ADVERTISEMENT

ಡಾಂಬರೀಕರಣ ನಿಲ್ಲಿಸಿದ ಜನತೆ

ಕಳಪೆ ಕಾಮಗಾರಿ: ಗ್ರಾಮಸ್ಥರ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 23 ಡಿಸೆಂಬರ್ 2018, 17:30 IST
Last Updated 23 ಡಿಸೆಂಬರ್ 2018, 17:30 IST
ರಾಮನಾಥಪುರ ಹೋಬಳಿಯ ಹಂಪಾಪುರ- ಮಲ್ಲಿನಾಥಪುರ ನಡುವಿನ ರಸ್ತೆಗೆ ಕಳಪೆ ಡಾಂಬರು ಹಾಕಿರುವುದನ್ನು ಗ್ರಾಮಸ್ಥರು ತೋರಿಸಿದರು
ರಾಮನಾಥಪುರ ಹೋಬಳಿಯ ಹಂಪಾಪುರ- ಮಲ್ಲಿನಾಥಪುರ ನಡುವಿನ ರಸ್ತೆಗೆ ಕಳಪೆ ಡಾಂಬರು ಹಾಕಿರುವುದನ್ನು ಗ್ರಾಮಸ್ಥರು ತೋರಿಸಿದರು   

ಕೊಣನೂರು: ರಸ್ತೆ ಡಾಂಬರೀಕರಣ ಕಳಪೆಯಿಂದ ಕೂಡಿದೆ ಎಂದು ಆರೋಪಿಸಿದ ಗ್ರಾಮಸ್ಥರು ಕಾಮಗಾರಿಯನ್ನು ಸ್ಥಗಿತಗೊಳಿಸಿದರು.

ರಾಮನಾಥಪುರ ಹೋಬಳಿಯ ಮಲ್ಲಿನಾಥಪುರದಿಂದ ಹಂಪಾಪುರಕ್ಕೆ ತೆರಳುವ 6 ಕಿ.ಮೀ. ರಸ್ತೆ ಡಾಂಬರೀಕರಣ ಮಾಡಲಾಗುತ್ತಿದೆ. ಈಗಾಗಲೇ ಮಾಡಿದ 2 ಕಿ.ಮೀ. ಡಾಂಬರೀಕರಣ ಕಾಮಗಾರಿ ಅತ್ಯಂತ ಕಳಪೆಯಾಗಿದೆ. ಕಾಲಿನಿಂದ ಒದ್ದರೆ ಡಾಂಬರು ಕಿತ್ತು ಬರುತ್ತಿದ್ದು ರಸ್ತೆಯು ಹೆಚ್ಚು ಕಾಲ ಬಾಳಿಕೆ ಬರುವುದಿಲ್ಲವೆಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.

ಕಳಪೆ ಡಾಂಬರೀಕರಣ ಕಾಮಗಾರಿಗೆ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಗಮನಹರಿಸದೆ ಗುತ್ತಿಗೆದಾರರಿಗೆ ಸಹಕರಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ ಗ್ರಾಮಸ್ಥರು, ಗುಣಮಟ್ಟದ ಕಾಮಗಾರಿ ಕೈಗೊಳ್ಳುವ ತನಕ ಕಾಮಗಾರಿ ಮುಂದುವರೆಸಲು ಅವಕಾಶ ನೀಡುವುದಿಲ್ಲ ಎಂದು ಎಚ್ಚರಿಕೆ ನೀಡಿದರು.

ADVERTISEMENT

ಮಲ್ಲಿನಾಥಪುರದಿಂದ ಹಂಪಾಪುರ ಗ್ರಾಮಕ್ಕೆ ಹಾದು ಹೋಗಿರುವ ರಸ್ತೆ ಹದಗೆಟ್ಟು ಹೋಗಿತ್ತು. ಎ.ಮಂಜು ಸಚಿವರಾಗಿದ್ದಾಗ ₹ 4 ಕೋಟಿ ಅನುದಾನ ಮಂಜೂರು ಮಾಡಲಾಗಿತ್ತು. ಡಾಂಬರೀಕರಣಕ್ಕಾಗಿ ಬಳಸಲು 6 ಲಾರಿಗಳಿಂದ ತರುತ್ತಿದ್ದ ಕಳಪೆ ಡಾಂಬರನ್ನು ತಡೆದು ಗ್ರಾಮಸ್ಥರು ವಾಪಸ್ ಕಳುಹಿಸಿ ಕಾಮಗಾರಿ ಸ್ಥಗಿತಗೊಳಿಸಿದರು.

ಅನೇಕ ವರ್ಷಗಳಿಂದ ಗುಂಡಿಬಿದ್ದು ರಸ್ತೆಯಲ್ಲಿ ಸಂಚರಿಸಲು ಹರಸಾಹಸ ಪಡಬೇಕಾಗಿತ್ತು. ಮಳೆಗಾಲದ್ದಲ್ಲಂತೂ ವಾಹನ ಸವಾರರ ಪಾಡು ಹೇಳತೀರದಾಗಿತ್ತು. ಕಾಮಗಾರಿ ಆರಂಭವಾಯಿತು ಎಂಬ ಖುಷಿಯೂ ಇಲ್ಲದಾಗಿದೆ ಎಂದು ಗ್ರಾಮಸ್ಥರು ಬೇಸರ ವ್ಯಕ್ತಪಡಿಸಿದರು.

ರಾಮನಾಥಪುರ– ಹಂಪಾಪುರ ನಡುವೆ ಮುಖ್ಯ ಸಂಪರ್ಕ ರಸ್ತೆಯು ಇದಾಗಿದ್ದು ಗುಣಮಟ್ಟದ ಡಾಂಬರೀಕರಣಕ್ಕೆ ಸಂಬಂಧಪಟ್ಟವರು ಗಮನಹರಿಸಬೇಕು ಎಂದು ಗ್ರಾ.ಪಂ ಮಾಜಿ ಅಧ್ಯಕ್ಷ ಕುಮಾರ್ ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.