ ಆನೇಮಹಲ್‌– ದೊಡ್ಡತಪ್ಪಲೆವರೆಗೆ ರಸ್ತೆ ವಿಸ್ತರಣೆಗೆ 90 ಡಿಗ್ರಿಯಲ್ಲಿ ಭೂಮಿಯನ್ನು ಬಗೆಯಲಾಯಿತು. ನಾಲ್ಕು ವರ್ಷಗಳಿಂದ ಇದುವರೆಗೂ ಭೂಮಿ ಬಗೆದಿರುವ ಯಾವುದೇ ಸ್ಥಳದಲ್ಲಿ ತಡೆಗೋಡೆ ನಿರ್ಮಾಣ ಮಾಡಲಿಲ್ಲ. ಇದರ ಪರಿಣಾಮ ಪ್ರತಿ ವರ್ಷ ಆನೇಮಹಲ್‌ನಿಂದ ದೊಡ್ಡತಪ್ಪಲೆವರೆಗೆ ಹೆದ್ದಾರಿ ಬದಿ ಭೂ ಕುಸಿತ ಮುಂದುವರಿಯುತ್ತಲೇ ಇದೆ. ಇದರಿಂದಾಗಿ ಅಪಘಾತ, ಸಾವು, ಸಂಚಾರ ನಿರ್ಬಂಧ ಸೇರಿದಂತೆ ಜನರು ನಿರಂತರವಾಗಿ ಸಮಸ್ಯೆ ಅನುಭವಿಸುವಂತಾಗಿದೆ ಎಂದು ಪ್ರಯಾಣಿಕರು ದೂರುತ್ತಿದ್ದಾರೆ.

ADVERTISEMENT

ಒಂದೆಡೆ ಅಗೆದು ಬಿಟ್ಟಿರುವ ಭೂಮಿ, ಇನ್ನೊಂದೆಡೆ ಮಂಜರಾಬಾದ್‌ ಕೋಟೆ ಗುಡ್ಡದಿಂದ ಹಳ್ಳದಂತೆ ಹರಿಯುವ ಮಳೆ ನೀರು. ಇದರಿಂದಾಗಿ ಸುಮಾರು 100 ಅಡಿ ಆಳದ ಗುಂಡಿಯಲ್ಲಿ ಮಳೆ ನೀರು ಕೆರೆಯಂತೆ ಈಗಲೂ ನಿಂತಿದೆ. ಇದರಿಂದ ರಸ್ತೆಯಲ್ಲಿ ತೇವಾಂಶ ಹೆಚ್ಚಾಗುತ್ತಿದ್ದು, ಒಂದೆಡೆ ಹೆದ್ದಾರಿ ಭೂ ಕುಸಿತ, ಮತ್ತೊಂದೆಡೆ ಹಾಕಿದ್ದ ಮಣ್ಣು ಕೊಚ್ಚಿಹೋಗಿದೆ. ತೆಗ್ಗು ಪ್ರದೇಶದಲ್ಲಿ ಸುಮಾರು 30 ಎಕರೆಗೂ ಹೆಚ್ಚು ಭತ್ತದ ಗದ್ದೆಗಳ ಮೇಲೆ ಮೂರು ನಾಲ್ಕು ಅಡಿ ಮಣ್ಣು ತುಂಬಿಕೊಂಡು ಬೆಳೆ, ಭತ್ತದ ಗದ್ದೆ, ಕಾಫಿ ತೋಟ ಕೂಡ ನಾಶವಾಯಿತು.

2020 ರಿಂದ 2022 ರವರೆಗೆ ಬೇಸಿಗೆಯಲ್ಲಿ ತಡೆಗೋಡೆ ಕಾಮಗಾರಿ ಮಾಡದೇ ಇರುವುದರಿಂದ ಪ್ರತಿ ಮಳೆಗಾಲದಲ್ಲಿ ದೋಣಿಗಾಲ್‌, ದೊಡ್ಡತಪ್ಪಲೆಯಲ್ಲಿ ಹೆದ್ದಾರಿ ಭೂ ಕುಸಿತ ಹೆಚ್ಚಾಗುತ್ತಲೇ ಇದೆ. ರಾಜಧಾನಿ ಕರಾವಳಿ ನಡುವಿನ ಜೀವನಾಡಿಯಾದ ಈ ರಾಷ್ಟ್ರೀಯ ಹೆದ್ದಾರಿಯಲ್ಲಿ ತಿಂಗಳುಗಟ್ಟಲೆ ವಾಹನಗಳ ಸಂಚಾರ ಬಂದ್ ಮಾಡಲಾಗುತ್ತಿದ್ದು, ಲಕ್ಷಾಂತರ ಪ್ರಯಾಣಿಕರಿಗೆ ಹಾಗೂ ಸರಕು ಸಾಗಿಸುವ ಲಾರಿ ಚಾಲಕರು ಹಾಗೂ ಮಾಲೀಕರಿಗೆ ಗಾಯದ ಮೇಲೆ ಬರೆ ಎಳೆದಂತಾಗುತ್ತಿದೆ.

