ADVERTISEMENT

ಖಾಸಗಿ ವಾಹನಗಳ ಮೊರೆ ಹೋದ ಜನ

ಮುಂದುವರೆದ ಸಾರಿಗೆ ನೌಕರರ ಪ್ರತಿಭಟನೆ: ತಪ್ಪದ ಪ್ರಯಾಣಿಕರ ಪರದಾಟ

​ಪ್ರಜಾವಾಣಿ ವಾರ್ತೆ
Published 14 ಡಿಸೆಂಬರ್ 2020, 6:39 IST
Last Updated 14 ಡಿಸೆಂಬರ್ 2020, 6:39 IST
ಹಾಸನ ನಗರದ ಕೆ.ಎಸ್‌.ಆರ್‌.ಟಿ.ಸಿ ಬಸ್‌ ನಿಲ್ದಾಣದ ಎದುರು ಮೈಸೂರಿಗೆ ಹೋಗಲು ಖಾಸಗಿ ವಾಹನ ಹತ್ತುತ್ತಿರುವ ಪ್ರಯಾಣಿಕರು
ಹಾಸನ ನಗರದ ಕೆ.ಎಸ್‌.ಆರ್‌.ಟಿ.ಸಿ ಬಸ್‌ ನಿಲ್ದಾಣದ ಎದುರು ಮೈಸೂರಿಗೆ ಹೋಗಲು ಖಾಸಗಿ ವಾಹನ ಹತ್ತುತ್ತಿರುವ ಪ್ರಯಾಣಿಕರು   

ಹಾಸನ: ಸಾರಿಗೆ ನೌಕರರನ್ನು ಸರ್ಕಾರಿ ನೌಕರರೆಂದು ಪರಿಗಣಿಸಬೇಕು ಎಂದು ಆಗ್ರಹಿಸಿ ನಡೆಸುತ್ತಿರುವ ಮುಷ್ಕರ ಮೂರನೇ ದಿನವೂ ಮುಂದುವರೆ ದಿದ್ದರಿಂದ ಪ್ರಯಾಣಿಕರು ಖಾಸಗಿ ವಾಹನಗಳಲ್ಲಿ ಪ್ರಯಾಣಿಸಿದರು.

ಭಾನುವಾರವೂ ನಗರದ ಕೆೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣ ನಿರ್ಜನ ಪ್ರದೇಶದಂತೆ ಭಣಗುಡುತ್ತಿತ್ತು. ಯಾವುದೇ ಅಹಿತಕರ ಘಟನೆ ನಡೆಯದಂತೆ ಬಸ್‌ ನಿಲ್ದಾಣದ ಪ್ರವೇಶ ದ್ವಾರದಲ್ಲಿ ಪೊಲೀಸರು ಬ್ಯಾರಿಕೇಡ್‌ಗಳನ್ನು ಇಟ್ಟು ಬಸ್‌ ನಿಲ್ದಾಣದ ಒಳಕ್ಕೆ ಸಾರ್ವಜನಿಕ ಪ್ರವೇಶವನ್ನು ನಿಷೇಧಿಸಲಾಗಿತ್ತು. ಅನಿವಾರ್ಯವಾಗಿ ಬೆಂಗಳೂರು, ಮಂಗಳೂರು ಹಾಗೂ ಮೈಸೂರಿಗೆ ಹೋಗಬೇಕಾದವರು ಖಾಸಗಿ ಬಸ್‌ಗಳಿಗೆ ದುಪ್ಪಟ್ಟು ಹಣ ನೀಡಿ ಪ್ರಯಾಣಿಸಿದರು.

‘ನನ್ನ ಪತ್ನಿ ಮೈಸೂರಿನಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ. ಅವರು ಇಂದು ಆಸ್ಪತ್ರೆಯಿಂದ ಬಿಡುಗಡೆ ಯಾಗಿದ್ದು, ನಾನು ಅನಿವಾರ್ಯವಾಗಿ ಮೈಸೂರಿಗೆ ಹೋಗಲೇಬೇಕಿದೆ. ಸಾರಿಗೆ ಬಸ್‌ ಇಲ್ಲದ ಕಾರಣ ಖಾಸಗಿ ಬಸ್‌ಗೆ ದುಪ್ಪಟ್ಟು ಹಣ ಕೊಡಬೇಕಿದೆ. ಕೋವಿಡ್‌ ಲಾಕ್‌ಡೌನ್‌ನಿಂದ ಸಾಕಷ್ಟು ನಷ್ಟದಲ್ಲಿರುವ ನಾವು ಈ ರೀತಿ ಹೆಚ್ಚು ಹಣ ಕೊಡುವುದು ಕಷ್ಟವಾಗುತ್ತಿದೆ’ ಎಂದು ಹಾಸನದ ನಿವಾಸಿ ನಾಗರಾಜು ಸಂಕಟ ಹೇಳಿಕೊಂಡರು.

ADVERTISEMENT

‘ಧರ್ಮಸ್ಥಳದಿಂದ ಹಾಸನಕ್ಕೆ ಒಬ್ಬರಿಗೆ ₹ 500 ಕೊಟ್ಟು ಹಾಸನಕ್ಕೆ ಬಂದಿದ್ದೇವೆ. ಇಲ್ಲಿಂದ ಹೊಳೆನರಸೀ ಪುರಕ್ಕೆ ಹೋಗಬೇಕಿದ್ದು, ಯಾವುದೇ ಬಸ್‌ ವ್ಯವಸ್ಥೆ ಇಲ್ಲ. ಸಾರಿಗೆ ನೌಕರರ ಮುಷ್ಕರದಿಂದ ಸಾರ್ವಜನಿಕರಿಗೆ ತುಂಬಾ ತೊಂದರೆ ಆಗುತ್ತಿದ್ದು, ಸರ್ಕಾರ ಕೂಡಲೇ ಅವರ ಭರವಸೆ ಈಡೇರಿಸಿದರೆ ಒಳಿತು’ ಎಂದು ಹೊಳೆನರಸೀಪುರದ ಹರೀಶ್‌ ಮನವಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.