ರಾಜ್‌ಕಮಲ್‌ ಬಿಲ್ಡರ್ಸ್ ಮಾಡುತ್ತಿರುವ ಕಳಪೆ ಕಾಮಗಾರಿಯಿಂದಲೇ ಹಾಸನದಿಂದ ಬಾಳ್ಳುಪೇಟೆವರೆಗಿ ಕಾಂಕ್ರೀಟ್‌ ರಸ್ತೆಯಲ್ಲಿ ಉದ್ಘಾಟನೆಗೂ ಮೊದಲೇ ಗುಂಡಿ ಬಿದ್ದು ಹಾಳಾಗಿದೆ. ಇದನ್ನು ಸ್ವತಃ ಲೋಕೋಪಯೋಗಿ ಸಚಿವ ಸಿ.ಸಿ. ಪಾಟೀಲರೇ ನೋಡಿ ಹೋಗಿದ್ದಾರೆ.

6 ದಿನ ಮಣ್ಣಿನಲ್ಲಿ ಹೂತಿದ್ದ ಶವಗಳು

ಅವೈಜ್ಞಾನಿಕ ಕಾಮಗಾರಿಯಿಂದ ಅಪಘಾತಗಳು ಸಂಭವಿಸುತ್ತಲೇ ಇವೆ. 90 ಡಿಗ್ರಿ ಭೂಮಿ ಅಗೆದು, ತಡೆಗೋಡೆ ನಿರ್ಮಾಣ ಮಾಡದೇ ಇರುವುದರಿಂದ 2018ರಲ್ಲಿ ದೊಡ್ಡ ಪ್ರಮಾಣದ ಭೂಕುಸಿತ ಆಗಿತ್ತು.

ದೊಡ್ಡತಪ್ಪಲೆ ಬಳಿ ಹೆದ್ದಾರಿಯಲ್ಲಿ ಚಲಿಸುತ್ತಿದ್ದ ಟ್ಯಾಂಕರ್‌ ಮೇಲೆ 200 ಅಡಿ ಎತ್ತರದಿಂದ, ಇಡೀ ಗುಡ್ಡವೇ ಕುಸಿದು ಟ್ಯಾಂಕರ್ ಮೇಲೆ ಬಿದ್ದಿತ್ತು. ಟ್ಯಾಂಕರ್ ಸುಮಾರು 300 ಅಡಿ ಆಳದ ನೀರು ತುಂಬಿದ ಗುಂಡಿಯೊಳಗೆ ಹೂತುಹೋಗಿತ್ತು. 6 ದಿನಗಳ ನಂತರ ಚಾಲಕ ಹಾಗೂ ಕ್ಲೀನರ್‌ ಮೃತದೇಹ ಪತ್ತೆಯಾಗಿತ್ತು.

ನಂತರ ದೋಣಿಗಾಲ್‌ನಲ್ಲಿ ಹೆದ್ದಾರಿ ನಿರಂತರ ಕುಸಿಯುತ್ತಲೇ ಸಾಗಿದೆ. ಈ ಸ್ಥಳದಲ್ಲಿ ಒಂದು ತಿರುವು ತಪ್ಪಿಸಿ, ನೇರ ರಸ್ತೆ ಮಾಡಲು ತಡೆಗೋಡೆ ನಿರ್ಮಾಣ ಮಾಡಿಲ್ಲ. ಅವೈಜ್ಞಾನಿಕವಾಗಿ ಸಾವಿರಾರು ಲೋಡ್‌ ಮಣ್ಣು ಸುರಿಯಲಾಗಿದೆ. ಅದೂ ವ್ಯರ್ಥವಾಗಿದೆ ಎಂದು ಸ್ಥಳೀಯರು ದೂರುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.